Home » News » ಮೋದಿ ಹೇಳಿಕೆಗೆ ವಿಪಕ್ಷಗಳ ಟೀಕೆ ರಾಜಕೀಯ ಪ್ರೇರಿತ..! ದೇಶದ ಆರ್ಥಿಕ ಹಿತದೃಷ್ಟಿಯಿಂದ ಮಾಡಿದ ಮನವಿಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ: ಸಿ.ಸಿ.ಪಾಟೀಲ..

ಮೋದಿ ಹೇಳಿಕೆಗೆ ವಿಪಕ್ಷಗಳ ಟೀಕೆ ರಾಜಕೀಯ ಪ್ರೇರಿತ..! ದೇಶದ ಆರ್ಥಿಕ ಹಿತದೃಷ್ಟಿಯಿಂದ ಮಾಡಿದ ಮನವಿಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ: ಸಿ.ಸಿ.ಪಾಟೀಲ..

by CityXPress
0 comments

ಗದಗ:
ದೇಶದಲ್ಲಿ ಭವಿಷ್ಯದಲ್ಲಿ ವಿದೇಶಿ ವಿನಿಮಯ ಕೊರತೆ ಉಂಟಾಗಬಾರದು ಎಂಬ ದೂರದೃಷ್ಟಿಯಿಂದಲೇ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಅನಾವಶ್ಯಕ ಚಿನ್ನ ಖರೀದಿ ಕಡಿಮೆ ಮಾಡುವಂತೆ ಹಾಗೂ ಪೆಟ್ರೋಲ್-ಡೀಸೆಲ್ ಬಳಕೆಯನ್ನು ಮಿತಿಗೊಳಿಸುವಂತೆ ಮನವಿ ಮಾಡಿದ್ದಾರೆ.

ವರದಿ: ಮಹಲಿಂಗೇಶ್ ಹಿರೇಮಠ. ಗದಗ

ಆದರೆ ಅದನ್ನು ಆದೇಶ ಎಂದು ಬಿಂಬಿಸಿ ವಿರೋಧ ಪಕ್ಷಗಳು ಟೀಕೆಗೆ ಮುಂದಾಗಿರುವುದು ರಾಜಕೀಯ ಪ್ರೇರಿತ ನಡೆ ಎಂದು ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ.ಪಾಟೀಲ ವಾಗ್ದಾಳಿ ನಡೆಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರಧಾನಿ ಮೋದಿ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಭವಿಷ್ಯದ ಹಣಕಾಸು ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಜವಾಬ್ದಾರಿಯುತ ಬಳಕೆಯ ಕುರಿತು ಮನವಿ ಮಾಡಿದ್ದಾರೆ. ಇದು ಯಾವುದೇ ಕಠಿಣ ನಿಯಮ ಅಥವಾ ಆದೇಶವಲ್ಲ. ದೇಶದ ಒಳಿತಿಗಾಗಿ ನೀಡಿದ ಸಲಹೆ ಮಾತ್ರ” ಎಂದು ಸ್ಪಷ್ಟಪಡಿಸಿದರು.

banner

“ಯುದ್ಧ ಪರಿಸ್ಥಿತಿ ಅಥವಾ ಅಂತರಾಷ್ಟ್ರೀಯ ಆರ್ಥಿಕ ಅಸ್ಥಿರತೆ ಉಂಟಾದಾಗ ದೇಶದ ವಿದೇಶಿ ವಿನಿಮಯ ಸಂಗ್ರಹದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಚಿನ್ನದ ಅತಿಯಾದ ಆಮದು ಹಾಗೂ ಇಂಧನ ಬಳಕೆ ದೇಶದ ಆರ್ಥಿಕ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಮೋದಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ” ಎಂದು ಹೇಳಿದರು.

ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಸಿ.ಸಿ.ಪಾಟೀಲ, “ರಾಹುಲ್ ಗಾಂಧಿ ಮೋದಿ ಹೇಳಿಕೆಯನ್ನು ಟೀಕಿಸುವುದು ಹೊಸ ವಿಷಯವಲ್ಲ. ಅವರ ಟೀಕೆಯನ್ನು ಜನರು ಗಂಭೀರವಾಗಿ ಪರಿಗಣಿಸುವ ಪರಿಸ್ಥಿತಿ ಇಲ್ಲ. ಆದರೆ ಆರ್ಥಿಕ ತಜ್ಞ ಮುಖ್ಯಮಂತ್ರಿ ಎಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಕೂಡ ಇದೇ ವಿಷಯದಲ್ಲಿ ಟೀಕೆಗೆ ಇಳಿದಿರುವುದು ಆಶ್ಚರ್ಯಕರ ಮತ್ತು ನೋವುಂಟು ಮಾಡುವ ಸಂಗತಿ” ಎಂದು ಹೇಳಿದರು.

“ರಾಜಕೀಯ ವಿರೋಧ ಇರಬಹುದು. ಆದರೆ ರಾಷ್ಟ್ರೀಯ ಹಿತಾಸಕ್ತಿಯ ವಿಚಾರದಲ್ಲೂ ವಿರೋಧ ಪಕ್ಷಗಳು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಮಾಡುತ್ತಿರುವುದು ಕೀಳುಮಟ್ಟದ ರಾಜಕೀಯದ ಉದಾಹರಣೆ” ಎಂದು ಟೀಕಿಸಿದರು.

ಈ ವೇಳೆ ಹಿಂದಿನ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ನಾಯಕರು ಯುದ್ಧ ಮತ್ತು ಆರ್ಥಿಕ ಸಂಕಷ್ಟದ ಸಂದರ್ಭಗಳಲ್ಲಿ ಚಿನ್ನ ಖರೀದಿ ಹಾಗೂ ಇಂಧನ ಬಳಕೆಯ ಕುರಿತು ಜನರಿಗೆ ಮಿತವ್ಯಯದ ಸಲಹೆ ನೀಡಿದ್ದ ಪತ್ರಿಕಾ ವರದಿ ಹಾಗೂ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. “ಇದೇ ರೀತಿಯ ಸಲಹೆಗಳನ್ನು ಕಾಂಗ್ರೆಸ್ ನಾಯಕರು ಹಿಂದೆ ನೀಡಿದಾಗ ಅದು ರಾಷ್ಟ್ರಭಕ್ತಿ, ಈಗ ಮೋದಿ ನೀಡಿದಾಗ ಅದು ಟೀಕೆಗೆ ಗುರಿಯಾಗುತ್ತಿದೆ. ಇದು ದ್ವಂದ್ವ ನಿಲುವು” ಎಂದು ಅವರು ಆರೋಪಿಸಿದರು.

ಹಿಂದುತ್ವ ಮತ್ತು ರಾಷ್ಟ್ರಭಕ್ತಿ ಕುರಿತ ರಾಜಕೀಯ ಚರ್ಚೆಯನ್ನೂ ಮುಂದುವರಿಸಿದ ಸಿ.ಸಿ.ಪಾಟೀಲ, “ಹಿಂದೂತ್ವ ವಿರೋಧಿ ರಾಜಕೀಯ ಮಾಡಿರುವ ಅನೇಕ ನಾಯಕರು ಜನಬೆಂಬಲ ಕಳೆದುಕೊಂಡಿದ್ದಾರೆ. ಜನರ ಭಾವನೆಗಳಿಗೆ ವಿರುದ್ಧವಾಗಿ ಕೆಲಸ ಮಾಡುವವರು ಕೊನೆಗೆ ರಾಜಕೀಯವಾಗಿ ಹಿನ್ನಡೆ ಅನುಭವಿಸುತ್ತಾರೆ” ಎಂದು ಹೇಳಿದರು.

ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಉದಾಹರಣೆ ನೀಡಿದ ಅವರು, “ಚುನಾವಣೆಗೆ ಮುನ್ನ ನಟ ವಿಜಯ್ ಅವರನ್ನು ಒಂದು ರೀತಿಯಲ್ಲಿ ಪ್ರಸ್ತುತಪಡಿಸಲಾಗುತ್ತಿತ್ತು. ಆದರೆ ಚುನಾವಣೆಯ ಬಳಿಕ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಹೊಸ ಗುರುತು ಪಡೆಯುವ ಪ್ರಯತ್ನ ನಡೆದಿದೆ. ಇದು ಜನರ ಮನಸ್ಥಿತಿಯ ಪ್ರತಿಫಲ” ಎಂದು ಅಭಿಪ್ರಾಯಪಟ್ಟರು.

ರಾಹುಲ್ ಗಾಂಧಿ ಕುರಿತಾಗಿ ಮಾತನಾಡಿದ ಅವರು, “ತಮಿಳುನಾಡಿನಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರಾಹುಲ್ ಗಾಂಧಿಯವರತ್ತ ಯಾರೂ ಗಮನ ಹರಿಸಲಿಲ್ಲ. ಅವರ ರಾಜಕೀಯ ವರ್ಚಸ್ಸು ಎಷ್ಟಿದೆ ಎಂಬುದು ಅದರಿಂದಲೇ ಗೊತ್ತಾಗುತ್ತದೆ” ಎಂದು ಟೀಕಿಸಿದರು.

ಒಟ್ಟಿನಲ್ಲಿ ಪ್ರಧಾನಿ ಮೋದಿ ನೀಡಿದ ಮನವಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕಿಂತ ದೇಶದ ಆರ್ಥಿಕ ಸ್ಥಿರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಪರಿಗಣಿಸುವ ಅಗತ್ಯವಿದೆ ಎಂದು ಸಿ.ಸಿ.ಪಾಟೀಲ ಹೇಳಿದರು.

ಪತ್ರಿಕಾ ಗೋಷ್ಟಿಯಲ್ಲಿ ಮಾಜಿ‌ MLC ಎಸ್.ವಿ.ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮಾಜಿ ನಗರಸಭೆ ಅಧ್ಯಕ್ಷೆ ಉಷಾ ದಾಸರ,ಎಂ.ಎಸ್.ಕರಿಗೌಡರ, ಎಂ.ಎಂ.ಹಿರೇಮಠ, ಸಂತೋಷ ಅಕ್ಕಿ, ಮಹೇಶ ದಾಸರ, ಅನೀಲ ಅಬ್ಬಿಗೇರಿ, ಪ್ರಶಾಂತ ನಾಯ್ಕರ ಸೇರಿದಂತೆ‌ ಅನೇಕರು ಇದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb