Table of Contents
ಗದಗ: ಜಿಲ್ಲೆಯ ಶಿಕ್ಷಣ ವಲಯಕ್ಕೆ ಮಿಶ್ರ ಪ್ರತಿಕ್ರಿಯೆ ಉಂಟುಮಾಡುವ ರೀತಿಯಲ್ಲಿ 2025–26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಈ ಬಾರಿ ಗದಗ ಜಿಲ್ಲೆ ಶೇಕಡಾ 76.65ರಷ್ಟು ಫಲಿತಾಂಶ ಸಾಧನೆ ಮಾಡಿದ್ದು, ರಾಜ್ಯ ಮಟ್ಟದ ರ್ಯಾಂಕಿಂಗ್‌ನಲ್ಲಿ 30ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಫಲಿತಾಂಶದ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡಿದ್ದರೂ, ಸ್ಥಾನಮಾನದಲ್ಲಿ ಕುಸಿತ ಉಂಟಾಗಿರುವುದು ವಿಶೇಷವಾಗಿ ಗಮನಸೆಳೆಯುವ ಸಂಗತಿಯಾಗಿ ಪರಿಣಮಿಸಿದೆ.
ವರದಿ: ಮಹಲಿಂಗೆಶ ಹಿರೇಮಠ, ಗದಗ
ಹಿಂದಿನ ಸಾಲಿನ (2024–25) ಅಂಕಿ ಅಂಶಗಳನ್ನು ಹೋಲಿಸಿದರೆ, ಗದಗ ಜಿಲ್ಲೆ ಶೇಕಡಾ 66.64ರಷ್ಟು ಫಲಿತಾಂಶದೊಂದಿಗೆ 25ನೇ ಸ್ಥಾನದಲ್ಲಿತ್ತು. ಈ ಬಾರಿ ಫಲಿತಾಂಶದಲ್ಲಿ ಶೇಕಡಾ 10.01ರಷ್ಟು ಹೆಚ್ಚಳ ಕಂಡು ಬಂದಿದ್ದರೂ, ಇತರ ಜಿಲ್ಲೆಗಳ ಸಾಧನೆ ಇನ್ನಷ್ಟು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಸ್ಥಾನಮಾನ ಐದು ಹಂತ ಕುಸಿದು 30ನೇ ಸ್ಥಾನಕ್ಕೆ ಸರಿದಿದೆ.

ಕಳೆದ ಮೂರು ವರ್ಷಗಳ ಫಲಿತಾಂಶದ ವಿವರಗಳನ್ನು ಅವಲೋಕಿಸಿದರೆ, ಜಿಲ್ಲೆಯ ಶಿಕ್ಷಣ ಗುಣಮಟ್ಟದಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿದ್ದು, ರ್ಯಾಂಕಿಂಗ್‌ನಲ್ಲಿ ಸ್ಥಿರತೆ ಕಾಣಿಸುತ್ತಿಲ್ಲ. 2022–23ನೇ ಸಾಲಿನಲ್ಲಿ ಗದಗ ಜಿಲ್ಲೆ ಶೇಕಡಾ 66.91ರಷ್ಟು ಫಲಿತಾಂಶದೊಂದಿಗೆ 30ನೇ ಸ್ಥಾನದಲ್ಲಿತ್ತು. 2023–24ರಲ್ಲಿ ಫಲಿತಾಂಶ ಶೇಕಡಾ 72.86ಕ್ಕೆ ಏರಿದರೂ, ರಾಜ್ಯ ಮಟ್ಟದಲ್ಲಿ ಕೊನೆಯ ಸ್ಥಾನಕ್ಕೆ ಕುಸಿತ ಕಂಡಿತ್ತು. ನಂತರ 2024–25ರಲ್ಲಿ ಶೇಕಡಾ 66.64ಕ್ಕೆ ಇಳಿಕೆಯಾಗಿದ್ದರೂ, ರ್ಯಾಂಕಿಂಗ್‌ನಲ್ಲಿ 25ನೇ ಸ್ಥಾನಕ್ಕೆ ಏರಿಕೆಯಾಗಿತ್ತು. ಈ ಎಲ್ಲ ಅಂಕಿ ಅಂಶಗಳು ಜಿಲ್ಲೆಯ ಫಲಿತಾಂಶದಲ್ಲಿ ಸ್ಥಿರತೆಯ ಕೊರತೆಯನ್ನು ಸ್ಪಷ್ಟಪಡಿಸುತ್ತವೆ.
ಈ ಸಾಲಿನ ಫಲಿತಾಂಶವು ಶೇಕಡಾವಾರು ದೃಷ್ಟಿಯಿಂದ ಉತ್ತಮ ಸಾಧನೆಯಾಗಿದ್ದರೂ, ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ ಗದಗ ಜಿಲ್ಲೆ ಹಿಂದಿಕ್ಕಲ್ಪಟ್ಟಿರುವುದು ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರಲ್ಲಿ ಚಿಂತೆಗೆ ಕಾರಣವಾಗಿದೆ. ವಿಶೇಷವಾಗಿ “ಈ ಬಾರಿ ಆದರೂ ಟಾಪ್-10 ಸ್ಥಾನ ಗಳಿಸಬೇಕು” ಎಂಬ ನಿರೀಕ್ಷೆ ಹೊಂದಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ನಿರಾಶೆ ಎದುರಾಗಿದೆ.
ಪಿಯುಸಿ ಫಲಿತಾಂಶವನ್ನು ಉತ್ತಮಗೊಳಿಸಲು ಶಿಕ್ಷಣ ಇಲಾಖೆ ವಿವಿಧ ಮಟ್ಟದಲ್ಲಿ ಕ್ರಮಗಳನ್ನು ಕೈಗೊಂಡಿತ್ತು. ಉಪನ್ಯಾಸಕರಿಗೆ ವಿಶೇಷ ತರಬೇತಿ ಶಿಬಿರಗಳನ್ನು ಆಯೋಜಿಸುವುದು, ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ನಡೆಸುವುದು, ಪ್ರಶ್ನೆಪತ್ರಿಕೆ ಬಿಡಿಸುವ ಕಾರ್ಯಾಗಾರಗಳನ್ನು ರೂಪಿಸುವುದು ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡಲಾಗಿತ್ತು. ಆದಾಗ್ಯೂ, ಈ ಕ್ರಮಗಳ ಪರಿಣಾಮ ನಿರೀಕ್ಷಿತ ಮಟ್ಟದಲ್ಲಿ ಕಾಣಿಸದಿರುವುದು ಪ್ರಶ್ನಾರ್ಥಕವಾಗಿದೆ.

ಸ್ಥಳೀಯ ಶಿಕ್ಷಣ ವಲಯದ ಪರಿಣಿತರ ಪ್ರಕಾರ, ಕೇವಲ ಶೇಕಡಾವಾರು ಫಲಿತಾಂಶ ಹೆಚ್ಚಳವೇ ಸಾಕಾಗುವುದಿಲ್ಲ; ಗುಣಮಟ್ಟದ ಶಿಕ್ಷಣ, ನಿರಂತರ ಮಾರ್ಗದರ್ಶನ, ವಿದ್ಯಾರ್ಥಿಗಳ ಮಾನಸಿಕ ಸಿದ್ಧತೆ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವತ್ತ ಹೆಚ್ಚು ಒತ್ತು ನೀಡಬೇಕಾಗಿದೆ. ಅಲ್ಲದೆ, ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಶಿಕ್ಷಣ ವ್ಯತ್ಯಾಸವನ್ನು ಕಡಿಮೆ ಮಾಡುವತ್ತವೂ ಗಮನ ಹರಿಸಬೇಕಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಒಟ್ಟಾರೆ, ಈ ವರ್ಷದ ಫಲಿತಾಂಶ ಗದಗ ಜಿಲ್ಲೆಯ ಶಿಕ್ಷಣ ವ್ಯವಸ್ಥೆಗೆ ಒಂದು ಎಚ್ಚರಿಕೆಯ ಗಂಟೆಯಂತೆ ಪರಿಣಮಿಸಿದ್ದು, ಮುಂದಿನ ವರ್ಷಗಳಲ್ಲಿ ಸ್ಥಿರ ಸಾಧನೆ ಹಾಗೂ ಉತ್ತಮ ರ್ಯಾಂಕಿಂಗ್ ಪಡೆಯಲು ಸಮಗ್ರ ಕಾರ್ಯಯೋಜನೆ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ.
ಗದಗ ಜಿಲ್ಲೆ ಪಿಯು ಫಲಿತಾಂಶ: ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಅದ್ಭುತ ಸಾಧನೆ
ಗದಗ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗದಗ ಜಿಲ್ಲೆ ಮತ್ತೊಮ್ಮೆ ಉತ್ತಮ ಸಾಧನೆ ತೋರಿದ್ದು, ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಲಾ ವಿಭಾಗದಲ್ಲಿ ಹುಲಿಗೆಮ್ಮ ಪ್ರಥಮ
ಕಲಾ ವಿಭಾಗದಲ್ಲಿ ನರೇಗಲ್ಲ (ರೋಣ) ತಾಲೂಕಿನ ಎಸ್.ಎ. ಪಿಯು ಕಾಲೇಜಿನ ವಿದ್ಯಾರ್ಥಿನಿ ಹುಲಿಗೆಮ್ಮ 589 ಅಂಕಗಳು (ಶೇ.98) ಗಳಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಲೆಕ್ಷ್ಮೇಶ್ವರದ ಎಸ್ಎಂಜಿವಿಜಿ ಕಾಲೇಜಿನ ರೋಹಿಣಿ ಬೆಟಗೇರಿ 584 ಅಂಕಗಳು (ಶೇ.97.33) ಪಡೆದು ದ್ವಿತೀಯ ಸ್ಥಾನ, ಇದೇ ಕಾಲೇಜಿನ ನಂದಿತಾ ಬಳಿಗಾರ 580 ಅಂಕಗಳು (ಶೇ.96.66) ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸಮೃದ್ಧಿ ಅಗ್ರಸ್ಥಾನ
ವಿಜ್ಞಾನ ವಿಭಾಗದಲ್ಲಿ ಗದಗ ಸರ್ಕಾರಿ ಪಿಯು ಕಾಲೇಜಿನ ಸಮೃದ್ಧಿ ಸಿದ್ಧಲಿಂಗ 591 ಅಂಕಗಳು (ಶೇ.98.4) ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಸನ್ಮಾರ್ಗ ಪಿಯು ಕಾಲೇಜಿನ ಕಿರಣ ಹಿರೇಮಠ 590 ಅಂಕಗಳು (ಶೇ.98.3) ಪಡೆದು ದ್ವಿತೀಯ ಸ್ಥಾನ ಗಳಿಸಿದರೆ, ಬಿಪಿನ್ ಚಿಕ್ಕಟ್ಟಿ ಕಾಲೇಜಿನ ನಿಸರ್ಗ ವಸ್ತ್ರದ 585 ಅಂಕಗಳು (ಶೇ.97.50) ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಜಂಟಿ ಪ್ರಥಮ
ವಾಣಿಜ್ಯ ವಿಭಾಗದಲ್ಲಿ ಮುಂಡರಗಿ ತಾಲೂಕಿನ ಜೆಎ ಪಿಯು ಕಾಲೇಜಿನ ಪದ್ಮಪ್ರೀಯ ಶೆಟ್ಟರ 590 ಅಂಕಗಳು (ಶೇ.98.3) ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಗದಗ ತಾಲೂಕಿನ ಬಳಗಾನೂರಿನ ಚಿಕೆನಕೊಪ್ಪ ಶರಣ ಪಿಯು ಕಾಲೇಜಿನ ಗೀತಾ ಹೂಗಾರ ಕೂಡ 590 ಅಂಕಗಳೊಂದಿಗೆ ಜಂಟಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಎಎಸ್ಎಸ್ ಪಿಯು ಕಾಲೇಜಿನ ವಿನಿತಾ ಬಂಡಾ, ಪ್ರಿಯಾಂಕ ಎಚ್ ಹಾಗೂ ಆದಿತ್ಯ ರಾಯಬಾಗಿ ತಲಾ 589 ಅಂಕಗಳು (ಶೇ.97.20) ಪಡೆದು ಜಂಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಒಟ್ಟಾರೆ ಸಾಧನೆಗೆ ಮೆಚ್ಚುಗೆ
ಈ ಬಾರಿ ಗದಗ ಜಿಲ್ಲೆಯ ವಿದ್ಯಾರ್ಥಿಗಳು ಎಲ್ಲಾ ವಿಭಾಗಗಳಲ್ಲಿಯೂ ಉನ್ನತ ಮಟ್ಟದ ಸಾಧನೆ ತೋರಿರುವುದು ಗಮನಾರ್ಹವಾಗಿದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.
