ಗದಗ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮುಂಡರಗಿ ಸಹಯೋಗದೊಂದಿಗೆ ಚಿಕ್ಕಟ್ಟಿ ಶಾಲಾ-ಕಾಲೇಜುಗಳಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ – 2026 ಅನ್ನು ಆನ್‌ಲೈನ್ ಮೂಲಕ ಆಚರಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ಡಾ. ವೀರೇಂದ್ರ ಹೆಗಡೆಯವರು ಆನ್‌ಲೈನ್ ಮೂಲಕ ಮಾತನಾಡಿ, ಮಾದಕ ವಸ್ತು ವಿರೋಧಿ ದಿನಾಚರಣೆಯ ಮೂಲ ಉದ್ದೇಶ ಯುವಜನರಲ್ಲಿ ಜಾಗೃತಿ ಮೂಡಿಸಿ ಆರೋಗ್ಯಕರ, ಶಿಸ್ತುಬದ್ಧ ಮತ್ತು ಮೌಲ್ಯಯುತ ಜೀವನದತ್ತ ಹೆಜ್ಜೆ ಇಡಲು ಪ್ರೇರೇಪಿಸುವುದಾಗಿದೆ ಎಂದರು. ಮಾದಕ ವಸ್ತುಗಳು ವ್ಯಕ್ತಿಯ ಆರೋಗ್ಯ ಮಾತ್ರವಲ್ಲದೆ ಕುಟುಂಬದ ನೆಮ್ಮದಿ, ಸಮಾಜದ ಶಾಂತಿ ಹಾಗೂ ರಾಷ್ಟ್ರದ ಅಭಿವೃದ್ಧಿಯನ್ನೂ ಹಾಳುಮಾಡುತ್ತವೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸ್ನೇಹ, ಉತ್ತಮ ಅಭ್ಯಾಸ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಶಿಕ್ಷಕರು ಹಾಗೂ ಪೋಷಕರು ಮಕ್ಕಳೊಂದಿಗೆ ನಿರಂತರ ಸಂವಾದ ನಡೆಸಿ ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಕುರಿತು ಬೆಂಗಳೂರಿನ ಎಸ್.ಪಿ. ಡಾ. ವೆಂಕಟೇಶ್ ಪ್ರಸನ್ನ ಅವರು ಆನ್‌ಲೈನ್ ಮೂಲಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನರನ್ನು ಗುರಿಯಾಗಿಸಿಕೊಂಡು ಗಾಂಜಾ, ಚರಸ್, ಹೆರಾಯಿನ್, ಕೊಕೇನ್, ಬ್ರೌನ್ ಶುಗರ್, ಎಂಡಿಎಂಎ, ಮೆಂಥಾಂಪೆಟಮೈನ್ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದರು. ಇವು ಆರೋಗ್ಯ, ಶಿಕ್ಷಣ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ದುಷ್ಪರಿಣಾಮ ಉಂಟುಮಾಡುತ್ತವೆ. ಮಕ್ಕಳ ನಡವಳಿಕೆಯಲ್ಲಿ ಹಠಾತ್ ಬದಲಾವಣೆ ಕಂಡುಬಂದರೆ ಪೋಷಕರು ಮತ್ತು ಶಿಕ್ಷಕರು ಪ್ರೀತಿಯಿಂದ ಅವರೊಂದಿಗೆ ಮಾತನಾಡಿ ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯಬೇಕು ಎಂದು ಹೇಳಿದರು. ಪೊಲೀಸ್ ಇಲಾಖೆ ಮಾದಕ ವಸ್ತುಗಳ ಅಕ್ರಮ ಸಾಗಣೆ ಮತ್ತು ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಸಮಾಜ, ಶಾಲೆ, ಕಾಲೇಜು, ಪೋಷಕರು ಹಾಗೂ ಪೊಲೀಸ್ ಇಲಾಖೆ ಕೈಜೋಡಿಸಿದರೆ ಮಾತ್ರ ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂಡರಗಿಯ ಯೋಜನಾಧಿಕಾರಿಗಳಾದ ಶ್ರೀಮತಿ ವಿಶಾಲಾ ಅಕ್ಕಿಯವರು ಮಾತನಾಡಿ, ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ಆರೋಗ್ಯ, ಶಿಕ್ಷಣ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ದುಷ್ಪರಿಣಾಮ ಉಂಟುಮಾಡುತ್ತದೆ. ಆದ್ದರಿಂದ ವ್ಯಸನದಿಂದ ದೂರವಿರುವುದು ಪ್ರತಿಯೊಬ್ಬರ ಮೊದಲ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇದೇ ವೇಳೆ ಯೋಜನೆಯ ವತಿಯಿಂದ ನಡೆಯುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್.ವೈ. ಚಿಕ್ಕಟ್ಟಿಯವರು ಮಾತನಾಡಿ, ಇಂದಿನ ಯುವಜನತೆಯೇ ದೇಶದ ಶಕ್ತಿ. ವಿದ್ಯಾರ್ಥಿಗಳು ಯಾವುದೇ ರೀತಿಯ ಮಾದಕ ವಸ್ತುಗಳ ಆಮಿಷಕ್ಕೆ ಒಳಗಾಗದೆ ಕ್ರೀಡೆ, ಯೋಗ, ಓದು, ಕಲೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾನಸಿಕ ಒತ್ತಡ ಅಥವಾ ಸಮಸ್ಯೆಗಳಿದ್ದರೆ ಶಿಕ್ಷಕರು, ಪೋಷಕರು ಅಥವಾ ವಿಶ್ವಾಸಾರ್ಹ ಹಿರಿಯರೊಂದಿಗೆ ಮುಕ್ತವಾಗಿ ಮಾತನಾಡಿ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿಯವರು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿಯಾದ ಶ್ರೀಮತಿ ವಿಶಾಲಾ ಅಕ್ಕಿಯವರು ಅಧ್ಯಕ್ಷರಾದ ಪ್ರೊ. ಎಸ್.ವೈ. ಚಿಕ್ಕಟ್ಟಿಯವರಿಗೆ ಸಸಿ ನೀಡಿ ಗೌರವಿಸಿ ಸನ್ಮಾನಿಸಿದರು.
ದಿನಾಚರಣೆಯಲ್ಲಿ ಬಿಜಾಪುರದಿಂದ ಆಗಮಿಸಿದ್ದ ಶ್ರೀ ಶ್ರೇಣಿಕ್ ಎಸ್. ಸಿಳ್ಳೀನ್, ಸಿ.ಬಿ.ಎಸ್.ಇ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ದೀಪಾ ಬಿಪಿನ್ ಚಿಕ್ಕಟ್ಟಿ, ಐ.ಸಿ.ಎಸ್.ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಸಿ.ಬಿ.ಎಸ್.ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ರಿಯಾನಾ ಮುಲ್ಲಾ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಯೋಜನಾ ಮೇಲ್ವಿಚಾರಕರಾದ ಶ್ರೀಮತಿ ನಸೀಮಾ ಯಾವಗಲ್ ಪ್ರಾರ್ಥಿಸಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ಶ್ರೀ ಶ್ರೀಶೈಲ ಶಿಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಶ್ರೀ ಗಣೇಶ ಬಡ್ನಿಯವರು ವಂದನಾರ್ಪಣೆಗೈದರು.
