ಗದಗ, ಜು. 5: ಲೋಕ ಕಲ್ಯಾಣ, ವಿಶ್ವಶಾಂತಿ ಹಾಗೂ ಉತ್ತಮ ಮಳೆ-ಬೆಳೆಗಾಗಿ ಗದಗ ತಾಲೂಕಿನ ಅಂತೂರು-ಬೆಂತೂರು ಮಠದಲ್ಲಿ ರಾಚೋಟೇಶ್ವರ ಶಿವಾಚಾರ್ಯರು ಕೈಗೊಂಡಿದ್ದ 33 ದಿನಗಳ ಕಠಿಣ ಶಿವಯೋಗ ಸಮಾಧಿ ಭಾನುವಾರ ಯಶಸ್ವಿಯಾಗಿ ಪೂರ್ಣಗೊಂಡಿತು. ಸುಮಾರು 775 ಗಂಟೆಗಳ ಕಾಲ ನಿರಂತರ ತಪಸ್ಸು ನಡೆಸಿದ ಬಳಿಕ ಸ್ವಾಮೀಜಿಗಳು ವೇದಮಂತ್ರಘೋಷ, ಶಿವನಾಮ ಸ್ಮರಣೆ ಹಾಗೂ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಸಮಾಧಿಯಿಂದ ಹೊರಬಂದರು.
ವರದಿ:ಮಹಲಿಂಗೇಶ್ ಹಿರೇಮಠ. ಗದಗ
ಜೂನ್ 2ರಂದು ಆರಂಭವಾಗಿದ್ದ ಈ ಅಪರೂಪದ ಶಿವಯೋಗ ಸಮಾಧಿಯ ವೇಳೆ ಸ್ವಾಮೀಜಿಗಳು ಗರ್ಭಗುಡಿಯೊಳಗೆ ಶಿವಲಿಂಗದ ಸನ್ನಿಧಿಯಲ್ಲಿ ತಪಸ್ಸಿನಲ್ಲಿ ನಿರತರಾಗಿದ್ದರು. ಸಮಾಧಿ ಆರಂಭದ ಸಂದರ್ಭದಲ್ಲಿ ಗರ್ಭಗುಡಿಯ ಪ್ರವೇಶದ್ವಾರವನ್ನು ಇಟ್ಟಿಗೆ ಮತ್ತು ಸಿಮೆಂಟ್‌ನಿಂದ ಸಂಪೂರ್ಣವಾಗಿ ಮುಚ್ಚಲಾಗಿದ್ದು, ಈ ವ್ರತವು ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಅಪಾರ ಕುತೂಹಲ ಮೂಡಿಸಿತ್ತು.
ಭಾನುವಾರ ನಿಗದಿತ ಮುಹೂರ್ತದಲ್ಲಿ ವಿವಿಧ ಮಠಾಧೀಶರು, ವೇದಪಂಡಿತರು ಹಾಗೂ ಗಣ್ಯರ ಸಮ್ಮುಖದಲ್ಲಿ ವಿಶೇಷ ಪೂಜೆ, ಹೋಮ-ಹವನ ಮತ್ತು ವೇದಮಂತ್ರ ಪಠಣ ನೆರವೇರಿತು. ಬಳಿಕ ಗರ್ಭಗುಡಿಯ ಬಾಗಿಲನ್ನು ತೆರವುಗೊಳಿಸಿ, ಸಮಾಧಿಯಲ್ಲಿದ್ದ ರಾಚೋಟೇಶ್ವರ ಶಿವಾಚಾರ್ಯರನ್ನು ಭಕ್ತರು ಗೌರವಪೂರ್ವಕವಾಗಿ ಹೊರಗೆ ಕರೆತಂದರು. ಈ ವೇಳೆ “ಹರ ಹರ ಮಹಾದೇವ”, “ಓಂ ನಮಃ ಶಿವಾಯ” ಎಂಬ ಘೋಷಣೆಗಳು ಮಠದ ಆವರಣವನ್ನು ಮೊಳಗಿಸಿದವು.
ಸ್ವಾಮೀಜಿಗಳು ಹೊರಬರುತ್ತಿದ್ದಂತೆ ಸಾವಿರಾರು ಭಕ್ತರು ಭಾವುಕರಾಗಿ ಜಯಘೋಷ ಕೂಗಿ ಸ್ವಾಗತಿಸಿದರು. ಅನೇಕ ಭಕ್ತರು ಕೈಮುಗಿದು ನಮಸ್ಕರಿಸಿ ಆಶೀರ್ವಾದ ಪಡೆದರೆ, ಹಲವರು ಈ ಅಪರೂಪದ ಕ್ಷಣವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು. ಮಠದ ಆವರಣ ಸಂಪೂರ್ಣ ಭಕ್ತಿಸಾಗರವಾಗಿ ಮಾರ್ಪಟ್ಟಿತ್ತು.
ಸಮಾಧಿ ಅವಧಿಯುದ್ದಕ್ಕೂ ಗರ್ಭಗುಡಿ ಹೊರಭಾಗದಲ್ಲಿ ಭಕ್ತರು ಹಗಲು-ರಾತ್ರಿ ಭಜನೆ, ಶಿವನಾಮ ಜಪ ಹಾಗೂ ದೇವರ ಸ್ಮರಣೆಯಲ್ಲಿ ತೊಡಗಿಸಿಕೊಂಡಿದ್ದರು. ಯಾವುದೇ ಅಡೆತಡೆಯಿಲ್ಲದೆ 33 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದಿದ್ದು, ಸಾವಿರಾರು ಭಕ್ತರು ಪ್ರತಿದಿನ ಮಠಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದರು.
ಈ ಅಪರೂಪದ ಶಿವಯೋಗ ಸಮಾಧಿ ಧಾರ್ಮಿಕ ವಲಯದಲ್ಲಿ ವಿಶೇಷ ಗಮನ ಸೆಳೆದಿದ್ದು, ಅಧ್ಯಾತ್ಮ ಮತ್ತು ಯೋಗಸಾಧನೆಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ. 33 ದಿನಗಳ ವ್ರತ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಅಂತೂರು-ಬೆಂತೂರು ಮಠದ ಇತಿಹಾಸದಲ್ಲಿ ಮಹತ್ವದ ಧಾರ್ಮಿಕ ಘಟನೆಯಾಗಿ ದಾಖಲಾಗಿದೆ.

ವಿಡಿಯೋ ಇದೆ. Subscribe ಮಾಡಿ, ಶೇರ್ ಮಾಡಿ..
