ಗದಗ:
ಗದಗ ನಗರದ ಬೆಟಗೇರಿ ಪ್ರದೇಶದ ಟೀ ಬಜಾರ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಕಿರಾಣಿ ಅಂಗಡಿಗೆ ಭಾರೀ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ. ಈ ಅಗ್ನಿ ಅವಘಡದಲ್ಲಿ ಅಂಗಡಿಯೊಳಗಿದ್ದ ಅಪಾರ ಪ್ರಮಾಣದ ದಿನಸಿ ಸಾಮಗ್ರಿ ಹಾಗೂ ಇತರೆ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಬೆಂಕಿಯ ತೀರ್ವತೆಗೆ ಅಂಗಡಿಯಲ್ಲಿದ್ದ ವಸ್ತುಗಳು ಭಾರೀ ಸ್ಪೋಟಗೊಂಡಿವೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ.
ಟೀ ಬಜಾರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ T.A. ಅರವಟಗಿ ಹೆಸರಿನ ಕಿರಾಣಿ ಅಂಗಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಂಗಡಿ ತಿಪ್ಪಣಸಾ ಅರವಟಗಿ ಅವರಿಗೆ ಸೇರಿದ್ದು, ಬೆಂಕಿಯ ತೀವ್ರತೆಯಿಂದಾಗಿ ಅಂಗಡಿಯೊಳಗಿದ್ದ ದಿನಸಿ ವಸ್ತುಗಳು, ಪ್ಲಾಸ್ಟಿಕ್ ಸಾಮಗ್ರಿ, ಪ್ಯಾಕಿಂಗ್ ವಸ್ತುಗಳು ಸೇರಿದಂತೆ ಎಲ್ಲವೂ ಸಂಪೂರ್ಣವಾಗಿ ನಾಶವಾಗಿವೆ.
ಅಂಗಡಿಯಿಂದ ಏಕಾಏಕಿ ಹೊಗೆ ಹಾಗೂ ಜ್ವಾಲೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿದ ತಕ್ಷಣ ಸ್ಥಳಿಯರು ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದರು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟರು. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗೆ ಕೆಲಕಾಲ ಹಿಡಿದಿದ್ದು, ಬೆಟಗೇರಿ ಪೊಲೀಸರ ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಸಲಾಯಿತು.
ಸಮಯೋಚಿತ ಕಾರ್ಯಾಚರಣೆಯಿಂದ ಪಕ್ಕದ ಅಂಗಡಿಗಳಿಗೆ ಬೆಂಕಿ ವ್ಯಾಪಿಸುವುದನ್ನು ತಪ್ಪಿಸಲಾಗಿದ್ದು, ದೊಡ್ಡ ಅನಾಹುತವನ್ನು ತಡೆಯಲಾಗಿದೆ. ಘಟನೆಯು ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಈ ಕುರಿತು ಪೊಲೀಸರು ಪರಿಶೀಲನೆ ಕೈಗೊಂಡಿದ್ದು, ನಷ್ಟದ ನಿಖರ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ. ಈ ಘಟನೆ ಮತ್ತೆ ವ್ಯಾಪಾರಿಕ ಪ್ರದೇಶಗಳಲ್ಲಿ ವಿದ್ಯುತ್ ಸುರಕ್ಷತೆ ಕುರಿತು ಜಾಗೃತಿಯ ಅಗತ್ಯವನ್ನು ಒತ್ತಿ ಹೇಳುವಂತಾಗಿದೆ.
