ಗದಗ ಜಿಲ್ಲೆಯಲ್ಲಿ ಬಡತನದ ಕಾರಣದಿಂದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ತ್ಯಜಿಸಿ ಕೂಲಿ ಕೆಲಸಕ್ಕೆ ತೆರಳಿದ ವಿದ್ಯಾರ್ಥಿನಿಯೊಬ್ಬಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಮನವೊಲಿಸಿ ಮರುಪರೀಕ್ಷೆ ಬರೆಸಿದ ಘಟನೆ ನಡೆದಿದೆ.
ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಪಲ್ಲವಿ ಹಳ್ಳಿಕೇರಿ ಎಂಬ ವಿದ್ಯಾರ್ಥಿನಿ, ಬರದೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿ ಅಭ್ಯಾಸ ಮಾಡುತ್ತಿದ್ದು, ಮುಂಡರಗಿ ಪಟ್ಟಣದ ವಿಜಿ ಲಿಂಬಿಕಾಯಿ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರ ಹೊಂದಿದ್ದಳು.
ಸೋಮವಾರ ನಡೆದ ವಿಜ್ಞಾನ ವಿಷಯದ ಪರೀಕ್ಷೆಗೆ ಹಾಜರಾಗಬೇಕಿದ್ದ ಪಲ್ಲವಿ, ಮನೆಯ ಆರ್ಥಿಕ ಸಂಕಷ್ಟದ ಹಿನ್ನೆಲೆ ದ್ರಾಕ್ಷಿ ತೋಟದಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದಳು.

ಕುಟುಂಬದ ಬಡತನವೇ ವಿದ್ಯಾರ್ಥಿನಿಯನ್ನು ಇಂತಹ ನಿರ್ಧಾರಕ್ಕೆ ತಳ್ಳಿದೆಯೆಂಬುದು ತಿಳಿದುಬಂದಿದೆ.
ಈ ವಿಷಯ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಅವರು ತಕ್ಷಣ ಸ್ಪಂದಿಸಿ, ವಿದ್ಯಾರ್ಥಿನಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ, ಆಕೆಯನ್ನು ಮನವೊಲಿಸಿದರು.
ಶಿಕ್ಷಣದ ಮಹತ್ವವನ್ನು ವಿವರಿಸಿ, ಪರೀಕ್ಷೆಗೆ ಹಾಜರಾಗುವಂತೆ ಪ್ರೇರೇಪಿಸಿದರು.
ಅಧಿಕಾರಿಗಳ ಮನವೊಲಿಕೆಗೆ ಸ್ಪಂದಿಸಿದ ಪಲ್ಲವಿ, ಬಳಿಕ ಪರೀಕ್ಷಾ ಕೇಂದ್ರಕ್ಕೆ ಬಂದು ವಿಜ್ಞಾನ ಪರೀಕ್ಷೆಯನ್ನು ಬರೆದಳು.
ಶಿಕ್ಷಣಾಧಿಕಾರಿಗಳ ಈ ಮಾನವೀಯ ಹಾಗೂ ಹೊಣೆಗಾರಿಕೆಯಿಂದ ಕೂಡಿದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಡತನದ ನಡುವೆಯೂ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಾಗಬಾರದು ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

