ಪಣಜಿ, ಏಪ್ರಿಲ್ 07:
ಮಾಲೀಕನ ನಿರ್ಲಕ್ಷ್ಯದಿಂದ ಸಾಕು ಪ್ರಾಣಿಯೊಂದು ಪ್ರಾಣ ಕಳೆದುಕೊಂಡ ದುರ್ಘಟನೆ ಗೋವಾದ ಪಣಜಿಯಲ್ಲಿ ನಡೆದಿದೆ. ಕರ್ನಾಟಕ ಮೂಲದ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು ಕಾರಿನೊಳಗೆ ಲಾಕ್ ಮಾಡಿ ಸುಮಾರು ನಾಲ್ಕು ಗಂಟೆಗಳ ಕಾಲ ಕ್ಯಾಸಿನೊಗೆ ತೆರಳಿದ್ದ ಪರಿಣಾಮ, ಬಿಸಿಲಿನ ತಾಪ ಮತ್ತು ಉಸಿರುಗಟ್ಟುವಿಕೆಯಿಂದ ‘ಗೋಲ್ಡನ್ ರಿಟ್ರೈವರ್’ ತಳಿಯ ನಾಯಿ ಸಾವನ್ನಪ್ಪಿದೆ.
ಭರತ್ ಕೆ.ಸಿ ಎಂಬಾತ ತನ್ನ ಸಾಕು ನಾಯಿಯನ್ನು ಕಾರಿನೊಳಗೆ ಬಿಟ್ಟು ಪಣಜಿಯ ಕ್ಯಾಸಿನೊಗೆ ತೆರಳಿದ್ದನು. ಈ ಅವಧಿಯಲ್ಲಿ ಕಾರಿನ ಕಿಟಕಿಗಳನ್ನು ತೆರೆಯದೆ ಸಂಪೂರ್ಣವಾಗಿ ಲಾಕ್ ಮಾಡಲಾಗಿತ್ತು. ಗೋವಾದಲ್ಲಿ ಆ ವೇಳೆ ತಾಪಮಾನ 31ರಿಂದ 33 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದ್ದರಿಂದ, ಕಾರಿನ ಒಳಗಿನ ಉಷ್ಣಾಂಶ ಅಪಾಯಕಾರಿಯಾಗಿ ಹೆಚ್ಚಾಗಿದೆ.

ಬಿಸಿಲಿನ ತಾಪಕ್ಕೆ ಒಳಗಾದ ನಾಯಿ ತೀವ್ರವಾಗಿ ನರಳಾಡಿದ್ದು, ಕಾರಿನ ಒಳಗಿದ್ದ ಮ್ಯಾಟ್ ಅನ್ನು ಹಲ್ಲುಗಳಿಂದ ಕಚ್ಚಿ ಹೊರಬರಲು ಪ್ರಯತ್ನಿಸಿರುವ ಲಕ್ಷಣಗಳು ಕಂಡುಬಂದಿವೆ. ಆದರೆ ಗಾಳಿಯಾಟದ ಕೊರತೆಯಿಂದ ಉಸಿರುಗಟ್ಟುವಿಕೆ ಉಂಟಾಗಿ, ನಾಯಿ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಜಿಲ್ಲಾ ಪ್ರಾಣಿ ದೌರ್ಜನ್ಯ ತಡೆ ಸಮಿತಿಯ ಕ್ಷೇತ್ರಾಧಿಕಾರಿ ಸ್ಟೀಫನ್ ಸ್ಯಾಮ್ಯುಯೆಲ್ ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ಸ್ಥಳೀಯರು ಪಣಜಿ ಪ್ರಾಣಿ ಕಲ್ಯಾಣ ಸಂಘಕ್ಕೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರಿಗೆ ಕರೆ ಮಾಡಲಾಗಿದೆ. ಆದರೆ ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ನಾಯಿ ಮೃತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಭರತ್ ಕೆ.ಸಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.
ಪ್ರಾಣಿ ಕಲ್ಯಾಣ ಸಂಘವು ಆರೋಪಿಯ ವಾಹನವನ್ನು ವಶಪಡಿಸಿಕೊಳ್ಳಲು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪೊಲೀಸರನ್ನು ಒತ್ತಾಯಿಸಿದೆ. ನಾಯಿಯ ಮರಣೋತ್ತರ ಪರೀಕ್ಷೆಯನ್ನು ಮಂಗಳವಾರ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಈ ಪ್ರದೇಶದಲ್ಲಿ ಇದೇ ರೀತಿಯ ಐದನೇ ಘಟನೆ ಇದಾಗಿದೆ. ಹಿಂದಿನ ಪ್ರಕರಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ” ಎಂದು ಸ್ಟೀಫನ್ ಸ್ಯಾಮ್ಯುಯೆಲ್ ಹೇಳಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಪ್ರಾಣಿ ಹಕ್ಕು ಕಾರ್ಯಕರ್ತರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಸಾಕುಪ್ರಾಣಿಗಳನ್ನು ವಾಹನಗಳಲ್ಲಿ 30 ನಿಮಿಷಕ್ಕಿಂತ ಹೆಚ್ಚು ಕಾಲ ಒಬ್ಬಂಟಿಯಾಗಿ ಬಿಡಬಾರದು. ಕಿಟಕಿಗಳನ್ನು ಸ್ವಲ್ಪ ತೆರೆಯಿಟ್ಟು ಗಾಳಿಯಾಟಕ್ಕೆ ಅವಕಾಶ ಮಾಡಿಕೊಡಬೇಕು ಹಾಗೂ ವಾಹನವನ್ನು ನೆರಳಿನಲ್ಲಿ ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.
“ಸಾಕುಪ್ರಾಣಿಗಳನ್ನು ಪಾಲಿಸುವ ಪ್ರತಿಯೊಬ್ಬರಿಗೂ ಅವುಗಳ ಯೋಗಕ್ಷೇಮದ ಹೊಣೆಗಾರಿಕೆ ಇದೆ. ಕಾರಿನಲ್ಲಿ ಲಾಕ್ ಮಾಡಿ ಹೋಗಿರುವುದು ಮಾಲೀಕನ ನಿರ್ಲಕ್ಷ್ಯ ಮತ್ತು ಕ್ರೂರ ಕೃತ್ಯವಾಗಿದೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
