ಗದಗ, ಆ. 3: ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲೂ ಗದಗ ಜಿಲ್ಲೆಗೆ ಸಚಿವ ಸ್ಥಾನ ದೊರೆಯದಿರುವುದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನರಲ್ಲಿ ನಿರಾಸೆ ಮೂಡಿಸಿದೆ. ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹಾಗೂ ಗದಗ ಶಾಸಕ ಹೆಚ್.ಕೆ. ಪಾಟೀಲ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಕೈತಪ್ಪಿದೆ.
ವರದಿ: ಮಹಲಿಂಗೇಶ್ ಹಿರೇಮಠ. ಗದಗ
ಆದರೆ, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ರೋಣ ಶಾಸಕ ಜಿ.ಎಸ್. ಪಾಟೀಲ ಅವರಿಗೆ ವಿಧಾನಸಭೆಯ ಸ್ಪೀಕರ್ ಹುದ್ದೆ ದೊರೆತಿದ್ದು, ಜಿಲ್ಲೆಯ ರಾಜಕೀಯಕ್ಕೆ ಮಹತ್ವದ ಗೌರವ ಸಿಕ್ಕಂತಾಗಿದೆ. ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳಲ್ಲಿ ಒಂದಾದ ಸ್ಪೀಕರ್ ಸ್ಥಾನಕ್ಕೆ ಅವರ ಆಯ್ಕೆ ಗದಗ ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.
ಸಚಿವ ಸ್ಥಾನಕ್ಕಾಗಿ ಜಿಲ್ಲೆಯ ಇಬ್ಬರು ನಾಯಕರ ಬೆಂಬಲಿಗರು ಹಲವು ರೀತಿಯ ಹೋರಾಟಗಳನ್ನು ನಡೆಸಿದ್ದರು. ಹೆಚ್.ಕೆ. ಪಾಟೀಲ ಅವರ ಬೆಂಬಲಿಗರು ಗದಗದಲ್ಲಿ ಪಾದಯಾತ್ರೆ ನಡೆಸಿ ಪಕ್ಷದ ವರಿಷ್ಠರ ಗಮನ ಸೆಳೆದರೆ, ಜಿ.ಎಸ್. ಪಾಟೀಲ ಅವರ ಅಭಿಮಾನಿಗಳು ದೀರ್ಘದಂಡ ನಮಸ್ಕಾರ, ತುಮಕೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ಬೃಹತ್ ಸಭೆ ನಡೆಸುವ ಮೂಲಕ ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದರು.
ಆದರೆ, ಅಂತಿಮವಾಗಿ ಸಚಿವ ಸಂಪುಟದ ಎರಡನೇ ಪಟ್ಟಿಯಲ್ಲೂ ಗದಗ ಜಿಲ್ಲೆಗೆ ಸಚಿವ ಸ್ಥಾನ ದೊರೆಯಲಿಲ್ಲ. ಇದರಿಂದ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದರೂ, ಜಿ.ಎಸ್. ಪಾಟೀಲ ಅವರು ವಿಧಾನಸಭೆಯ ಸ್ಪೀಕರ್ ಆಗಿ ನೇಮಕಗೊಂಡಿರುವುದು ಜಿಲ್ಲೆಯ ರಾಜಕೀಯ ಪ್ರತಿನಿಧಿತ್ವಕ್ಕೆ ಹೊಸ ಆಯಾಮ ನೀಡಿದೆ.

ಸಚಿವ ಸ್ಥಾನ ಕೈತಪ್ಪಿದ ನೋವಿನ ನಡುವೆಯೇ ಸ್ಪೀಕರ್ ಹುದ್ದೆ ಗದಗ ಜಿಲ್ಲೆಯ ಪಾಲಾಗಿರುವುದು ರಾಜಕೀಯವಾಗಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ.
