ಮುಂಡರಗಿ, ಜು. 31: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದಲ್ಲಿ ವಿಷಯುಕ್ತ ಆಹಾರ ಸೇವಿಸಿರುವ ಶಂಕೆಯಿಂದ 70ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಭವಿಸಿದೆ. ಈ ದುರ್ಘಟನೆಯಿಂದ ಕುರಿಗಾಹಿಗಳಲ್ಲಿ ಆತಂಕ ಮನೆ ಮಾಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ವರದಿ: ಮಹಲಿಂಗೇಶ ಹಿರೇಮಠ.ಗದಗ
ಕದಾಂಪುರ ಗ್ರಾಮದ ಕುರಿಗಾಹಿ ಶರಣಪ್ಪ ಗೋಡೆಕಾರ ಹಾಗೂ ಅವರ ಸಹೋದರರಿಗೆ ಸೇರಿದ ಸುಮಾರು 200ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸಲು ಸಮೀಪದ ಬೆಂಡೆ ತೋಟಕ್ಕೆ ಕರೆದೊಯ್ಯಲಾಗಿತ್ತು. ಮೇಯುತ್ತಿದ್ದ ವೇಳೆ ಏಕಾಏಕಿ ಕೆಲವು ಕುರಿಗಳು ಅಸ್ವಸ್ಥಗೊಂಡು ನೆಲಕ್ಕುರುಳಲು ಆರಂಭಿಸಿವೆ. ಬಳಿಕ ಒಂದೊಂದಾಗಿ ದಾರಿಮಧ್ಯೆಯೇ ಸಾವನ್ನಪ್ಪಿದ್ದು, ಒಟ್ಟು 70ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಕುರಿಗಾಹಿಗಳು ಪಶುವೈದ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ಔಷಧೋಪಚಾರ ಹಾಗೂ ಚಿಕಿತ್ಸೆ ದೊರೆಯದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳು ಮೃತಪಟ್ಟಿವೆ ಎಂದು ಆರೋಪಿಸಿ ಪಶುವೈದ್ಯಾಧಿಕಾರಿಗಳ ವಿರುದ್ಧ ಕುರಿಗಾಹಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾವು ಸಾಕುಪ್ರಾಣಿಗಳಂತೆ ಬೆಳೆಸಿದ್ದ ಕುರಿಗಳು ಕಣ್ಮುಂದೆಯೇ ಒಂದೊಂದಾಗಿ ಸಾವನ್ನಪ್ಪುತ್ತಿರುವ ದೃಶ್ಯ ಕಂಡು ಕುರಿಗಾಹಿ ಶರಣಪ್ಪ ಗೋಡೆಕಾರ ಹಾಗೂ ಅವರ ಕುಟುಂಬಸ್ಥರು ಕಣ್ಣೀರಿಟ್ಟರು. ಈ ದೃಶ್ಯ ಸ್ಥಳದಲ್ಲಿದ್ದವರ ಮನಕಲಕುವಂತಿತ್ತು.
ಘಟನಾ ಸ್ಥಳಕ್ಕೆ ಮುಂಡರಗಿ ತಹಶೀಲ್ದಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವಿಗೆ ನಿಖರ ಕಾರಣ ತಿಳಿಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದು, ವಿಷಾಹಾರ ಸೇವನೆಯೇ ಕಾರಣವೇ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.
ಘಟನೆಯಿಂದ ಕುರಿಗಾಹಿ ಕುಟುಂಬಕ್ಕೆ ಭಾರೀ ಆರ್ಥಿಕ ನಷ್ಟ ಉಂಟಾಗಿದ್ದು, ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು ಹಾಗೂ ಸಾವಿಗೆ ನಿಖರ ಕಾರಣ ಪತ್ತೆಹಚ್ಚಬೇಕು ಎಂದು ಸ್ಥಳೀಯರು ಹಾಗೂ ಕುರಿಗಾಹಿಗಳು ಆಗ್ರಹಿಸಿದ್ದಾರೆ.
