Home » News » ಅನ್ನಭಾಗ್ಯ ಯೋಜನೆಯ 200 ಕ್ವಿಂಟಲ್ ಅಕ್ಕಿ ಅಕ್ರಮ ಸಾಗಾಟಕ್ಕೆ ಬ್ರೆಕ್..! 4 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ಕಿ ವಶ..!

ಅನ್ನಭಾಗ್ಯ ಯೋಜನೆಯ 200 ಕ್ವಿಂಟಲ್ ಅಕ್ಕಿ ಅಕ್ರಮ ಸಾಗಾಟಕ್ಕೆ ಬ್ರೆಕ್..! 4 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ಕಿ ವಶ..!

by CityXPress
0 comments

ಗದಗ/ ಮುಂಡರಗಿ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕ್ಯಾಂಟರ್ ಲಾರಿಯೊಂದನ್ನು ಮುಂಡರಗಿ ಪೊಲೀಸರು ವಶಕ್ಕೆ ಪಡೆದು, ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮುಂಡರಗಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 179/2026 ಅಡಿ ಪ್ರಕರಣ ದಾಖಲಾಗಿದ್ದು, ಅಗತ್ಯ ಸರಕುಗಳ ಕಾಯ್ದೆ-1955ರ ಕಲಂ 3 ಮತ್ತು 7 ಹಾಗೂ ಪಿಡಿಎಸ್ ನಿಯಂತ್ರಣ ಆದೇಶದ ಕಲಂ 18ರ ಅಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸೆ.2 (ಇಂದು)ರಂದು ಬೆಳಗ್ಗೆ 7.30ರ ಸುಮಾರಿಗೆ ಮುಂಡರಗಿ-ಕೊರ್ಲಹಳ್ಳಿ ರಸ್ತೆಯ ಮಕ್ತುಂಪುರ ಗ್ರಾಮದ ದುರ್ಗಮ್ಮ ದೇವಿ ದೇವಸ್ಥಾನದ ಬಳಿ ಘಟನೆ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿ ದೊಡ್ಡಬಸಪ್ಪ ವೀರುಪಣ್ಣ ಕಮತರ ಎಂಬಾತನ ಮಾಲೀಕತ್ವದ KA-01-AM-6176 ನೋಂದಣಿ ಸಂಖ್ಯೆಯ ಟಾಟಾ ಕ್ಯಾಂಟರ್ ಲಾರಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಸಾರ್ವಜನಿಕರೊಬ್ಬರು 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ 112 ವಾಹನದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಲಾರಿಯನ್ನು ತಡೆದು ಪರಿಶೀಲಿಸಿದ್ದಾರೆ ಎನ್ನಲಾಗಿದೆ.

banner

ನಂತರ ಆಹಾರ ನಿರೀಕ್ಷಕ ನಾಗನಗೌಡ ರುದ್ರಗೌಡ ಚಿನ್ನಪ್ಪಗೌಡ ಅವರು ಸ್ಥಳಕ್ಕೆ ತೆರಳಿ ಲಾರಿಯನ್ನು ಪರಿಶೀಲಿಸಿದಾಗ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಬಾಯಿಕಟ್ಟಿದ್ದ ಅಕ್ಕಿ ಚೀಲಗಳು ಪತ್ತೆಯಾಗಿವೆ. ಚೀಲಗಳನ್ನು ಪರಿಶೀಲಿಸಿದಾಗ ಅವು ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಪಡಿತರ ಅಕ್ಕಿಯಾಗಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಲಾರಿಯಲ್ಲಿ ಸುಮಾರು 380 ರಿಂದ 400 ಚೀಲಗಳಷ್ಟು ಅಕ್ಕಿ ಇದ್ದು, ಪ್ರತಿ ಚೀಲವು ಅಂದಾಜು 45 ರಿಂದ 50 ಕೆ.ಜಿ. ತೂಕ ಹೊಂದಿತ್ತು ಎನ್ನಲಾಗಿದೆ. ಒಟ್ಟು ಸುಮಾರು 200 ಕ್ವಿಂಟಲ್ ಅಕ್ಕಿ, ಪ್ರತಿ ಕ್ವಿಂಟಲ್‌ಗೆ ₹2,200ರಂತೆ ಲೆಕ್ಕ ಹಾಕಿದರೆ ಸುಮಾರು ₹4.40 ಲಕ್ಷ ಮೌಲ್ಯ ಎಂದು ಅಂದಾಜಿಸಲಾಗಿದೆ.

ಅಕ್ಕಿಯ ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಾರಿಯಲ್ಲಿ ಇರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಲಾರಿ ಚಾಲಕನನ್ನು ವಿಚಾರಿಸಿದಾಗ, ತಾನು ವೀರೇಶ ಬಡಿಗೇರ, ಮುಂಡರಗಿ ಹಾಗೂ ಬೂದಪ್ಪ ಕುರಿ, ಶಿರೋಳ ಇವರೊಂದಿಗೆ ಸೇರಿಕೊಂಡು ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದುದಾಗಿ ತಿಳಿಸಿದ್ದಾನೆ ಎಂದು ಆಹಾರ ನಿರೀಕ್ಷಕರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ದೊಡ್ಡಬಸಪ್ಪ ವೀರುಪಣ್ಣ ಕಮತರ (40), ಗುಡದೂರು, ಕುಷ್ಟಗಿ ತಾಲೂಕು, ಕೊಪ್ಪಳ ಜಿಲ್ಲೆ; ವೀರೇಶ ಬಡಿಗೇರ, ಮುಂಡರಗಿ; ಹಾಗೂ ಬೂದಪ್ಪ ಕುರಿ, ಶಿರೋಳ, ಮುಂಡರಗಿ ತಾಲೂಕು ಇವರನ್ನು ಆರೋಪಿಗಳೆಂದು ದಾಖಲಿಸಲಾಗಿದೆ.

ಪೊಲೀಸರು ಸುಮಾರು ₹4.40 ಲಕ್ಷ ಮೌಲ್ಯದ 200 ಕ್ವಿಂಟಲ್ ಪಡಿತರ ಅಕ್ಕಿ ಹಾಗೂ ಸುಮಾರು ₹6 ಲಕ್ಷ ಮೌಲ್ಯದ ಕ್ಯಾಂಟರ್ ಲಾರಿ ಸೇರಿದಂತೆ ಒಟ್ಟು ಅಂದಾಜು ₹10.40 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ಘಟನೆ ಸಂಬಂಧ ಆಹಾರ ನಿರೀಕ್ಷಕ ನಾಗನಗೌಡ ಅವರು ಮುಂಡರಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಪಡಿತರ ಅಕ್ಕಿ ಎಲ್ಲಿಂದ ಸಂಗ್ರಹಿಸಲಾಗಿತ್ತು, ಎಲ್ಲಿಗೆ ಸಾಗಿಸಲಾಗುತ್ತಿತ್ತು ಹಾಗೂ ಅಕ್ರಮ ಸಾಗಾಟದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb