Home » News » ಚಿಕ್ಕಟ್ಟಿ ಶಾಲಾ–ಕಾಲೇಜುಗಳಲ್ಲಿ ಶಿಕ್ಷಕರ ದಿನಾಚರಣೆ: ಶಿಕ್ಷಕರು ವಿದ್ಯಾರ್ಥಿಗಳ ಜ್ಞಾನ, ವ್ಯಕ್ತಿತ್ವ, ಸಂಸ್ಕಾರ ಹಾಗೂ ಭವಿಷ್ಯ ರೂಪಿಸುವ ಶಿಲ್ಪಿಗಳು: ಡಾ. ಹೇಮರೆಡ್ಡಿ ಬಿ. ನೀಲಗುಂದ

ಚಿಕ್ಕಟ್ಟಿ ಶಾಲಾ–ಕಾಲೇಜುಗಳಲ್ಲಿ ಶಿಕ್ಷಕರ ದಿನಾಚರಣೆ: ಶಿಕ್ಷಕರು ವಿದ್ಯಾರ್ಥಿಗಳ ಜ್ಞಾನ, ವ್ಯಕ್ತಿತ್ವ, ಸಂಸ್ಕಾರ ಹಾಗೂ ಭವಿಷ್ಯ ರೂಪಿಸುವ ಶಿಲ್ಪಿಗಳು: ಡಾ. ಹೇಮರೆಡ್ಡಿ ಬಿ. ನೀಲಗುಂದ

by CityXPress
0 comments

ಗದಗ: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ, ಧಾರವಾಡದ ಡೀನ್ ಡಾ. ಹೇಮರೆಡ್ಡಿ ಬಿ. ನೀಲಗುಂದ ಮಾತನಾಡಿ, “ಬೋಧನೆಯು ಎಲ್ಲಾ ಇತರ ವೃತ್ತಿಗಳನ್ನು ಕಲಿಸುವ ಏಕೈಕ ವೃತ್ತಿ ಶಿಕ್ಷಕ” ಎಂದು ಹೇಳಿದರು.

ಇಂದು ನಾವು ಅತ್ಯಂತ ಅರ್ಥಪೂರ್ಣವಾದ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಪ್ರತಿಯೊಬ್ಬರ ಜೀವನದಲ್ಲಿಯೂ ತಂದೆ–ತಾಯಿಯ ನಂತರ ಅತ್ಯಂತ ಗೌರವದ ಸ್ಥಾನವನ್ನು ಪಡೆಯುವವರು ಶಿಕ್ಷಕರು. ಶಿಕ್ಷಕರು ಕೇವಲ ಪಾಠವನ್ನು ಬೋಧಿಸುವವರಲ್ಲ; ಅವರು ವಿದ್ಯಾರ್ಥಿಗಳ ಜ್ಞಾನ, ವ್ಯಕ್ತಿತ್ವ, ಸಂಸ್ಕಾರ ಮತ್ತು ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಎಂದರು.

ಭಾರತದ ಮಹಾನ್ ತತ್ವಜ್ಞಾನಿ, ಶಿಕ್ಷಣತಜ್ಞ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಶಿಕ್ಷಕ ವೃತ್ತಿಯ ಘನತೆಯನ್ನು ಎತ್ತಿಹಿಡಿದ ಅವರ ಜೀವನ ನಮಗೆಲ್ಲರಿಗೂ ಆದರ್ಶವಾಗಿದೆ ಎಂದು ಹೇಳಿದರು.

banner

“ಬೋಧನೆಯು ಎಲ್ಲಾ ಇತರ ವೃತ್ತಿಗಳನ್ನು ಕಲಿಸುವ ಏಕೈಕ ವೃತ್ತಿ ಶಿಕ್ಷಕ” ಎಂಬ ಮಾತಿನಂತೆ, ಪುಸ್ತಕದ ಜ್ಞಾನವನ್ನು ನೀಡುವುದರ ಜೊತೆಗೆ ಯೋಚಿಸುವ ಶಕ್ತಿ, ಪ್ರಶ್ನಿಸುವ ಮನೋಭಾವ, ಸತ್ಯ–ನ್ಯಾಯದ ಅರಿವು, ಶಿಸ್ತು, ಸಮಯಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ ಎಂದರು.

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಸ್ಮಾರ್ಟ್‌ಫೋನ್, ಇಂಟರ್‌ನೆಟ್ ಮತ್ತು ಕೃತಕ ಬುದ್ಧಿಮತ್ತೆಯಂತಹ ಅನೇಕ ಸಾಧನಗಳು ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುತ್ತಿವೆ. ಆದರೆ ಯಾವುದೇ ತಂತ್ರಜ್ಞಾನವೂ ಒಬ್ಬ ಉತ್ತಮ ಶಿಕ್ಷಕರ ಪ್ರೀತಿ, ಮಾರ್ಗದರ್ಶನ ಮತ್ತು ಮಾನವೀಯ ಸ್ಪರ್ಶವನ್ನು ಸಂಪೂರ್ಣವಾಗಿ ಬದಲಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಕರಿಗೆ ಗೌರವ ನೀಡುವುದು ಎಂದರೆ ಅವರ ಮಾತನ್ನು ಕೇವಲ ಕೇಳುವುದಲ್ಲ; ಅವರು ಕಲಿಸುವ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು. ಉತ್ತಮ ಅಂಕಗಳನ್ನು ಪಡೆಯುವುದರ ಜೊತೆಗೆ ಉತ್ತಮ ವ್ಯಕ್ತಿಯಾಗುವುದು ಗುರಿಯಾಗಬೇಕು ಎಂದು ಕರೆ ನೀಡಿದರು.

ಶಿಕ್ಷಕರ ಮುಂದೆ ಕುಳಿತಿರುವ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದು ಭವಿಷ್ಯ ಅಡಗಿದೆ. ಕೆಲವರು ವಿಜ್ಞಾನಿಗಳಾಗಬಹುದು, ಕೆಲವರು ವೈದ್ಯರು, ಇಂಜಿನಿಯರ್‌ಗಳು, ಅಧಿಕಾರಿಗಳು, ಉದ್ಯಮಿಗಳು, ಕಲಾವಿದರು ಅಥವಾ ಶಿಕ್ಷಕರಾಗಬಹುದು. ಶಿಕ್ಷಕರ ಒಂದು ಪ್ರೋತ್ಸಾಹದ ಮಾತು ವಿದ್ಯಾರ್ಥಿಯ ಬದುಕನ್ನೇ ಬದಲಾಯಿಸಬಲ್ಲದು. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ, ಆತ್ಮವಿಶ್ವಾಸ ತುಂಬಿ, ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಕಾರ್ಯ ಮುಂದುವರಿಯಬೇಕು ಎಂದರು.

ಶಿಕ್ಷಣವು ಉದ್ಯೋಗ ಪಡೆಯುವ ಸಾಧನ ಮಾತ್ರವಲ್ಲ; ಅದು ಬದುಕನ್ನು ಅರ್ಥಪೂರ್ಣಗೊಳಿಸುವ ಶಕ್ತಿ. ಜ್ಞಾನಕ್ಕೆ ಸಂಸ್ಕಾರ ಸೇರಿದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗುತ್ತದೆ. ಆದ್ದರಿಂದ ಶಾಲಾ–ಕಾಲೇಜುಗಳಲ್ಲಿ ಜ್ಞಾನಾಧಾರಿತ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಬೇಕು ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ವಾಯ್. ಚಿಕ್ಕಟ್ಟಿ ಮಾತನಾಡಿ, ಸೆಪ್ಟೆಂಬರ್ 5ರಂದು ಭಾರತದ ಶ್ರೇಷ್ಠ ತತ್ವಜ್ಞಾನಿ, ಶಿಕ್ಷಣತಜ್ಞ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಶಿಕ್ಷಕ ವೃತ್ತಿಯ ಘನತೆ ಮತ್ತು ಮಹತ್ವವನ್ನು ತಮ್ಮ ಬದುಕಿನ ಮೂಲಕ ಜಗತ್ತಿಗೆ ತೋರಿಸಿದ ಮಹಾನ್ ಶಕ್ತಿ ಅವರು ಎಂದರು.

ಒಬ್ಬ ವೈದ್ಯನಿಗೆ ರೋಗಿಯ ದೇಹವನ್ನು ಗುಣಪಡಿಸುವ ಜವಾಬ್ದಾರಿ ಇದ್ದರೆ, ಒಬ್ಬ ಶಿಕ್ಷಕನಿಗೆ ವಿದ್ಯಾರ್ಥಿಯ ಜ್ಞಾನ, ಚಿಂತನೆ, ವ್ಯಕ್ತಿತ್ವ ಮತ್ತು ಬದುಕನ್ನು ರೂಪಿಸುವ ಜವಾಬ್ದಾರಿ ಇದೆ. ನಮ್ಮ ಶಿಕ್ಷಣ ಸಂಸ್ಥೆಯ ದೃಷ್ಟಿಯಲ್ಲಿ ಶಿಕ್ಷಣವೆಂದರೆ ಕೇವಲ ಅಂಕಗಳನ್ನು ಗಳಿಸುವುದು ಅಥವಾ ಪದವಿ ಪಡೆಯುವುದು ಅಲ್ಲ. ಜ್ಞಾನಕ್ಕೆ ಸಂಸ್ಕಾರ, ಪ್ರತಿಭೆಗೆ ಮಾನವೀಯತೆ, ಶಿಕ್ಷಣಕ್ಕೆ ನೈತಿಕತೆ ಸೇರಿದಾಗ ಮಾತ್ರ ಅದು ನಿಜವಾದ ಶಿಕ್ಷಣವಾಗುತ್ತದೆ ಎಂದು ಹೇಳಿದರು.

ನಮ್ಮ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನವನ್ನು ನೀಡುವುದರ ಜೊತೆಗೆ ಶಿಸ್ತು, ಸಮಯಪ್ರಜ್ಞೆ, ಪ್ರಾಮಾಣಿಕತೆ, ದೇಶಪ್ರೇಮ, ಪರಿಸರ ಕಾಳಜಿ, ಹಿರಿಯರಿಗೆ ಗೌರವ ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯ ಮನೋಭಾವವನ್ನು ಬೆಳೆಸಬೇಕು. ಮಾಹಿತಿಯನ್ನು ನೀಡುವುದಕ್ಕಿಂತ ಮಾಹಿತಿಯನ್ನು ಸರಿಯಾಗಿ ಬಳಸುವ ವಿವೇಕವನ್ನು ಕಲಿಸುವುದು ಇಂದಿನ ಶಿಕ್ಷಕರ ದೊಡ್ಡ ಜವಾಬ್ದಾರಿಯಾಗಿದೆ ಎಂದರು.

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಕ್ಷಕರ ಸ್ಥಾನವನ್ನು ಎಂದಿಗೂ ಮರೆಯಬಾರದು. ಶಿಕ್ಷಕರಿಗೆ ಗೌರವ ನೀಡುವುದು ಎಂದರೆ ಅವರ ಮುಂದೆ ತಲೆಬಾಗುವುದಷ್ಟೇ ಅಲ್ಲ; ಅವರು ಕಲಿಸಿದ ಒಳ್ಳೆಯ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದಾಗ ಶಿಕ್ಷಕರು ಸಂತೋಷಪಡುತ್ತಾರೆ. ಆದರೆ ಅವರು ಉತ್ತಮ ಮನುಷ್ಯರಾಗುವಾಗ ಶಿಕ್ಷಕರು ಹೆಮ್ಮೆಪಡುತ್ತಾರೆ ಎಂದರು.

ಶಿಕ್ಷಕರ ಸೇವೆ ಒಂದು ಉದ್ಯೋಗವಲ್ಲ; ಅದು ಸಮಾಜ ನಿರ್ಮಾಣದ ಮಹತ್ತರ ಜವಾಬ್ದಾರಿ ಹಾಗೂ ರಾಷ್ಟ್ರ ನಿರ್ಮಾಣದ ಪವಿತ್ರ ಕಾರ್ಯ. “ಒಬ್ಬ ಶಿಕ್ಷಕನು ಒಂದು ಮಗುವಿಗೆ ಪಾಠ ಕಲಿಸುತ್ತಾನೆ; ಆದರೆ ಒಳ್ಳೆಯ ಶಿಕ್ಷಕನು ಒಂದು ಪೀಳಿಗೆಯ ಭವಿಷ್ಯವನ್ನು ರೂಪಿಸುತ್ತಾನೆ” ಎಂಬುದನ್ನು ಉಲ್ಲೇಖಿಸಿದ ಅವರು, ಶಿಕ್ಷಕರ ಸೇವೆ ಇನ್ನಷ್ಟು ಉಜ್ವಲವಾಗಲಿ, ವಿದ್ಯಾರ್ಥಿಗಳು ಜ್ಞಾನವಂತರಾಗುವುದರ ಜೊತೆಗೆ ಸಂಸ್ಕಾರವಂತರಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿ ಡಾ. ಹೇಮರೆಡ್ಡಿ ಬಿ. ನೀಲಗುಂದ ಅವರನ್ನು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಧಾರವಾಡದಿಂದ ಆಗಮಿಸಿದ್ದ ಶ್ರೀ ಎಂ. ಜಿ. ಮುಲ್ಲಾ, ಶ್ರೀ ಎಸ್. ಕೆ. ನದಾಫ್, ಡಾ. ಲತೀಫ್, ಅಥಣಿಯಿಂದ ಆಗಮಿಸಿದ್ದ ಅಭಿಷೇಕ ಶಿವಪ್ಪ ದಾನಪ್ಪಗೋಳ, ವಿನಯ್ ಚಿಕ್ಕಟ್ಟಿ ಪಿಯು ಕಾಲೇಜಿನ ಪ್ರಾಚಾರ್ಯರಾದ ವಿನಯ್ ಎಸ್. ಚಿಕ್ಕಟ್ಟಿ, ಬಿಸಿಎ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ, ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ದೀಪಾ ಬಿ. ಚಿಕ್ಕಟ್ಟಿ, ಸಿಬಿಎಸ್‌ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ರಿಯಾನಾ ಮುಲ್ಲಾ ಹಾಗೂ ಬೋಧಕ–ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಪಿಯುಸಿ ವಿದ್ಯಾರ್ಥಿನಿಯರಾದ ಇಂಪನಾ ಎಸ್. ಹಾಗೂ ವರ್ಷಿತಾ ಎ. ಪ್ರಾರ್ಥನಾ ಗೀತೆ ಹಾಡಿದರು. ಪಿಯುಸಿ ವಿದ್ಯಾರ್ಥಿನಿ ಸಾನ್ವಿಕಾ ಕಾಲ್ವಾಡಮಠ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಐಶ್ವರ್ಯ ಕೆ. ಹಾಗೂ ಕೀರ್ತಿ ಜಿ. ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿನಿಯರಾದ ಸೃಷ್ಟಿ ಎಂ. ಹಾಗೂ ವೈದೃತಿಕೆ ಎಸ್. ನಿರೂಪಣೆಯೊಂದಿಗೆ ವಂದನಾರ್ಪಣೆಗೈದರು.

ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಿದವು. ಶಿಕ್ಷಕಿಯರೂ ನೃತ್ಯ ಪ್ರದರ್ಶನ ನೀಡಿದರು. ಇದೇ ವೇಳೆ ಶಾಲಾ ವಾಹನ ಚಾಲಕರಾದ ಶ್ರೀ ಶೇಖಪ್ಪ ಅಣ್ಣಿಗೇರಿ ಅವರು ಕಾರ್ಯಕ್ರಮದ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿ ಅವರ ಕುರಿತು ಸ್ವರಚಿತ ಹಾಡೊಂದನ್ನು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb