ಮುಂಡರಗಿ: ವಿಘ್ನವಿನಾಶಕ ಗಣೇಶನ ಆರಾಧನೆಗೆ ಭಕ್ತಿ, ಶ್ರದ್ಧೆ ಹಾಗೂ ಸಂಪ್ರದಾಯವೇ ಮೂಲಾಧಾರ. ಆದರೆ, ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವದ ಸಂಭ್ರಮಕ್ಕೆ ಡಿಜೆಗಳ ಅಬ್ಬರವೇ ಪ್ರಧಾನ ಆಕರ್ಷಣೆಯಾಗುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ 13 ನೇ ದಿನದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಿಗದಿತ ಮಿತಿಗಿಂತ ಹೆಚ್ಚಿನ ಶಬ್ದದಲ್ಲಿ ಡಿಜೆ ಬಳಸಿದ ಆರೋಪದಡಿ ನಾಲ್ವರು ಗಣೇಶೋತ್ಸವ ಸಮಿತಿ ಅಧ್ಯಕ್ಷರು ಹಾಗೂ ನಾಲ್ವರು ಡಿಜೆ ಮಾಲೀಕರು ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ: ಮಹಲಿಂಗೇಶ ಹಿರೇಮಠ.ಗದಗ
ಸೆ.26 ರ ರಾತ್ರಿ 8 ಗಂಟೆಯಿಂದ ಸೆ. 27 ರ ಬೆಳಗಿನ ಜಾವ 2 ಗಂಟೆಯವರೆಗೆ ಮುಂಡರಗಿ ಪಟ್ಟಣದಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ಸುಪ್ರೀಂ ಕೋರ್ಟ್ನ ನಿರ್ದೇಶನಗಳು ಹಾಗೂ 2026 ನೇ ಸಾಲಿನ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗದಗ ಜಿಲ್ಲಾಧಿಕಾರಿಗಳು ಹೊರಡಿಸಿದ್ದ 75 ಡೆಸಿಬಲ್ಗಿಂತ ಅಧಿಕ ಶಬ್ದ ಉಂಟುಮಾಡುವ ಧ್ವನಿವರ್ಧಕಗಳ ಬಳಕೆಯ ನಿಷೇಧ ಆದೇಶವನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದಡಿ ದೂರುಗಳು ದಾಖಲಾಗಿವೆ.
ಮುಂಡರಗಿ ಪಟ್ಟಣದ ಎ.ಡಿ. ನಗರದ ಇಮ್ಮಡಿ ಪುಲಕೇಶಿ ಯುವಕ ಸಂಘದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಲ್ಲೇಶ ದೊಡ್ಡಮನಿ ಹಾಗೂ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಉಮೇಶ ಸೌಂಡ್ ನಾಗನೂರ ಡಿಜೆ ಮಾಲೀಕ ಉಮೇಶ ಈಶ್ವರಪ್ಪ ಬಡಿಗೇರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅದೇ ರೀತಿ, ಮುಂಡರಗಿಯ ಕೋಟೆ ಸರ್ಕಲ್ನ ಕೋಟೆ ಆಂಜನೇಯ ಗೆಳೆಯರ ಬಳಗದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವು ಕುರಿ ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರಿನ ಗೋಪಿ ಸೌಂಡ್ ಸಿಸ್ಟಮ್ ಡಿಜೆ ಮಾಲೀಕ ಗೋಪಾಲ ರಾಮ ಅಕ್ಕೊಳ್ಳಿ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮುಂಡರಗಿಯ ಭಜಂತ್ರಿ ಓಣಿಯ ಶ್ರೀ ಶಿವಶರಣ ನೂಲಿ ಚಂದಯ್ಯ ಯುವಕ ಸಂಘದ ಅಧ್ಯಕ್ಷ ಮನೋಜ್ ಭಜಂತ್ರಿ ಹಾಗೂ ಸವದತ್ತಿಯ ಕುರುವಿನಕೊಪ್ಪದ ಪ್ರವೀಣ್ ಸೌಂಡ್ ಸಿಸ್ಟಮ್ ಡಿಜೆ ಮಾಲೀಕ ಪ್ರವೀಣ್ ಹರ್ಲಾಪೂರ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂಡರಗಿ ಎ.ಡಿ. ನಗರದ ‘ಮುಂಡರಗಿ ಕಾ ಮಹಾರಾಜ’ ಗಣೇಶೋತ್ಸವ ಸಮಿತಿ ಅಧ್ಯಕ್ಷ ರೋಹಿತ್ ಲಮಾಣಿ ಹಾಗೂ ಬೆಳಗಾವಿಯ ಎಂ.ಬಿ. ಪ್ರೋ ಸೌಂಡ್ ಸಿಸ್ಟಮ್ನ ಮಾಲೀಕ ಆದಿತ್ಯ ಬಸಪ್ಪ ಬೆಂಡೆ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಜನವಸತಿ ಹಾಗೂ ಆಸ್ಪತ್ರೆಗಳಿರುವ ಪ್ರದೇಶಗಳಲ್ಲಿ ಸಾರ್ವಜನಿಕರ ದೈಹಿಕ ಸುರಕ್ಷತೆ ಮತ್ತು ಆರೋಗ್ಯಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸಲಾಗಿದೆ ಎಂಬುದು ದೂರಿನ ಪ್ರಮುಖ ಆರೋಪವಾಗಿದೆ. ಜಿಲ್ಲಾಧಿಕಾರಿಗಳ ನಿಷೇಧ ಆದೇಶ ಹಾಗೂ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ನಿರ್ದೇಶನಗಳನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ಉಪದ್ರವ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಈಗಾಗಲೇ ಈ ನಾಲ್ಕು ಸಂಘಟನೆಗಳ ಗಣೇಶೋತ್ಸವಗಳಿಗೆ ತರಿಸಲಾಗಿದ್ದ ಡಿಜೆ ಸಾಮಗ್ರಿಗಳನ್ನ ( ಸೌಂಡ್ ಸಿಸ್ಟಮ್) ಪೊಲೀಸರು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಸದ್ಯ ಈ ಪ್ರಕರಣದಲ್ಲಿನ ಆರೋಪಗಳ ಸತ್ಯಾಸತ್ಯತೆ ಹಾಗೂ ನಿಯಮ ಉಲ್ಲಂಘನೆಯ ಸ್ವರೂಪ ತನಿಖೆಯಿಂದ ದೃಢಪಡಬೇಕಿದೆ.
ಗಣಪತಿ ಹಬ್ಬದ ಸಂಪ್ರದಾಯ ಎತ್ತ ಸಾಗುತ್ತಿದೆ?
ಒಂದು ಕಾಲದಲ್ಲಿ ಗಣೇಶೋತ್ಸವ ಎಂದರೆ ಭಕ್ತಿಗೀತೆಗಳು, ಭಜನೆ, ಮಂಗಳವಾದ್ಯ, ಡೊಳ್ಳು ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಮೂಹಿಕ ಪೂಜೆಯ ಸಂಭ್ರಮ ಕಣ್ಣೆದುರು ಬರುತ್ತಿತ್ತು. ಊರಿನ ಹಿರಿಯರು, ಯುವಕರು, ಮಕ್ಕಳು ಒಟ್ಟಾಗಿ ಪಾಲ್ಗೊಳ್ಳುತ್ತಿದ್ದ ಗಣೇಶೋತ್ಸವವು ಸಾಮಾಜಿಕ ಸಾಮರಸ್ಯದ ಸಂಕೇತವಾಗಿತ್ತು.
ಆದರೆ, ಇಂದು ಬಹುತೇಖ ಗಣೇಶೋತ್ಸವಗಳಲ್ಲಿ ಭಕ್ತಿಗೀತೆಗಳಿಗಿಂತ ಡಿಜೆ ಸಂಗೀತಕ್ಕೆ, ಸಾಂಪ್ರದಾಯಿಕ ವಾದ್ಯಗಳಿಗಿಂತ ಭಾರಿ ಧ್ವನಿವರ್ಧಕಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿರುವುದು ಯುವ ಸಮೂಹ ಎತ್ತ ಸಾಗುತ್ತಿದೆ? ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ. ಗಣೇಶನ ಮೆರವಣಿಗೆ ಎಂದರೆ ಭಕ್ತಿಯ ಸಂಭ್ರಮವೋ ಅಥವಾ ಡಿಜೆಗಳ ಶಬ್ದ ಸಾಮರ್ಥ್ಯ ಪ್ರದರ್ಶಿಸುವ ಸ್ಪರ್ಧೆಯೋ ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಅದರಲ್ಲೂ ಯುವಕರು ಸಂಭ್ರಮಿಸುವುದರಲ್ಲಿ ತಪ್ಪಿಲ್ಲ. ಆದರೆ, ಆ ಸಂಭ್ರಮವೇ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತಾದರೆ ಅದನ್ನು ಪ್ರಶ್ನಿಸಬೇಕಾಗುತ್ತದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು, ವಯೋವೃದ್ಧರು, ಪುಟ್ಟ ಮಕ್ಕಳು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರ ಹಿತವನ್ನೂ ಗಣೇಶೋತ್ಸವ ಆಯೋಜಕರು ಗಮನದಲ್ಲಿಟ್ಟುಕೊಳ್ಳಬೇಕಿದೆ.
ಭಕ್ತಿಯ ಹೆಸರಿನಲ್ಲಿ ಶಬ್ದಮಾಲಿನ್ಯ ಎಷ್ಟು ಸರಿ?
ಗಣೇಶೋತ್ಸವವೆಂದರೆ ಕೇವಲ ಅದ್ಧೂರಿ ಮೆರವಣಿಗೆ ಹಾಗೂ ಡಿಜೆ ಅಬ್ಬರವಲ್ಲ. ಅದು ಭಕ್ತಿ, ಸಂಸ್ಕೃತಿ, ಸಂಪ್ರದಾಯ, ಸಾಮಾಜಿಕ ಸಾಮರಸ್ಯ ಹಾಗೂ ಯುವಕರ ಸೃಜನಶೀಲತೆಯನ್ನು ಪ್ರದರ್ಶಿಸುವ ವೇದಿಕೆಯಾಗಬೇಕಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭಾರಿ ಧ್ವನಿವರ್ಧಕಗಳನ್ನು ಅಳವಡಿಸುವ ಬದಲು ಸ್ಥಳೀಯ ಜಾನಪದ ಕಲಾವಿದರು, ಡೊಳ್ಳು ಕುಣಿತದ ತಂಡಗಳು ಹಾಗೂ ಸಾಂಪ್ರದಾಯಿಕ ವಾದ್ಯಗಳಿಗೆ ಪ್ರೋತ್ಸಾಹ ನೀಡುವ ಮೂಲಕವೂ ಗಣೇಶೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬಹುದಾಗಿದೆ.
ಮುಂಡರಗಿಯಲ್ಲಿ ನಾಲ್ಕು ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ನಾಲ್ವರು ಡಿಜೆ ಮಾಲೀಕರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಹಬ್ಬದ ಆಚರಣೆಯ ಸಂದರ್ಭದಲ್ಲಿ ಕಾನೂನು ಪಾಲನೆಯ ಮಹತ್ವವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ. ಮೆರವಣಿಗೆಯ ಸಂದರ್ಭದಲ್ಲಿ ನಿಜವಾಗಿ ಎಷ್ಟು ಡೆಸಿಬಲ್ ಶಬ್ದ ದಾಖಲಾಗಿತ್ತು? ಧ್ವನಿವರ್ಧಕ ಬಳಕೆಗೆ ಯಾವ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿತ್ತು? ನಿಷೇಧಿತ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಬಳಸಲಾಗಿತ್ತೇ? ಎಂಬ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ.
ಗಣೇಶೋತ್ಸವವು ಯುವಕರ ಸಂಘಟನಾ ಶಕ್ತಿ, ಸಾಂಸ್ಕೃತಿಕ ಪ್ರತಿಭೆ ಹಾಗೂ ಸಾಮಾಜಿಕ ಸೇವೆಗೆ ವೇದಿಕೆಯಾಗಬೇಕೇ ಹೊರತು, ಅತಿಯಾದ ಶಬ್ದದ ಸ್ಪರ್ಧೆಗೆ ಕಾರಣವಾಗಬಾರದು. ಗಣೇಶನಿಗೆ ಭಕ್ತಿ ಸಲ್ಲಿಸುವುದರ ಜೊತೆಗೆ ಸಾರ್ವಜನಿಕರ ನೆಮ್ಮದಿಯನ್ನೂ ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಭಕ್ತಿಯ ಸಂಭ್ರಮವೂ ಉಳಿಯಬೇಕು, ಸಂಪ್ರದಾಯವೂ ಉಳಿಯಬೇಕು, ಸಾರ್ವಜನಿಕರ ನೆಮ್ಮದಿಯೂ ಕಾಪಾಡಬೇಕು. ಇದೇ ನಿಜವಾದ ಅರ್ಥದಲ್ಲಿ ಸಾರ್ವಜನಿಕ ಗಣೇಶೋತ್ಸವದ ಸಾರ್ಥಕತೆಯಾಗಿದ್ದು, ಇನ್ನಾದರೂ ಗಣೇಶೋತ್ಸವ ಸಂಘಟನೆಗಳು ಹಾಗೂ ಅವುಗಳಿಗೆ ವಂತಿಕೆ ನೀಡುವ ದಾನಿಗಳೂ ಸಹ ನಾಗರಿಕ ಜವಾಬ್ದಾರಿಯನ್ನು ಅನುಸರಿಸಬೇಕಿದೆ.
