ಗದಗ: ದಿನನಿತ್ಯ ಸುದ್ದಿ ಬೆನ್ನಟ್ಟುವ ಪತ್ರಕರ್ತರು, ನಾಳೆಯಿಂದ ಬ್ಯಾಟ್–ಬಾಲ್ ಹಿಡಿದು ಕ್ರಿಕೆಟ್ ಮೈದಾನಕ್ಕಿಳಿಯಲಿದ್ದಾರೆ. ಮಾಧ್ಯಮದವರು ನಾವೆಲ್ಲ ಒಂದು ಎಂಬ ಸಂದೇಶ ಸಾರುವುದರ ಜೊತೆಗೆ ಪತ್ರಕರ್ತರ ದೈಹಿಕ–ಮಾನಸಿಕ ಸದೃಢತೆ, ಸ್ನೇಹ–ಸೌಹಾರ್ದ ಹಾಗೂ ಕ್ರೀಡಾಸ್ಪೂರ್ತಿಗೆ ವೇದಿಕೆಯಾಗುವಂತೆ ಗದಗದಲ್ಲಿ ಮೀಡಿಯಾ ಕ್ರಿಕೆಟ್ ಲೀಗ್ ಆಯೋಜಿಸಲಾಗಿದೆ.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 19, 20, 22 ಹಾಗೂ23 ರಂದು ನಗರದ ವಿದ್ಯಾದಾನ ಸಮಿತಿ ಕ್ರೀಡಾಂಗಣದಲ್ಲಿ ಗದಗ ಮಾಧ್ಯಮ ಕ್ರಿಕೆಟ್ ಲೀಗ್ ನಡೆಯಲಿದೆ. ನಾಳೆಯಿಂದಲೇ ಆರಂಭವಾಗಲಿರುವ ಪಂದ್ಯಾವಳಿಯಲ್ಲಿ ಪ್ರತಿದಿನ 10 ಓವರ್ಗಳ ಎರಡು ಪಂದ್ಯಗಳು ನಡೆಯಲಿದ್ದು, ನಾಲ್ಕು ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ.
ಪತ್ರಕರ್ತರಿಗಾಗಿ ಕ್ರಿಕೆಟ್ ಹಬ್ಬ
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಎಂ. ಹೆಬ್ಬಳ್ಳಿ, ಮಾಧ್ಯಮದವರು ನಾವೆಲ್ಲ ಒಂದು ಎಂಬ ಉದ್ದೇಶದಿಂದ ಗದಗ ಮಾಧ್ಯಮ ಕ್ರಿಕೆಟ್ ಲೀಗ್ ಆಯೋಜಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾದಾನ ಸಮಿತಿ ಕ್ರೀಡಾಂಗಣದಲ್ಲಿ ಪ್ರತಿದಿನ 10 ಓವರ್ಗಳ ಎರಡು ಪಂದ್ಯಗಳು ನಡೆಯಲಿದ್ದು, ನಾಲ್ಕು ತಂಡಗಳು ಗೆಲುವಿಗಾಗಿ ಸೆಣಸಾಡಲಿವೆ. ಸಂಘದ ಸದಸ್ಯತ್ವ ಪಡೆದ 14 ಮಂದಿ ಆಟಗಾರರು ಪ್ರತಿ ತಂಡದಲ್ಲಿದ್ದು, ಹೆಚ್ಚುವರಿಯಾಗಿ ಮತ್ತೊಬ್ಬ ಆಟಗಾರನನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.
ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ₹5,555 ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ₹3,333 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಪಂದ್ಯಾವಳಿಯ ನೇರಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ರಾಜು ಎಂ. ಹೆಬ್ಬಳ್ಳಿ ತಿಳಿಸಿದರು.
ಮೈಕ್, ಕ್ಯಾಮೆರಾ ಬದಿಗಿಟ್ಟು ಬ್ಯಾಟ್–ಬಾಲ್!
ನಿತ್ಯ ಸುದ್ದಿಗಾಗಿ ಓಡಾಡುವ ಪತ್ರಕರ್ತರು, ಒಂದೇ ಸುದ್ದಿಗಾಗಿ ಪೈಪೋಟಿ ನಡೆಸಿದರೂ ಇದೀಗ ಒಂದೇ ತಂಡದ ಪರವಾಗಿ ಮೈದಾನದಲ್ಲಿ ಜೊತೆಯಾಗಿ ಆಡಲಿದ್ದಾರೆ. ಮೈಕ್, ಪೆನ್ ಹಾಗೂ ಕ್ಯಾಮೆರಾ ಹಿಡಿಯುವ ಕೈಗಳು ಬ್ಯಾಟ್–ಬಾಲ್ ಹಿಡಿದು ಕ್ರೀಡಾಸ್ಪೂರ್ತಿ ಮೆರೆಯಲಿವೆ.
ಕ್ರೀಡೆಯ ಮೂಲಕ ಪತ್ರಕರ್ತರು ಕೆಲಸದ ಒತ್ತಡದಿಂದ ಹೊರಬಂದು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಮಾನಸಿಕ ಉಲ್ಲಾಸ ಪಡೆಯಲು ಹಾಗೂ ಸಹೋದ್ಯೋಗಿಗಳೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳಲು ಈ ಲೀಗ್ ಉತ್ತಮ ವೇದಿಕೆಯಾಗಲಿದೆ.
‘ಐತಿಹಾಸಿಕ ಕ್ಷಣ’
ವಿನ್ನರ್ಸ್ ತಂಡದ ಮಾಲೀಕ ಡಾ. ಅನಂತ ಕಾರ್ಕಳ ಮಾತನಾಡಿ, ಮಾಧ್ಯಮದವರು ನಾವೆಲ್ಲ ಒಂದು ಎನ್ನುವ ಉದ್ದೇಶದಿಂದ ಕ್ರಿಕೆಟ್ ಆಯೋಜಿಸಲಾಗಿದ್ದು, ಇದು ಐತಿಹಾಸಿಕ ಕ್ಷಣವಾಗಿದೆ. ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಎಲ್ಲ ಆಟಗಾರರು ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕು ಎಂದರು.
ಕ್ರೀಡಾ ಸಮಿತಿ ಅಧ್ಯಕ್ಷ ವೆಂಕಟೇಶ್ ಇಮರಾಪೂರ ಮಾತನಾಡಿ, ಲೀಗ್ ಉದ್ಘಾಟನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಆಹ್ವಾನಿಸಲಾಗುತ್ತದೆ. ಟಾಸ್ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿಗಳ ವಿತರಣೆಯನ್ನು ವಿವಿಧ ಗಣ್ಯರು ನೆರವೇರಿಸಲಿದ್ದಾರೆ ಎಂದರು.
ತಂಡಗಳೂ ಸಜ್ಜು; ಸಂಭ್ರಮವೂ ಶುರು!
ಪಂದ್ಯಾವಳಿಯ ಹಿನ್ನೆಲೆಯಲ್ಲಿ ವಿನ್ನರ್ಸ್ ತಂಡದ ಹಾಡು ಬಿಡುಗಡೆ ಮಾಡಲಾಯಿತು. ವಿನ್ನರ್ಸ್ ತಂಡದ ಮಾಲೀಕರಾದ ಸುನೀಲ್ ತೆಂಬದಮನಿ, ಟಿ.ಎನ್. ಭಾಂಡಗೆ, ರೂರಲ್ ಕಿಂಗ್ಸ್ ತಂಡದ ಮಾಲೀಕ ಜಗದೀಶ ಪೂಜಾರ, ಆರ್ಸಿಬಿ ತಂಡದ ಮಾಲೀಕರಾದ ಅಜಿತ ಹೊಂಬಾಳಿ, ನೈಟ್ ರೈಡರ್ಸ್ ತಂಡದ ಮಾಲೀಕ ಆನಂದಯ್ಯ ವಿರಕ್ತಮಠ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಹಾಗೂ ಸಂತೋಷ ಕೊಣ್ಣೂರ ಇದ್ದರು.
ಗದಗದಿಂದ ರಾಜ್ಯಮಟ್ಟದ ಟೂರ್ನಿಗೆ ಅವಕಾಶ
ಗದಗ ಮೀಡಿಯಾ ಕ್ರಿಕೆಟ್ ಲೀಗ್ ಕೇವಲ ಮನರಂಜನೆಗೆ ಸೀಮಿತವಾಗದೆ, ಉತ್ತಮ ಪ್ರದರ್ಶನ ನೀಡುವ ಪತ್ರಕರ್ತ ಕ್ರಿಕೆಟಿಗರಿಗೆ ರಾಜ್ಯಮಟ್ಟದ ವೇದಿಕೆಗೆ ಕಾಲಿಡುವ ಅವಕಾಶವನ್ನೂ ಕಲ್ಪಿಸಲಿದೆ.
ಗದಗ ಮೀಡಿಯಾ ಕ್ರಿಕೆಟ್ ಲೀಗ್ನ ಪಂದ್ಯಾವಳಿಯಲ್ಲಿಉತ್ತಮ ಪ್ರದರ್ಶನ ನೀಡಿದವರನ್ನುನ. 2 ಮತ್ತು3 ರಂದು ಮಡಿಕೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಟೂರ್ನಿಗೆ ಆಯ್ಕೆ ಮಾಡಲಾಗುತ್ತದೆ.
— ಅರುಣಕುಮಾರ ಹಿರೇಮಠ, ರಾಜ್ಯ ಕಾರ್ಯಕಾರಿಣಿ ಸದಸ್ಯ, ಕಾನಿಪ
ಒಟ್ಟಿನಲ್ಲಿ, ಪ್ರತಿದಿನ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಪತ್ರಕರ್ತರು ಇದೀಗ ತಮ್ಮ ಬ್ಯಾಟ್ ಮತ್ತು ಬಾಲ್ ಮೂಲಕ ಕ್ರೀಡಾಸ್ಪೂರ್ತಿಯ ಸಂದೇಶ ಸಾರಲು ಸಜ್ಜಾಗಿದ್ದಾರೆ. ನಾಳೆಯಿಂದಲೇ ಗದಗದ ವಿದ್ಯಾದಾನ ಸಮಿತಿ ಕ್ರೀಡಾಂಗಣದಲ್ಲಿ ಮೀಡಿಯಾ ಕ್ರಿಕೆಟ್ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ಪತ್ರಕರ್ತರ ಬ್ಯಾಟ್–ಬಾಲ್ ಕದನ ಕುತೂಹಲ ಮೂಡಿಸಿದೆ.
