Home » News » ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಗಳಲ್ಲಿ ಬಾಹ್ಯಾಕಾಶ ಸಂವಾದ: ‘ವಿದ್ಯಾರ್ಥಿಗಳ ಕನಸುಗಳು ಭೂಮಿಯ ಗಡಿ ದಾಟಿ ಬಾಹ್ಯಾಕಾಶದತ್ತ ಸಾಗಲಿ: ಎಚ್.ಡಿ. ಆನಂದ

ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಗಳಲ್ಲಿ ಬಾಹ್ಯಾಕಾಶ ಸಂವಾದ: ‘ವಿದ್ಯಾರ್ಥಿಗಳ ಕನಸುಗಳು ಭೂಮಿಯ ಗಡಿ ದಾಟಿ ಬಾಹ್ಯಾಕಾಶದತ್ತ ಸಾಗಲಿ: ಎಚ್.ಡಿ. ಆನಂದ

by CityXPress
0 comments

ಗದಗ: ವಿದ್ಯಾರ್ಥಿಗಳ ಕನಸುಗಳು ಭೂಮಿಯ ಗಡಿಗಳನ್ನು ಮೀರಿಸಿ ಬಾಹ್ಯಾಕಾಶದತ್ತ ಸಾಗಬೇಕು. ಬಾಹ್ಯಾಕಾಶ ವಿಜ್ಞಾನವು ಕೇವಲ ನಕ್ಷತ್ರಗಳು, ಗ್ರಹಗಳು ಹಾಗೂ ಚಂದ್ರನನ್ನು ನೋಡುವ ವಿಷಯವಲ್ಲ; ಅದು ಮಾನವನ ಕುತೂಹಲ, ಜ್ಞಾನಾನ್ವೇಷಣೆ ಹಾಗೂ ತಂತ್ರಜ್ಞಾನ ಪ್ರಗತಿಯ ವಿಶಾಲ ಕ್ಷೇತ್ರವಾಗಿದೆ ಎಂದು ಬೆಂಗಳೂರಿನ ಇಸ್ರೋ ವಿಶ್ರಾಂತ ವಿಜ್ಞಾನಿ ಎಚ್.ಡಿ. ಆನಂದ ಹೇಳಿದರು.

ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಕರ್ನಾಟಕ ಭೌತಶಾಸ್ತ್ರ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ಭಾರತೀಯ ಬಾಹ್ಯಾಕಾಶದ ಕುರಿತು ಸಂವಾದಾತ್ಮಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್‌ಇಡಿ ಪರದೆ ಮೂಲಕ ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಕುರಿತು ಸುಮಾರು ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಅವರು, ನಾವು ಆಕಾಶವನ್ನು ನೋಡಿದಾಗ ಅನೇಕ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತವೆ. ನಕ್ಷತ್ರಗಳು ಎಷ್ಟು ದೂರದಲ್ಲಿವೆ? ಬೇರೆ ಗ್ರಹಗಳಲ್ಲಿ ಜೀವಿಗಳಿವೆಯೇ? ಭೂಮಿಯ ಹೊರಗೆ ಮಾನವ ವಾಸಿಸಬಹುದೇ? ಬ್ರಹ್ಮಾಂಡ ಎಷ್ಟು ವಿಶಾಲವಾಗಿದೆ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ ಬಾಹ್ಯಾಕಾಶ ವಿಜ್ಞಾನವಾಗಿದೆ ಎಂದು ವಿವರಿಸಿದರು.

ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಜಗತ್ತಿನ ಗಮನ ಸೆಳೆಯುವ ಸಾಧನೆಗಳನ್ನು ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳು ಮತ್ತು ತಂತ್ರಜ್ಞರ ಪರಿಶ್ರಮದಿಂದ ಉಪಗ್ರಹ ಉಡಾವಣೆ, ಭೂಮಿಯ ವೀಕ್ಷಣೆ, ಹವಾಮಾನ ಮುನ್ಸೂಚನೆ, ಸಂವಹನ, ನ್ಯಾವಿಗೇಷನ್ ಹಾಗೂ ಗ್ರಹಗಳ ಅಧ್ಯಯನದಲ್ಲಿ ಭಾರತ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ ಎಂದರು.

banner

ಭಾರತದ ಬಾಹ್ಯಾಕಾಶ ಪಯಣವು ಆರ್ಯಭಟ ಉಪಗ್ರಹದಿಂದ ಆರಂಭವಾಗಿ ಚಂದ್ರಯಾನ ಹಾಗೂ ಮಂಗಳಯಾನದಂತಹ ಮಹತ್ವದ ಯೋಜನೆಗಳವರೆಗೆ ಬೆಳೆದಿದೆ. ಚಂದ್ರಯಾನ-3ರ ಯಶಸ್ಸು ಭಾರತದ ವೈಜ್ಞಾನಿಕ ಸಾಮರ್ಥ್ಯವನ್ನು ವಿಶ್ವದ ಮುಂದೆ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದರು.

ಬಾಹ್ಯಾಕಾಶ ವಿಜ್ಞಾನದ ಮಹತ್ವ ಕೇವಲ ಚಂದ್ರ ಮತ್ತು ಮಂಗಳ ಗ್ರಹಗಳ ಅಧ್ಯಯನಕ್ಕೆ ಸೀಮಿತವಾಗಿಲ್ಲ. ಇಂದು ನಾವು ಬಳಸುತ್ತಿರುವ ಮೊಬೈಲ್ ಸಂವಹನ, ಹವಾಮಾನ ಮಾಹಿತಿ, ದೂರದರ್ಶನ ಪ್ರಸಾರ, ನ್ಯಾವಿಗೇಷನ್, ಕೃಷಿ ಯೋಜನೆ ಹಾಗೂ ವಿಪತ್ತು ನಿರ್ವಹಣೆ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಬಾಹ್ಯಾಕಾಶ ತಂತ್ರಜ್ಞಾನದ ಕೊಡುಗೆ ಇದೆ ಎಂದು ತಿಳಿಸಿದರು.

ಬಾಹ್ಯಾಕಾಶ ಸಂಶೋಧನೆಯ ಮತ್ತೊಂದು ಪ್ರಮುಖ ಉದ್ದೇಶ ಭೂಮಿಯನ್ನು ಅರ್ಥಮಾಡಿಕೊಳ್ಳುವುದು ಹಾಗೂ ರಕ್ಷಿಸುವುದಾಗಿದೆ. ಉಪಗ್ರಹಗಳ ನೆರವಿನಿಂದ ಬರ, ಪ್ರವಾಹ, ಚಂಡಮಾರುತ, ಅರಣ್ಯ ಪ್ರದೇಶಗಳು, ಜಲಸಂಪನ್ಮೂಲಗಳು ಹಾಗೂ ಕೃಷಿಭೂಮಿಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ. ಹೀಗಾಗಿ ಬಾಹ್ಯಾಕಾಶ ವಿಜ್ಞಾನವು ಸಾಮಾನ್ಯ ಜನರ ಜೀವನಕ್ಕೂ ನೇರವಾಗಿ ಸಂಬಂಧಿಸಿದೆ ಎಂದರು.

ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿಜ್ಞಾನಿ, ಇಂಜಿನಿಯರ್ ಅಥವಾ ಬಾಹ್ಯಾಕಾಶ ಸಂಶೋಧಕರಾಗಬಹುದು. ಅದಕ್ಕಾಗಿ ಇಂದಿನಿಂದಲೇ ಕುತೂಹಲ ಬೆಳೆಸಿಕೊಳ್ಳಬೇಕು, ಪ್ರಶ್ನೆಗಳನ್ನು ಕೇಳಬೇಕು, ಪ್ರಯೋಗ ಮಾಡಬೇಕು, ವೈಫಲ್ಯಕ್ಕೆ ಹೆದರಬಾರದು ಹಾಗೂ ಹೊಸದನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಯಾವುದೇ ದೊಡ್ಡ ಸಾಧನೆ ಒಂದು ದಿನದಲ್ಲಿ ಆಗುವುದಿಲ್ಲ. ಅದರ ಹಿಂದೆ ನಿರಂತರ ಪರಿಶ್ರಮ, ಶಿಸ್ತು, ತಂಡದ ಕೆಲಸ ಹಾಗೂ ದೇಶದ ಮೇಲಿನ ಜವಾಬ್ದಾರಿಯ ಭಾವನೆ ಇರುತ್ತದೆ. ಇಸ್ರೋದ ಸಾಧನೆಗಳು ನಮಗೆ ಇದೇ ಸಂದೇಶ ನೀಡುತ್ತವೆ. ನಿಮ್ಮ ಕನಸುಗಳು ಭೂಮಿಯ ಗಡಿಗಳನ್ನು ಮೀರಿಸಿ ಬಾಹ್ಯಾಕಾಶದತ್ತ ಸಾಗಲಿ. ಆದರೆ ಕನಸುಗಳ ಜೊತೆಗೆ ಜ್ಞಾನ, ಮಾನವೀಯತೆ ಮತ್ತು ದೇಶಸೇವೆಯ ಸಂಕಲ್ಪವೂ ಇರಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಉಪನ್ಯಾಸದ ಬಳಿಕ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ನೀಡಿದರು.

ದೊಡ್ಡ ಸಾಧನೆಗಳು ದೊಡ್ಡ ಕನಸುಗಳಿಂದ ಆರಂಭ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್.ವೈ. ಚಿಕ್ಕಟ್ಟಿ ಗುರುಗಳು ಮಾತನಾಡಿ, ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳ ಹಿಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ಮತ್ತು ತಂತ್ರಜ್ಞರ ಅಪಾರ ಪರಿಶ್ರಮವಿದೆ. ಡಾ. ವಿಕ್ರಮ್ ಸಾರಾಭಾಯಿ ಅವರ ದೂರದೃಷ್ಟಿಯಿಂದ ಬೆಳೆದ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ ಇಂದು ಜಗತ್ತಿನ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದಿದೆ ಎಂದರು.

ಬಾಹ್ಯಾಕಾಶ ವಿಜ್ಞಾನವು ನಮಗೆ ಒಂದು ಪ್ರಮುಖ ಪಾಠ ಕಲಿಸುತ್ತದೆ. ದೊಡ್ಡ ಸಾಧನೆಗಳು ದೊಡ್ಡ ಕನಸುಗಳಿಂದ ಆರಂಭವಾಗುತ್ತವೆ. ಆದರೆ ಕನಸು ಮಾತ್ರ ಸಾಕಾಗುವುದಿಲ್ಲ. ಅದರ ಹಿಂದೆ ಜ್ಞಾನ, ಶಿಸ್ತು, ನಿರಂತರ ಅಧ್ಯಯನ, ಪ್ರಯೋಗಶೀಲತೆ, ತಂಡದ ಕೆಲಸ ಹಾಗೂ ದೇಶದ ಮೇಲಿನ ಬದ್ಧತೆ ಇರಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಕೆಲವರು ಭವಿಷ್ಯದಲ್ಲಿ ವಿಜ್ಞಾನಿಗಳಾಗಬಹುದು, ಇಂಜಿನಿಯರ್‌ಗಳಾಗಬಹುದು ಅಥವಾ ಬಾಹ್ಯಾಕಾಶ ಸಂಶೋಧಕರಾಗಬಹುದು. ಅವರು ಇಂದು ಕಲಿಯುವ ಗಣಿತ, ಭೌತಶಾಸ್ತ್ರ, ಕಂಪ್ಯೂಟರ್ ವಿಜ್ಞಾನ ಹಾಗೂ ತಂತ್ರಜ್ಞಾನಗಳು ನಾಳೆ ಅವರ ಕನಸುಗಳಿಗೆ ರೆಕ್ಕೆಗಳನ್ನು ನೀಡಲಿವೆ. ಭಾರತೀಯ ವಿಜ್ಞಾನಿಗಳು ಮುಂದಿನ ದಿನಗಳಲ್ಲಿ ಚಂದ್ರನಾಚೆಗೂ, ಮಂಗಳನಾಚೆಗೂ ಹಾಗೂ ಇನ್ನಷ್ಟು ದೂರದ ಬಾಹ್ಯಾಕಾಶದತ್ತ ಭಾರತದ ತ್ರಿವರ್ಣ ಧ್ವಜದ ಕೀರ್ತಿಯನ್ನು ಕೊಂಡೊಯ್ಯಲಿ ಎಂದು ಆಶಿಸಿದರು.

ವಿಜ್ಞಾನಿಗಳಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಇಸ್ರೋದ ವಿಶ್ರಾಂತ ವಿಜ್ಞಾನಿ ಎಚ್.ಡಿ. ಆನಂದ ಹಾಗೂ ವಿಶ್ರಾಂತ ಪ್ರೊ. ಎಂ.ಎಫ್. ಬಡಿಗೇರ್ ಗುರುಗಳನ್ನು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರೊ. ಎಂ.ಎಫ್. ಬಡಿಗೇರ್ ಗುರುಗಳು, ಬಿಸಿಎ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಬಿಪಿನ್ ಎಸ್. ಚಿಕ್ಕಟ್ಟಿ, ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ದೀಪಾ ಬಿ. ಚಿಕ್ಕಟ್ಟಿ, ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಉಪಪ್ರಾಚಾರ್ಯರಾದ ಶ್ರೀಮತಿ ರಿಯಾನಾ ಮುಲ್ಲಾ, ಕನ್ನಡ ಉಪನ್ಯಾಸಕರಾದ ಶ್ರೀಶೈಲ ಶಿಬಡಿಗೇರ್ ಹಾಗೂ ಬೋಧಕ–ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಾದ ದರ್ಶಿನಿ ಕೆ. ಹಾಗೂ ರ್ಧಿನಿ ಪ್ರಾರ್ಥನಾ ಗೀತೆ ಹಾಡಿದರು. ಪ್ರಾಚಾರ್ಯರಾದ ವಿನಯ್ ಎಸ್. ಚಿಕ್ಕಟ್ಟಿ ಸ್ವಾಗತ ಕೋರಿದರು. ಐಸಿಎಸ್‌ಇ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರಾದ ಸೃಜನ ಪ್ರಸರ್ ಹಾಗೂ ವರ್ಷಾ ರ್ಣೇಕರ್ ಇಸ್ರೋ ವಿಜ್ಞಾನಿಗಳ ಪರಿಚಯ ಮಾಡಿದರು. ಸಿಬಿಎಸ್‌ಇ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರಾದ ಸುಪ್ರೀತಾ ನೀಲಗುಂದ ಹಾಗೂ ಶ್ರೇಯಾ ಮುಳಗುಂದಮಠ ನಿರೂಪಣೆ ಮಾಡಿದರು. ಐಸಿಎಸ್‌ಇ ಶಾಲಾ ಶಿಕ್ಷಕಿ ನಮಿತಾ ಮುರಳಿ ವಂದನಾರ್ಪಣೆ ಸಲ್ಲಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb