ಗದಗ:
೨೦೨೫–೨೬ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬಿಪಿನ್ ಚಿಕ್ಕಟ್ಟಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಮ್ಮೆ ತಮ್ಮ ಮೇಲುಗೈ ಸಾಧಿಸಿದ್ದಾರೆ. ಈ ಫಲಿತಾಂಶವು ಕಾಲೇಜಿನ ಶ್ರಮ, ಶಿಸ್ತು ಹಾಗೂ ಸಮರ್ಪಣೆಯ ಪ್ರತಿಫಲವಾಗಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪೋಷಕರ ಒಟ್ಟಾರೆ ಪ್ರಯತ್ನದ ಪ್ರತಿಬಿಂಬವಾಗಿದೆ.
ಈ ಕುರಿತು ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು, “ಈ ವರ್ಷದ ಫಲಿತಾಂಶ ನಮ್ಮ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಉಪನ್ಯಾಸಕರ ಸಮರ್ಪಿತ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲದ ಸಮನ್ವಯದಿಂದ ಈ ಸಾಧನೆ ಸಾಧ್ಯವಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದರು.

ಅವರು ಮುಂದುವರೆದು, “ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವದ ಹಂತ. ಇದು ಅವರ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಘಟ್ಟವಾಗಿದೆ. ನಮ್ಮ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿರುವುದು ನಮಗೆ ಹೆಮ್ಮೆಯ ವಿಷಯ. ಕೆಲವರು ಅತ್ಯುತ್ತಮ ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ. ಮುಂದಿನ ಹಂತದಲ್ಲಿ ವಿದ್ಯಾರ್ಥಿಗಳು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ನಿಷ್ಠೆಯಿಂದ ಪರಿಶ್ರಮ ಪಟ್ಟು, ದೇಶದ ಉತ್ತಮ ನಾಗರೀಕರಾಗಿ ಬೆಳೆದು ಸಂಸ್ಥೆಗೆ ಕೀರ್ತಿ ತರಬೇಕು” ಎಂದು ಹಾರೈಸಿದರು.
ಕಾಲೇಜಿನ ಪ್ರಾಚಾರ್ಯರಾದ ವಿನಯ್ ಎಸ್. ಚಿಕ್ಕಟ್ಟಿಯವರು ಮಾತನಾಡಿ, “ಈ ಸಾಧನೆ ಕೇವಲ ಅಂಕಗಳ ಫಲವಲ್ಲ; ವಿದ್ಯಾರ್ಥಿಗಳ ಶಿಸ್ತಿನ ಜೀವನ, ನಿಷ್ಠೆ ಮತ್ತು ನಿರಂತರ ಅಭ್ಯಾಸದ ಪ್ರತಿಫಲವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆ ಹಿಂದೆ ಅವರ ಕಠಿಣ ಪರಿಶ್ರಮವಿದೆ. ಈ ಯಶಸ್ಸು ಜೀವನದ ಒಂದು ಹಂತ ಮಾತ್ರ; ಮುಂದಿನ ದಿನಗಳಲ್ಲಿ ಇನ್ನಷ್ಟು ಸವಾಲುಗಳು ಎದುರಾಗುತ್ತವೆ. ಆದ್ದರಿಂದ ಈ ಯಶಸ್ಸನ್ನು ಹೆಮ್ಮೆಯಿಂದ ಸ್ವೀಕರಿಸಿ, ಆದರೆ ಅಹಂಕಾರವಿಲ್ಲದೆ ಮುಂದಿನ ಗುರಿಗಳತ್ತ ಸಾಗಬೇಕು” ಎಂದು ಸಲಹೆ ನೀಡಿದರು.
“ವಿದ್ಯಾರ್ಥಿಗಳ ಸತತ ಪ್ರಯತ್ನ, ಉಪನ್ಯಾಸಕರ ಮಾರ್ಗದರ್ಶನ ಮತ್ತು ಪೋಷಕರ ಪ್ರೋತ್ಸಾಹದ ಸಹಕಾರದಿಂದ ಈ ಉತ್ತಮ ಫಲಿತಾಂಶ ಸಾಧ್ಯವಾಗಿದೆ. ನಿರೀಕ್ಷಿತ ಫಲಿತಾಂಶ ಪಡೆಯದ ವಿದ್ಯಾರ್ಥಿಗಳು ನಿರಾಶರಾಗದೆ ತಮ್ಮ ತಪ್ಪುಗಳಿಂದ ಪಾಠ ಕಲಿದು ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡುವತ್ತ ಗಮನ ಹರಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಸಾಮರ್ಥ್ಯವಿದೆ; ಅದನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ಸು ಖಚಿತ” ಎಂದು ಪ್ರೇರಣೆ ನೀಡಿದರು.

ಈ ಸಂದರ್ಭದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಿಪಿನ್ ಚಿಕ್ಕಟ್ಟಿ ಬಿಸಿಎ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ|| ಬಿಪಿನ್ ಎಸ್. ಚಿಕ್ಕಟ್ಟಿ, ವಿನಯ್ ಚಿಕ್ಕಟ್ಟಿ ಐಸಿಎಸ್‌ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಎಸ್. ಸ್ಥಾವರಮಠ, ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಉಪಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ರಿಯಾನಾ ಎಂ. ಮುಲ್ಲಾ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.
ಒಟ್ಟಾರೆ, ಬಿಪಿನ್ ಚಿಕ್ಕಟ್ಟಿ ಪಿಯು ಕಾಲೇಜಿನ ಈ ಸಾಧನೆ ಸ್ಥಳೀಯ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರೇಷ್ಠ ಸಾಧನೆಗಳತ್ತ ಸಂಸ್ಥೆ ಹೆಜ್ಜೆ ಇಡುವ ವಿಶ್ವಾಸ ಮೂಡಿಸಿದೆ.
