ಹಾವೇರಿ, ಏಪ್ರಿಲ್ 05: ಬಸವರಾಜ ಬೊಮ್ಮಾಯಿ ಅವರು ತಮಗೆ ನೀಡಲು ನಿರ್ಧರಿಸಿದ್ದ ಗೌರವ ಡಾಕ್ಟರೇಟ್ ಅನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ. ಹಾವೇರಿ ವಿಶ್ವವಿದ್ಯಾಲಯವು ತನ್ನ ಸಿಂಡಿಕೇಟ್ ಸಭೆಯಲ್ಲಿ ಬೊಮ್ಮಾಯಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿತ್ತು. ಆದರೆ, ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯಾಗಿ ಯಾವುದೇ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂಬ ನಿಲುವು ವ್ಯಕ್ತಪಡಿಸಿ ಅವರು ಈ ಗೌರವವನ್ನು ತಿರಸ್ಕರಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಬೊಮ್ಮಾಯಿ ಅವರು, ವಿಶ್ವವಿದ್ಯಾಲಯದ ಕುಲಪತಿಗಳು, ಉಪಕುಲಪತಿಗಳು, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರು ತಮಗೆ ನೀಡಿದ ಗೌರವಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. “ನನಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿರುವುದಕ್ಕೆ ಎಲ್ಲರಿಗೂ ಧನ್ಯವಾದಗಳು. ಆದರೆ ನಾನು ಈಗಾಗಲೇ ಕುಲಪತಿಗಳಿಗೆ ಈ ಗೌರವವನ್ನು ಸ್ವೀಕರಿಸುವುದಿಲ್ಲವೆಂದು ತಿಳಿಸಿದ್ದೇನೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕ ಸೇವೆಯೇ ತಮ್ಮ ಜೀವನದ ಗುರಿಯಾಗಿರುವುದರಿಂದ, ಅದರಿಗಾಗಿ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. “ಜನಸೇವೆಯಲ್ಲಿ ಇರುವ ನನಗೆ ಜನರ ಪ್ರೀತಿ ಮತ್ತು ವಿಶ್ವಾಸವೇ ಅತಿ ದೊಡ್ಡ ಪ್ರಶಸ್ತಿ. ಅದಕ್ಕಿಂತ ಹೆಚ್ಚಿನ ಗೌರವ ನನಗೆ ಬೇಡ. ಆದ್ದರಿಂದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸುವುದಿಲ್ಲವೆಂದು ವಿನಮ್ರವಾಗಿ ಪುನರುಚ್ಚರಿಸುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಗೌರವ ಡಾಕ್ಟರೇಟ್ ನೀಡುವ ಪರಂಪರೆ ಕುರಿತು ತಮ್ಮ ವೈಯಕ್ತಿಕ ಅಭಿಪ್ರಾಯವನ್ನೂ ಬೊಮ್ಮಾಯಿ ಹಂಚಿಕೊಂಡಿದ್ದಾರೆ. “ಗೌರವ ಡಾಕ್ಟರೇಟ್ ಎಂಬುದು ದೀರ್ಘಕಾಲದಿಂದ ಯಾವುದಾದರೂ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಮಹತ್ತರ ಸಾಧನೆ ಮಾಡಿದವರಿಗೆ ನೀಡಬೇಕಾದ ಗೌರವ. ಹೀಗಾಗಿ ಇದನ್ನು ಅಂಥ ಸಾಧಕರಿಗೆ ನೀಡಬೇಕು. ರಾಜಕಾರಣಿಗಳಿಗೆ ಅಥವಾ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಈ ಗೌರವ ನೀಡುವುದು ಸಮಂಜಸವಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ, ವಿಶ್ವವಿದ್ಯಾಲಯವು ತನ್ನ ತೀರ್ಮಾನವನ್ನು ಪುನರ್ವಿಚಾರಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ. ಮತ್ತೊಮ್ಮೆ, ತಮಗೆ ನೀಡಲಾದ ಗೌರವಕ್ಕೆ ಧನ್ಯವಾದಗಳನ್ನು ತಿಳಿಸುತ್ತಾ, ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂಬ ತಮ್ಮ ನಿಲುವನ್ನು ಬೊಮ್ಮಾಯಿ ಪುನರುಚ್ಚರಿಸಿದ್ದಾರೆ.
