ಗದಗ, ಜು. 5: ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಆರೋಪ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಅವರು ಗದಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮತದಾರರ ಪಟ್ಟಿಯಲ್ಲಿ ಹಲವು ಲೋಪಗಳಿವೆ ಎಂದು ಆರೋಪಿಸಿದರೆ, ಅದಕ್ಕೆ ಗದಗ ಶಾಸಕ ಹಾಗೂ ಮಾಜಿ ಸಚಿವ ಎಚ್.ಕೆ. ಪಾಟೀಲ್ ತೀವ್ರ ತಿರುಗೇಟು ನೀಡಿದರು. ಬಳಿಕ ಎಚ್.ಕೆ. ಪಾಟೀಲ್ ಪ್ರತಿಕ್ರಿಯೆಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಬೊಮ್ಮಾಯಿ, ತಮ್ಮ ಆರೋಪವನ್ನು ಸಮರ್ಥಿಸಿಕೊಂಡಿದ್ದು, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವರದಿ: ಮಹಲಿಂಗೇಶ್ ಹಿರೇಮಠ. ಗದಗ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪಗಳಿದ್ದು, ಹಲವೆಡೆ ಬೂತ್ ಮಟ್ಟದ ಅಧಿಕಾರಿಗಳು (BLO) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು. ಕೆಲವೆಡೆ ಅಧಿಕಾರಿಗಳು ದೇವಸ್ಥಾನ, ಮಸೀದಿ ಹಾಗೂ ಕಲ್ಯಾಣ ಮಂಟಪಗಳಲ್ಲಿ ಗುಂಪು ಗುಂಪಾಗಿ ಅರ್ಜಿಗಳನ್ನು ಭರ್ತಿ ಮಾಡಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಒತ್ತಡದಿಂದ ಎಸ್‌ಐಆರ್ ಪ್ರಕ್ರಿಯೆ ಹಳ್ಳ ಹಿಡಿದಂತಾಗಿದೆ ಎಂದು ದೂರಿದರು.
ಗದಗ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಸಾವಿರಾರು ಡಬಲ್ ಹಾಗೂ ತ್ರಿಬಲ್ ಹೆಸರುಗಳಿವೆ ಎಂದು ಹೇಳಿದ ಅವರು, ಗದಗ ಕ್ಷೇತ್ರದಲ್ಲಿ 2,305 ಹಾಗೂ ರೋಣ ಕ್ಷೇತ್ರದಲ್ಲಿ 3,804 ಮತದಾರರ ಹೆಸರುಗಳು ಒಂದಕ್ಕಿಂತ ಹೆಚ್ಚು ಕಡೆ ದಾಖಲಾಗಿವೆ ಎಂದು ಆರೋಪಿಸಿದರು. ಮಾಜಿ ಸಚಿವ ಎಚ್.ಕೆ. ಪಾಟೀಲ್ ಹೆಸರೇ ಮೂರು ಮತಗಟ್ಟೆಗಳಲ್ಲಿ ದಾಖಲಾಗಿರುವುದು ಕಂಡುಬಂದಿದೆ ಎಂದು ಹೇಳಿ, ಹುಲಕೋಟಿ ಭಾಗದ ಮತದಾರರ ಪಟ್ಟಿಯ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಸಾರ್ವಜನಿಕವಾಗಿ ಪರಿಚಿತ ವ್ಯಕ್ತಿಗಳ ಹೆಸರೇ ಮೂರು ಕಡೆ ದಾಖಲಾಗಿದ್ದರೆ, ಪರಿಷ್ಕರಣೆ ಹೇಗೆ ನಡೆಯುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಹೇಳಿದರು.
ಇದೇ ವೇಳೆ ಶಿಗ್ಗಾಂವ ತಾಲೂಕಿನ ಬಂಕಾಪೂರದಲ್ಲಿ ಎರಡು ಮಸೀದಿಗಳಲ್ಲಿ ಗುಂಪು ಸೇರಿಸಿ ಮತದಾರರ ನೋಂದಣಿ ಕಾರ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಬೊಮ್ಮಾಯಿ, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದರು. ಅಕ್ರಮ ನಡೆದಿರುವ ಕ್ಷೇತ್ರಗಳ ಅಧಿಕಾರಿಗಳು ಹಾಗೂ ತಹಶೀಲ್ದಾರರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ ಅವರು, ಚುನಾವಣಾ ಆಯೋಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಬೊಮ್ಮಾಯಿ ಆರೋಪಗಳಿಗೆ ಇಂದು ಸುದ್ದಿಗೋಷ್ಟಿ ನಡೆಸಿ, ಪ್ರತಿಕ್ರಿಯಿಸಿದ ಶಾಸಕ ಎಚ್.ಕೆ. ಪಾಟೀಲ್, ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ಆಧಾರರಹಿತವಾಗಿವೆ ಎಂದು ಕಿಡಿಕಾರಿದರು. ಒಂದೇ ಹೆಸರಿನ ಮೂವರು ವ್ಯಕ್ತಿಗಳನ್ನು ತಮ್ಮೊಂದಿಗೆ ಗೊಂದಲಗೊಳಿಸಿ ಚಾರಿತ್ರ್ಯ ವಧೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲೇ ಒಂದೇ ಹೆಸರಿನ ಮೂವರು “ಎಚ್.ಕೆ. ಪಾಟೀಲ್”ರನ್ನು ಪರಿಚಯಿಸಿದ ಅವರು, ತಮ್ಮ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ದಾಖಲೆಗಳನ್ನು ಪ್ರದರ್ಶಿಸಿ, “ಹೆಸರು ಒಂದೇ, ಆದರೆ ವ್ಯಕ್ತಿಗಳು ಬೇರೆ” ಎಂಬುದನ್ನು ದಾಖಲೆ ಸಮೇತ ವಿವರಿಸಿದರು. ಮಾಜಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ವ್ಯಕ್ತಿಯೊಬ್ಬರು ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಪರಿಶೀಲಿಸದೇ ಇಂತಹ ಹೇಳಿಕೆ ನೀಡಿರುವುದು ಶೋಭೆ ತರುವುದಿಲ್ಲ ಎಂದು ಹೇಳಿದರು.
ಗದಗ ಜಿಲ್ಲೆಯ ಜನತೆ ಹಾಗೂ ತಮ್ಮ ಬಳಿ ಬಸವರಾಜ ಬೊಮ್ಮಾಯಿ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಎಚ್.ಕೆ. ಪಾಟೀಲ್, ಕ್ಷಮೆ ಕೇಳದಿದ್ದರೆ ಜನರೇ ಸೂಕ್ತ ತೀರ್ಪು ನೀಡಲಿದ್ದಾರೆ ಎಂದು ಎಚ್ಚರಿಸಿದರು. ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪ ಹಾಗೂ ಅಪಪ್ರಚಾರ ನಡೆಸುವುದು ಖಂಡನೀಯ ಎಂದು ಹೇಳಿದರು.
ಎಚ್.ಕೆ. ಪಾಟೀಲ್ ಹೇಳಿಕೆಗೆ ಪ್ರತಿಯಾಗಿ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಬಸವರಾಜ ಬೊಮ್ಮಾಯಿ, ತಾವು ಯಾವುದೇ ವೈಯಕ್ತಿಕ ಆರೋಪ ಮಾಡಿಲ್ಲ ಎಂದು ಪುನರುಚ್ಚರಿಸಿದರು. “ನಾನು ಹೆಚ್.ಕೆ. ಪಾಟೀಲ್ ಹೆಸರು ಮೂರು ಕಡೆ ದಾಖಲಾಗಿರುವುದು ಕಂಡುಬಂದಿದೆ ಎಂದು ಮಾತ್ರ ಹೇಳಿದ್ದೆ. ಪರಿಷ್ಕರಣೆ ವೇಳೆ ಅದನ್ನು ಪರಿಶೀಲಿಸಬೇಕು ಎಂದಿದ್ದೆ. ಅದೇ ರೀತಿ ಗದಗದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಡಬಲ್ ಹಾಗೂ ತ್ರಿಬಲ್ ಹೆಸರುಗಳ ಪಟ್ಟಿಯನ್ನೂ ಚುನಾವಣಾ ಆಯೋಗಕ್ಕೆ ನೀಡಿದ್ದೇನೆ” ಎಂದು ಹೇಳಿದರು.
“ನಾನು ರಾಜಕೀಯ ಆರೋಪ ಮಾಡಿಲ್ಲ. ನಮಗೆ ಕಂಡುಬಂದ ಅಂಶಗಳನ್ನು ಮಾತ್ರ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇನೆ. ಅದಕ್ಕೆ ಸ್ಪಷ್ಟನೆ ನೀಡಬೇಕಿರುವುದು ಚುನಾವಣಾ ಆಯೋಗ” ಎಂದು ಅವರು ಹೇಳಿದರು.
ತಮ್ಮ ವಿರುದ್ಧ “ಕೀಳುಮಟ್ಟದ ರಾಜಕಾರಣ” ಎಂಬ ಎಚ್.ಕೆ. ಪಾಟೀಲ್ ಆರೋಪವನ್ನು ತಳ್ಳಿಹಾಕಿದ ಬೊಮ್ಮಾಯಿ, ಆ ಮಾತನ್ನು ಅವರು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಗುರುತಿಸಿ ಚುನಾವಣಾ ಆಯೋಗದ ಗಮನಕ್ಕೆ ತರುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು, ತಾವು ಅದನ್ನೇ ಮಾಡಿದ್ದೇನೆ ಎಂದರು.
ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಬೊಮ್ಮಾಯಿ, ಸ್ಪಷ್ಟನೆ ನೀಡುವ ಬದಲು ವೈಯಕ್ತಿಕ ಟೀಕೆ ಮಾಡಿರುವುದು ಬೇಸರದ ಸಂಗತಿ ಎಂದು ಹೇಳಿದರು. ಈ ವಿವಾದಕ್ಕೆ ಚುನಾವಣಾ ಆಯೋಗವೇ ಸೂಕ್ತ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಮತದಾರರ ಪಟ್ಟಿಯಲ್ಲಿನ ಲೋಪಗಳ ಆರೋಪದಿಂದ ಆರಂಭವಾದ ಈ ವಿವಾದ ಇದೀಗ ಬಸವರಾಜ ಬೊಮ್ಮಾಯಿ ಮತ್ತು ಎಚ್.ಕೆ. ಪಾಟೀಲ್ ನಡುವಿನ ತೀವ್ರ ವಾಕ್ಸಮರಕ್ಕೆ ತಿರುಗಿದ್ದು, ಚುನಾವಣಾ ಆಯೋಗ ಈ ಕುರಿತು ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

