Home » News » 33 ದಿನಗಳ ಶಿವಯೋಗ ಸಮಾಧಿ ಪೂರ್ಣಗೊಳಿಸಿದ ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳು ಅಸ್ವಸ್ಥ..!ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಆಸ್ಪತ್ರೆಗೆ ದಾಖಲು..! ಆತಂಕ ಪಡುವದು ಬೇಡ ಎಂದ ವೈದ್ಯರು..!

33 ದಿನಗಳ ಶಿವಯೋಗ ಸಮಾಧಿ ಪೂರ್ಣಗೊಳಿಸಿದ ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳು ಅಸ್ವಸ್ಥ..!ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಆಸ್ಪತ್ರೆಗೆ ದಾಖಲು..! ಆತಂಕ ಪಡುವದು ಬೇಡ ಎಂದ ವೈದ್ಯರು..!

by CityXPress
0 comments

ಗದಗ, ಜು. 5: ಲೋಕ ಕಲ್ಯಾಣ, ಉತ್ತಮ ಮಳೆ-ಬೆಳೆ ಹಾಗೂ ಸಕಲ ಜೀವ ಸಂಕುಲದ ಒಳಿತಿಗಾಗಿ ಗದಗ ತಾಲೂಕಿನ ಅಂತೂರು-ಬೆಂತೂರು ಮಠದಲ್ಲಿ 33 ದಿನಗಳ ಕಾಲ ಕೈಗೊಂಡಿದ್ದ ಶಿವಯೋಗ ಸಮಾಧಿ ತಪಸ್ಸನ್ನು ಭಾನುವಾರ ಪೂರ್ಣಗೊಳಿಸಿದ ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವರದಿ: ಮಹಲಿಂಗೇಶ್ ಹಿರೇಮಠ. ಗದಗ

ಅಂತೂರು-ಬೆಂತೂರು ಮಠದಲ್ಲಿ ಜೂನ್ ಮೊದಲ ವಾರದಿಂದ ಆರಂಭಗೊಂಡಿದ್ದ ಈ ವಿಶೇಷ ಶಿವಯೋಗ ಸಮಾಧಿ ಅನುಷ್ಠಾನ ರಾಜ್ಯದಾದ್ಯಂತ ಭಕ್ತರ ಗಮನ ಸೆಳೆದಿತ್ತು. ವೇದಮಂತ್ರಗಳ ಘೋಷ, ವಿಶೇಷ ಪೂಜಾ ವಿಧಿವಿಧಾನಗಳ ನಡುವೆ ನಿರ್ಮಿಸಲಾಗಿದ್ದ ಸಮಾಧಿ ಸ್ಥಳದಲ್ಲಿ ಶ್ರೀಗಳು 33 ದಿನಗಳ ಕಾಲ ಕಠಿಣ ತಪಸ್ಸು ನಡೆಸಿದ್ದರು.

ಮಠದ ಆವರಣದಲ್ಲಿ ನಿರ್ಮಿಸಿದ್ದ ಸಮಾಧಿ ಸ್ಥಳವನ್ನು ಇಟ್ಟಿಗೆ ಮತ್ತು ಸಿಮೆಂಟ್‌ನಿಂದ ಸಂಪೂರ್ಣ ಮುಚ್ಚಲಾಗಿತ್ತು. ಬೆಳಕು, ಗಾಳಿ, ಆಹಾರ ಹಾಗೂ ನೀರಿನ ಸಂಪರ್ಕವಿಲ್ಲದೆ ಶಿವಲಿಂಗದ ಸನ್ನಿಧಿಯಲ್ಲಿ ನಿರಂತರ ಧ್ಯಾನದಲ್ಲಿ ಶ್ರೀಗಳು ತೊಡಗಿದ್ದರು. ಲೋಕಶಾಂತಿ, ಉತ್ತಮ ಮಳೆ-ಬೆಳೆ ಹಾಗೂ ನಾಡಿನ ಸಮೃದ್ಧಿಗಾಗಿ ಈ ಶಿವಯೋಗ ಸಮಾಧಿ ಅನುಷ್ಠಾನ ಕೈಗೊಳ್ಳಲಾಗಿತ್ತು.

banner

ಭಾನುವಾರ ಬೆಳಿಗ್ಗೆ ನಿಗದಿತ ಸಮಯಕ್ಕೆ ಸಮಾಧಿ ಅನುಷ್ಠಾನ ಪೂರ್ಣಗೊಂಡ ಬಳಿಕ ವೇದಮಂತ್ರಗಳ ಪಠಣ, ಧಾರ್ಮಿಕ ವಿಧಿವಿಧಾನಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಸಮಾಧಿಯನ್ನು ತೆರೆಯಲಾಯಿತು. ಶ್ರೀಗಳು ಸಮಾಧಿಯಿಂದ ಹೊರಬಂದ ಕ್ಷಣವನ್ನು ವೀಕ್ಷಿಸಲು ಸಾವಿರಾರು ಭಕ್ತರು ಸೇರಿದ್ದರು.

ಆದರೆ ಸಮಾಧಿಯಿಂದ ಹೊರಬಂದ ನಂತರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ವೈದ್ಯರು ಸ್ಥಳದಲ್ಲೇ ಪ್ರಾಥಮಿಕ ತಪಾಸಣೆ ನಡೆಸಿದರು. ಬಳಿಕ ಹೆಚ್ಚಿನ ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣೆಗೆ ತ್ವರಿತಗತಿಯಲ್ಲಿ ಆಂಬ್ಯುಲೆನ್ಸ್ ಮೂಲಕ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀಗಳ ಆರೋಗ್ಯದ ಕುರಿತು ವೈದ್ಯರು ಅಗತ್ಯ ಪರೀಕ್ಷೆಗಳನ್ನು ನಡೆಸುತ್ತಿದ್ದು, ಚಿಕಿತ್ಸೆ ಮುಂದುವರಿದಿದೆ. ಶ್ರೀಗಳ ಆರೋಗ್ಯ ಶೀಘ್ರವಾಗಿ ಸುಧಾರಿಸಲಿ ಎಂದು ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

33 ದಿನಗಳ ಕಾಲ ನಡೆದ ಈ ಶಿವಯೋಗ ಸಮಾಧಿ ಅನುಷ್ಠಾನ ಜಿಲ್ಲೆಯಲ್ಲಿ ಪವಾಡಸದೃಶ್ಯ ಎನ್ನುವಂತೆ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಮಾಪ್ತಿಯ ದಿನವೂ ಸಾವಿರಾರು ಭಕ್ತರು ಅಂತೂರು-ಬೆಂತೂರು ಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದಿದ್ದಾರೆ.

33 ದಿನಗಳ ಶಿವಯೋಗ ಸಮಾಧಿ ಹಾಗೂ ನಿರಂತರ ಉಪವಾಸದ ಹಿನ್ನೆಲೆಯಲ್ಲಿ ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳು ದೈಹಿಕವಾಗಿ ಅಸ್ವಸ್ಥಗೊಂಡಿದ್ದು, ಅವರ ಆರೋಗ್ಯದ ಕುರಿತು ಜಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾಹಿತಿ ನೀಡಿದ್ದಾರೆ.

ಶ್ರೀಗಳ ದೇಹದಲ್ಲಿ ದೀರ್ಘಕಾಲ ಆಹಾರ ಹಾಗೂ ನೀರಿನ ಸೇವನೆ ಇಲ್ಲದ ಕಾರಣ ರಕ್ತದೊತ್ತಡ (ಬಿಪಿ) ಕಡಿಮೆಯಾಗಿರುವುದು ಸಹಜ. ಆದರೆ ಪ್ರಸ್ತುತ ಅವರ ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕೆ ಬಂದಿದೆ. ದೇಹದ ಉಷ್ಣಾಂಶ (ಬಾಡಿ ಟೆಂಪರೇಚರ್) ಸಹ ಕಡಿಮೆಯಾಗಿದ್ದು, ಇದೀಗ ಅದು ಕೂಡ ಸಹಜ ಸ್ಥಿತಿಗೆ ಮರಳಿದೆ.

ಶ್ರೀಗಳ ದೈಹಿಕ ಆರೋಗ್ಯದಲ್ಲಿ ಸ್ವಲ್ಪ ದೌರ್ಬಲ್ಯ ಕಂಡುಬಂದಿದ್ದರೂ, ಅವರ ಮಾನಸಿಕ ಆರೋಗ್ಯ ಉತ್ತಮವಾಗಿದ್ದು, ಅವರು ಸಂಪೂರ್ಣ ಪ್ರಜ್ಞಾವಂತ ಸ್ಥಿತಿಯಲ್ಲಿದ್ದಾರೆ.

ಸದ್ಯ ವೈದ್ಯಕೀಯವಾಗಿ ಅಗತ್ಯವಿರುವ ಕೆಲವು ಸಾಮಾನ್ಯ ಪರೀಕ್ಷೆಗಳನ್ನು (ರೂಟಿನ್ ಚೆಕ್‌ಅಪ್) ನಡೆಸಲಾಗುತ್ತಿದ್ದು, ವರದಿಗಳು ಬಂದ ಬಳಿಕ ಮುಂದಿನ ವೈದ್ಯಕೀಯ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಚಿಕಿತ್ಸೆಗಿರುವ ಸ್ಪಂದನೆ ಹಾಗೂ ವೈದ್ಯರ ಸಲಹೆಯ ಮೇರೆಗೆ ಶ್ರೀಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಕುರಿತು ತೀರ್ಮಾನಿಸಲಾಗುತ್ತದೆ.

ಶ್ರೀಗಳಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ. ಇದು ಮುನ್ನೆಚ್ಚರಿಕೆ ಕ್ರಮವಾಗಿ ನಡೆಸಲಾಗುತ್ತಿರುವ ಸಾಮಾನ್ಯ ವೈದ್ಯಕೀಯ ತಪಾಸಣೆಯಾಗಿದ್ದು, ಭಕ್ತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb