ಗದಗ: ರಥೋತ್ಸವದಂತಹ ಪವಿತ್ರ ಸಂದರ್ಭದಲ್ಲಿ ಕಾರು ಅಡ್ಡ ನಿಲ್ಲಿಸಿ ಕಿರಿಕ್ ಮಾಡಿದ ಘಟನೆ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಯುಗಾದಿ ಪಾಡ್ಯದಂದು ನಡೆದ ಬಸವೇಶ್ವರ ಜಾತ್ರೆಯ ವೇಳೆ ಈ ಘಟನೆ ಸಂಭವಿಸಿದ್ದು, ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜಾತ್ರೆಯ ಅಂಗವಾಗಿ ರಥೋತ್ಸವ ಸಾಗುತ್ತಿದ್ದ ಸಂದರ್ಭದಲ್ಲಿ, ಸಲೀಂ ಬಡೇಖಾನ್ ಮತ್ತು ಅವನ ತಂಡ ರಥ ಸಾಗುವ ವೇಳೆಯಲ್ಲಿಯೂ ರಸ್ತೆ ಮಧ್ಯ ಕಾರನ್ನು ನಿಲ್ಲಿಸಿದ್ದರೆಂಬ ಆರೋಪ ಕೇಳಿಬಂದಿದೆ.

ರಥೋತ್ಸವಕ್ಕೆ ಅಡ್ಡಿಯಾಗುತ್ತಿದ್ದ ಕಾರನ್ನು ಸೈಡಿಗೆ ಹಾಕುವಂತೆ ಜಾತ್ರಾ ಸಮಿತಿಯ ಯುವಕರು ಮನವಿ ಮಾಡಿದ್ದಾಗಿ ತಿಳಿದುಬಂದಿದೆ. ಆದರೆ, ಈ ಮಾತು ಮಾತಿನ ತಕರಾರಿಗೆ ತಿರುಗಿ, ನಂತರ ಹಲ್ಲೆಗೆ ಕಾರಣವಾಗಿದೆ ಎನ್ನಲಾಗಿದೆ.
ಜಾತ್ರಾ ಸಮಿತಿಯ ಸದಸ್ಯರ ಮೇಲೆಯೇ ಸಲೀಂ ಬಡೇಖಾನ್ ಹಾಗೂ ಅವನ ಸಂಗಡಿಗರು ಹಲ್ಲೆ ನಡೆಸಿದರೆಂಬ ಆರೋಪ ಕೇಳಿಬಂದಿದ್ದು, ಘಟನೆಯಿಂದಾಗಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಮಾಹಿತಿ ಲಭ್ಯವಾಗಿದೆ.
ರಥೋತ್ಸವದ ಸಮಯದಲ್ಲಿ ಈ ರೀತಿಯ ಘಟನೆ ಸಂಭವಿಸಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ಜಾತ್ರಾ ಸಮಿತಿಯವರು ನೀಡಿದ ದೂರಿನ ಮೇರೆಗೆ, ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಸಲೀಂ ಬಡೇಖಾನ್, ಲೋಕೇಶ್ ರಾಮಜಿ ಮತ್ತು ಮಂಜುನಾಥ್ ಹಾದಿಮನಿ ಅವರನ್ನು ಆರೋಪಿಗಳಾಗಿ ಗುರುತಿಸಲಾಗಿದ್ದು, ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಗದಗ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಶಾಂತಿ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ರಥೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಾಂತಿ ಮತ್ತು ಶಿಸ್ತು ಕಾಪಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದ್ದು, ಇಂತಹ ಅಪ್ರಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
