ಪಾಪನಾಶಿ ಬಳಿ ಅಕ್ರಮ ಚಟುವಟಿಕೆ ಬೆಳಕಿಗೆ; ಹಿಟ್ಯಾಚಿ, ಟಿಪ್ಪರ್ ವಶ – ಆರೋಪಿಯ ವಿರುದ್ಧ ಕ್ರಮಕ್ಕೆ ಅಧಿಕಾರಿಗಳ ಸಿದ್ಧತೆ
ಗದಗ, ಜು.20: ಅಕ್ರಮ ಮಣ್ಣು ಗಣಿಗಾರಿಕೆ ದಂಧೆ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದ್ದು, ಇದೀಗ ಸರ್ಕಾರಿ ಜಮೀನನ್ನೂ ಬಿಡದ ಮಟ್ಟಿಗೆ ದಂಧೆಕೋರರು ಮುಂದಾಗಿರುವ ಘಟನೆ ಗದಗ ನಗರದ ಹೊರವಲಯದ ಪಾಪನಾಶಿ ಗ್ರಾಮದ ಬಳಿಯ ಗುಡ್ಡದ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ನಗರಸಭೆಯ ಮಾಲೀಕತ್ವದ ಜಾಗದಲ್ಲಿಯೇ ಭಾರೀ ಪ್ರಮಾಣದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿರುವುದು ಪತ್ತೆಯಾಗಿದ್ದು, ಅವಳಿ ನಗರದ ಜನತೆಗೆ ನೀರಿನ ಸಮಸ್ಯೆಗೆ ಪರಿಹಾರದ ವಿಷಯವಾಗಿ ಸ್ಥಳ ಪರಿಶೀಲನೆಗೆ ತೆರಳಿದ್ದ ನಗರಸಭೆ ಪೌರಾಯುಕ್ತರೇ ಈ ದೃಶ್ಯ ಕಂಡು ಬೆರಗಾಗಿದ್ದಾರೆ.
ವರದಿ: ಮಹಲಿಂಗೇಶ್ ಹಿರೇಮಠ. ಗದಗ
ಗದಗ-ಬೆಟಗೇರಿ ಅವಳಿ ನಗರದಲ್ಲಿ ನೀರಿನ ಕೊರತೆ ಉಂಟಾದ ಸಂದರ್ಭದಲ್ಲಿ ಪರ್ಯಾಯ ನೀರಿನ ಮೂಲಗಳ ಕುರಿತು ಪರಿಶೀಲನೆ ನಡೆಸುವ ಉದ್ದೇಶದಿಂದ ನಗರಸಭೆ ಪೌರಾಯುಕ್ತ ರಮೇಶ ಪವಾರ ಹಾಗೂ ಸಿಬ್ಬಂದಿ ಪಾಪನಾಶಿ ಸಮೀಪದ ಸರ್ವೇ ನಂ. 723/27ರ ಜಾಗಕ್ಕೆ ಭೇಟಿ ನೀಡಿದ್ದರು. ನಗರಸಭೆಯು ನೀರಿನ ಸದ್ಭಳಕೆ ಹಾಗೂ ಭವಿಷ್ಯದ ಯೋಜನೆಗಳ ಹಿನ್ನೆಲೆಯಲ್ಲಿ ಈ ಜಮೀನನ್ನು ಖರೀದಿಸಿದ್ದು, ಅಲ್ಲಿರುವ ಬೃಹತ್ ಕಲ್ಲು ಕ್ವಾರಿಯಲ್ಲಿ ನೀರು ಸಂಗ್ರಹಿಸಿ, ಅಗತ್ಯ ಸಂದರ್ಭದಲ್ಲಿ ಲಿಫ್ಟ್ ಮೂಲಕ ನಗರಕ್ಕೆ ನೀರು ಪೂರೈಸುವ ಪ್ರಕ್ರಿಯೆಗೆ ಪೂರ್ವ ಸಿದ್ಧತೆಗಳನ್ನ ನಡೆಸಲಾಗುತ್ತಿದೆ.
ಈ ವೇಳೆ ನಗರಸಭೆಯ ಮಾಲೀಕತ್ವದ ಜಾಗದ ವ್ಯಾಪ್ತಿಯಲ್ಲಿಯೇ ಹಾಗೂ ಕ್ವಾರಿಗೆ ಹೊಂದಿಕೊಂಡಂತೆ ಬೇಕಾಬಿಟ್ಟಿಯಾಗಿ ಮಣ್ಣು ತೆಗೆದು ಅಕ್ರಮ ಗಣಿಗಾರಿಕೆ ನಡೆಸಿರುವುದು ಬೆಳಕಿಗೆ ಬಂದಿದೆ. ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಅಗೆದು ಮಣ್ಣು ಸಾಗಿಸಿರುವುದು ಕಂಡುಬಂದಿದ್ದು, ಹಲವು ದಿನಗಳಿಂದ ಅವ್ಯಾಹತವಾಗಿ ಈ ದಂಧೆ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ.
ಅಕ್ರಮ ಚಟುವಟಿಕೆ ಕಂಡು ಬೆಚ್ಚಿಬಿದ್ದ ಪೌರಾಯುಕ್ತರು ತಕ್ಷಣವೇ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿದ ಇಲಾಖೆಯ ಹಿರಿಯ ಭೂ ವಿಜ್ಞಾನಿ ನಾಗಭೂಷಣ ಹಾಗೂ ಕಿರಿಯ ಭೂ ವಿಜ್ಞಾನಿ ಸಾವಿತ್ರಿ ಅವರು ಪೊಲೀಸರ ಭದ್ರತೆಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಅಕ್ರಮ ಗಣಿಗಾರಿಕೆಗೆ ಬಳಸಲಾಗುತ್ತಿದ್ದ ಒಂದು ಹಿಟ್ಯಾಚಿ ಯಂತ್ರ ಹಾಗೂ KA-37 B-4344 ನೊಂದಣಿ ಸಂಖ್ಯೆಯ ಒಂದು ಟಿಪ್ಪರ್ ವಾಹನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗಿರುವುದು ದೃಢಪಟ್ಟಿದ್ದು, ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವ ಕಾರ್ಯವೂ ಆರಂಭವಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಶ್ರೀಕಾಂತ ಅಂಗಡಿ ಎಂಬಾತ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿರುವ ಆರೋಪ ಎದುರಿಸುತ್ತಿದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರ ಹಾಗೂ ನಗರಸಭೆಯ ಆಸ್ತಿಗೆ ಹಾನಿ ಉಂಟುಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಗರಸಭೆ ಪೌರಾಯುಕ್ತ ರಮೇಶ ಪವಾರ ಅವರು ಕೂಡ ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ಸರ್ಕಾರಿ ಜಮೀನಿಗೆ ಹಾನಿ ಉಂಟುಮಾಡುವವರ ವಿರುದ್ಧ ಯಾವುದೇ ರಾಜಿ ಇಲ್ಲದ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ರಮದ ಬಗ್ಗೆ ಪ್ರಶ್ನೆ;? ಇಲಾಖೆಯತ್ತ ಸಾರ್ವಜನಿಕರ ಚಿತ್ತ..!
ಇದೇ ವೇಳೆ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿದ್ದರೂ, ಬಹುತೇಕ ಪ್ರಕರಣಗಳಲ್ಲಿ ಕೇವಲ ನೋಟಿಸ್, ದಂಡ ಅಥವಾ ಪ್ರಾಥಮಿಕ ಕ್ರಮಗಳಿಗೆ ಮಾತ್ರ ಸೀಮಿತವಾಗಿರುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಅಕ್ರಮ ಮಣ್ಣು ದಂಧೆಗೆ ಪರಿಣಾಮಕಾರಿ ತಡೆ ಹಾಕುವಲ್ಲಿ ಇಲಾಖೆ ವಿಫಲವಾಗುತ್ತಿದೆ ಎಂಬ ಟೀಕೆಗಳೂ ವ್ಯಕ್ತವಾಗುತ್ತಿವೆ.
ಈ ಹಿನ್ನೆಲೆಯಲ್ಲಿ, ಈ ಬಾರಿ ಸ್ವತಃ ನಗರಸಭೆ ಪೌರಾಯುಕ್ತರೇ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಗಣಿಗಾರಿಕೆಯನ್ನು ಪ್ರತ್ಯಕ್ಷವಾಗಿ ಗಮನಿಸಿ ದೂರು ನೀಡಿರುವುದರಿಂದ, ಪ್ರಕರಣಕ್ಕೆ ಮಹತ್ವ ಸಿಕ್ಕಿದೆ. ಹೀಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆರೋಪಿತ ದಂಧೆಕೋರರ ವಿರುದ್ಧ ಯಾವ ರೀತಿಯ ಕಾನೂನು ಕ್ರಮ ಜರುಗಿಸುತ್ತದೆ?, ಅಕ್ರಮವಾಗಿ ತೆಗೆಯಲಾದ ಮಣ್ಣಿನ ಪ್ರಮಾಣವನ್ನು ಹೇಗೆ ಲೆಕ್ಕಹಾಕುತ್ತದೆ? ಹಾಗೂ ನಿಯಮಾನುಸಾರ ಯಾವ ಪ್ರಮಾಣದ ದಂಡ ಮತ್ತು ಪರಿಹಾರ ವಸೂಲಿ ಮಾಡುತ್ತದೆ? ಎಂಬುದರತ್ತ ಇದೀಗ ಸಾರ್ವಜನಿಕರ ಚಿತ್ತ ನೆಟ್ಟಿದೆ.
ಸರ್ಕಾರಿ ಜಮೀನಿನಲ್ಲೇ ಅಕ್ರಮ ಗಣಿಗಾರಿಕೆ ನಡೆದಿರುವುದು ಗಂಭೀರ ವಿಷಯವಾಗಿದ್ದು, ಈ ಪ್ರಕರಣದಲ್ಲಿ ಇಲಾಖೆ ಮಾದರಿ ಕ್ರಮ ಕೈಗೊಳ್ಳುತ್ತದೆಯೇ? ಅಥವಾ ಇತರೆ ಪ್ರಕರಣಗಳಂತೆ ಕೇವಲ ಔಪಚಾರಿಕ ಕ್ರಮಗಳಿಗೆ ಸೀಮಿತವಾಗುತ್ತದೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದಲ್ಲಿ ಮುಂದಿನ ತನಿಖೆ ಮುಂದುವರಿಸಿವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ಅಕ್ರಮ ಮಣ್ಣು ದಂಧೆಗೆ ಕಡಿವಾಣ ಹಾಕಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.
