ಗದಗ: ನಗರದ ಜಿಲ್ಲಾಡಳಿತದ ಅಧಿಕಾರಶಾಹಿ ಧೋರಣೆ ಖಂಡಿಸಿ ಹಾಗೂ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ. 5ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಡಳಿತ ಭವನದ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಬಸವರಾಜ ಸವಳಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟುಮಚಗಿ ಸೇರಿಂದತೆ ವಿವಿಧ ಗ್ರಾಮದಲ್ಲಿ ಬೆಳೆ ವೀಕ್ಷಣೆಗೆ ಬಂದಾಗ ಅಧಿಕಾರಿಗಳು ರೈತರೊಂದಿಗೆ ವರ್ತಿಸಿದೆ ಕಾಟಾಚಾರಕ್ಕೆ ಬೆಳೆ ವೀಕ್ಷಣೆ ಮಾಡಿದ್ದಾರೆ ಮತ್ತು
ಜು. 21ರಂದು ಜಿಲ್ಲಾಧಿಕಾರಿ ಅವರಿಗೆ ಬೆಳೆ ವಿಮಾ ಸಂಬಂಧಿಸಿದಂತೆ ಮನವಿ ಸಲ್ಲಿಸಲು ಹೋದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಪೊಲೀಸರನ್ನು ಕರೆಸಿ ರೈತರನ್ನು ಕೀಳುಮಟ್ಟದಲ್ಲಿ ನಡೆಸಿಕೊಂಡು ಅಧಿಕಾರದ ದರ್ಪ ಪ್ರದರ್ಶಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದು. ನರಗುಂದ ಬಂಡಾಯದ ಮಾದರಿಯಲ್ಲೇ ಗದಗ ಜಿಲ್ಲೆಯಲ್ಲೂ ರೈತರ ಬಂಡಾಯಕ್ಕೆ ನಾಂದಿ ಹಾಡಲಾಗಿದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರ 2025-26ನೇ ಸಾಲಿನ ಬೆಳೆ ಹಾನಿಗೆ ಸಮರ್ಪಕ ಪರಿಹಾರ ನೀಡಬೇಕು, ಬರಪೀಡಿತ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು, ಬೆಳೆ ವಿಮೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು, ಕೃಷಿ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಗಮೇಶ ಪವಾಡಶೆಟ್ಟಿ,ಶರಣಪ್ಪ ಮ್ಯಾಗೇರಿ, ವಿಜಯಕುಮಾರ ಸುಂಕದ, ಮುತ್ತನಗೌಡ ಚೌಡರಡ್ಡಿ, ವೀರಪ್ಪ ಕಾಳಗಿ, ಮುತ್ತಪ್ಪ ಜಗಲ್, ಯಲ್ಲಪ್ಪ ಗುರಿಕಾರ, ಗುರುಲಿಂಗಪ್ಪ ತಿಪ್ಪಶೆಟ್ಟಿ ಹಾಗೂ ಶರಣಪ್ಪ ಫಕ್ಕೀರಪ್ಪ ಉಪಸ್ಥಿತರಿದ್ದರು.
