ಬೆಂಗಳೂರು, ಏಪ್ರಿಲ್ 07:
2026ನೇ ಸಾಲಿನ ದ್ವಿತೀಯ ಪಿಯುಸಿ (2nd PUC) ಪರೀಕ್ಷೆಯ ಫಲಿತಾಂಶ ಪ್ರಕಟಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ತೀವ್ರ ನಿರೀಕ್ಷೆ ಮೂಡಿದ್ದರೂ, ಇಂದು (ಏಪ್ರಿಲ್ 07) ಫಲಿತಾಂಶ ಹೊರಬರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಮೂಲಗಳ ಪ್ರಕಾರ, ಫಲಿತಾಂಶ ಪ್ರಕಟಣೆಗೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ವಿಳಂಬವಾಗಿದ್ದು, ಇದೀಗ ಏಪ್ರಿಲ್ 9 ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಹೆಚ್ಚಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಫಲಿತಾಂಶ ಪ್ರಕಟಿಸಲು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರೂ, ಕೆಲವು ಅಡಚಣೆಗಳಿಂದ ಪ್ರಕಟಣೆ ಮುಂದೂಡಲಾಗಿದೆ. ಇದರಿಂದ ಫಲಿತಾಂಶ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ನಿರಾಸೆ ಮತ್ತು ಗೊಂದಲ ಉಂಟಾಗಿದೆ.
ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ ರಾಜ್ಯದಾದ್ಯಂತ ನಡೆದಿದ್ದು, ಸುಮಾರು 7,10,363ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆರಂಭದಲ್ಲಿ ಏಪ್ರಿಲ್ 7 ರಂದು ಫಲಿತಾಂಶ ಪ್ರಕಟವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದ್ದರೂ, ಅಧಿಕೃತ ಪ್ರಕಟಣೆ ಹೊರಬಾರದ ಹಿನ್ನೆಲೆಯಲ್ಲಿ ಅನಿಶ್ಚಿತತೆ ಉಂಟಾಗಿತ್ತು.

ಇದೀಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 9 ರಂದು ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಆನ್ಲೈನ್ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕ (Date of Birth) ನಮೂದಿಸಿ ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಲು ಅವಕಾಶ ಇರಲಿದೆ.
ಇನ್ನು ರಾಜ್ಯದಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಏಪ್ರಿಲ್ 9 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೆಲ ಭಾಗಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಶಿಕ್ಷಣ ಸಚಿವರ ಸಮ್ಮುಖದಲ್ಲಿ ಫಲಿತಾಂಶ ಪ್ರಕಟಿಸಲು ಅಗತ್ಯ ಅನುಮತಿ ಚುನಾವಣಾ ಆಯೋಗದಿಂದ ಪಡೆಯಬೇಕಿರುವುದು ಕೂಡ ವಿಳಂಬಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಒಟ್ಟಾರೆ, ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಇನ್ನೂ ಕೆಲ ದಿನಗಳು ತಾಳ್ಮೆಯಿಂದ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
