ಗದಗ, ಏ.18:
ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಿದ್ದ ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆ ಮತ ವಿಭಜನೆಯಲ್ಲಿ 278-211 ಅಂತರದಲ್ಲಿ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡ ವಸಂತ ಪಡಗದ ವಿರೋಧ ಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಮಹಿಳೆಯರಿಗೆ ಶೇ.33 ಮೀಸಲಾತಿ ಒದಗಿಸುವ ಸಾಂವಿಧಾನಿಕ ತಿದ್ದುಪಡಿ ವಿಧೇಯಕಕ್ಕೆ ವಿರೋಧ ಪಕ್ಷ ಬೆಂಬಲ ನೀಡದೇ ಇರುವುದು ದೇಶದ ಇತಿಹಾಸದಲ್ಲಿ ಕರಾಳ ದಿನವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಈ ಐತಿಹಾಸಿಕ ಅವಕಾಶವನ್ನು ಹಾಳು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ದೇಶದ ಹಿತದೃಷ್ಟಿಯಿಂದ ಹಾಗೂ ಮಹಿಳಾ ಸಬಲೀಕರಣದ ಉದ್ದೇಶದಿಂದ ಪ್ರಧಾನಿಯವರು ಪಕ್ಷಾತೀತವಾಗಿ ಮಸೂದೆಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರೂ, ರಾಜಕೀಯ ಹಠದಿಂದ ವಿರೋಧ ಪಕ್ಷಗಳು ಮಸೂದೆಗೆ ಬೆಂಬಲ ನೀಡಲಿಲ್ಲ ಎಂದು ಅವರು ಟೀಕಿಸಿದ್ದಾರೆ. ಇದು ಕೇವಲ ಮಸೂದೆ ಸೋಲಲ್ಲ, ದೇಶದ ಸೋಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಹಿಳೆಯರ ಹಕ್ಕುಗಳು ಸಿಗಬಾರದು ಎಂಬುದು ಕಾಂಗ್ರೆಸ್‌ನ ಅಜೆಂಡಾ ಎಂದು ಆರೋಪಿಸಿದ ಪಡಗದ, ದಶಕಗಳಿಂದ ಈ ಮಸೂದೆ ಜಾರಿಗೆ ಅಡ್ಡಿಯಾಗುತ್ತಿರುವ ಇಂಡಿ ಒಕ್ಕೂಟದ ನಿಜಮುಖ ಮತ್ತೊಮ್ಮೆ ಬಹಿರಂಗವಾಗಿದೆ ಎಂದಿದ್ದಾರೆ.

ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಇಂಡಿ ಒಕ್ಕೂಟ ಅನುಭವಿಸಲಿದೆ. ದೇಶದ ಅಭಿವೃದ್ಧಿಗೆ ಸಹಕಾರ ನೀಡದ ಕಾರಣದಿಂದಲೇ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟ ಹಲವು ರಾಜ್ಯಗಳಲ್ಲಿ ಸೋಲುತ್ತಿವೆ ಎಂದು ವಸಂತ ಪಡಗದ ತಿಳಿಸಿದ್ದಾರೆ.
