ಸುದ್ದಿ:
ಬೆಂಗಳೂರು/ಧಾರವಾಡ, ಏಪ್ರಿಲ್ 15: ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದೆ. ಮಾಜಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಆರೋಪಿಗಳಲ್ಲಿ 19 ಮಂದಿಯನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ.

ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಮಾಫಿಸಾಕ್ಷಿಗಳಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ, ಉಳಿದ 19 ಮಂದಿಯ ವಿರುದ್ಧವೇ ದೋಷಿ ತೀರ್ಪು ಪ್ರಕಟಿಸಲಾಗಿದೆ. ಪ್ರಕರಣದ ಶಿಕ್ಷೆಯ ಪ್ರಮಾಣದ ಕುರಿತು ಏಪ್ರಿಲ್ 16ರಂದು ವಾದ-ಪ್ರತಿವಾದ ನಡೆಯಲಿದ್ದು, ಬಳಿಕ ನ್ಯಾಯಾಲಯ ಅಂತಿಮ ಶಿಕ್ಷೆಯನ್ನು ಪ್ರಕಟಿಸಲಿದೆ. ಈ ತೀರ್ಪಿನೊಂದಿಗೆ ವಿನಯ್ ಕುಲಕರ್ಣಿಗೆ ಮತ್ತೆ ಜೈಲು ಶಿಕ್ಷೆ ಎದುರಾಗುವ ಸಾಧ್ಯತೆ ಉಂಟಾಗಿದೆ.
ಪ್ರಕರಣದ ವಿವರಗಳಿಗೆ ಬರುವುದಾದರೆ, 2016ರ ಜೂನ್ 15ರಂದು ಧಾರವಾಡ ನಗರದ ಸಪ್ತಾಪುರ ಪ್ರದೇಶದ ಜಿಮ್‌ನಲ್ಲಿ ಯೋಗೇಶ್ ಗೌಡರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ, ಆಸ್ತಿ ಸಂಬಂಧಿತ ವೈಮನಸ್ಸೇ ಕೊಲೆಗೆ ಕಾರಣ ಎಂದು ಶಂಕಿಸಿ ಕೆಲವು ಆರೋಪಿಗಳ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು.

ಆದರೆ, ಮೃತರ ಕುಟುಂಬಸ್ಥರು ಪ್ರಕರಣದ ಸಮಗ್ರ ತನಿಖೆಗಾಗಿ ಒತ್ತಾಯಿಸಿದ ಹಿನ್ನೆಲೆಯಲ್ಲಿ, 2019ರಲ್ಲಿ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸಲಾಯಿತು. ಬಳಿಕ ಸಿಬಿಐ ನಡೆಸಿದ ತನಿಖೆಯಲ್ಲಿ ಈ ಕೊಲೆ ರಾಜಕೀಯ ಪ್ರೇರಿತವಾಗಿರಬಹುದೆಂಬ ಅಂಶ ಬೆಳಕಿಗೆ ಬಂದಿದ್ದು, ವಿನಯ್ ಕುಲಕರ್ಣಿ ಸೇರಿದಂತೆ ಹಲವು ಮಂದಿಯ ವಿರುದ್ಧ ಆರೋಪಗಳು ದಾಖಲಿಸಲ್ಪಟ್ಟವು.
2020ರ ನವೆಂಬರ್‌ನಲ್ಲಿ ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿಯನ್ನು ಬಂಧಿಸಿ, ನಂತರ ಒಟ್ಟು 21 ಮಂದಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ ವಿನಯ್ ಕುಲಕರ್ಣಿಗೆ ಇದೀಗ ನ್ಯಾಯಾಲಯದ ತೀರ್ಪು ಮತ್ತೊಂದು ತಿರುವು ತಂದಿದೆ.
ಇದೀಗ ಪ್ರಕರಣದ ಅಂತಿಮ ಶಿಕ್ಷೆಯ ಘೋಷಣೆಯತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
