ಗದಗ: ಸನ್ಮಾರ್ಗ ಪಿಯು ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ‘ಸಂವಿಧಾನ ಶಿಲ್ಪಿ’ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಉಡುಪಿ ದೇಶಪಾಂಡೆ ಅವರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಗಾಗಿ ಅನೇಕ ದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ, ಭಾರತದ ಪರಿಸ್ಥಿತಿಗೆ ಹೊಂದುವಂತೆ ಸಂವಿಧಾನವನ್ನು ರೂಪಿಸಿ ಕೊಟ್ಟ ಮಹಾನ್ ನಾಯಕರು. ಅವರ ದಿವ್ಯ ಕಾರ್ಯಗಳಿಗೆ ನಮ್ಮ ಕೋಟಿ ಕೋಟಿ ನಮನಗಳು. ಭಾರತಕ್ಕೆ ಅವರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಚೇರ್ಮನ್ ಪ್ರೊ. ರಾಜೇಶ ಎಸ್. ಕುಲಕರ್ಣಿ ಅವರು ಡಾ. ಬಾಬು ಜಗಜೀವನರಾಮ್ ಕುರಿತು ಮಾತನಾಡಿ, ಅವರು ಸ್ವಾತಂತ್ರ್ಯ ಹೋರಾಟಗಾರರು, ದಲಿತ ನಾಯಕರು ಮತ್ತು ಹಸಿರು ಕ್ರಾಂತಿಯ ಹರಿಕಾರರಾಗಿದ್ದರು. ‘ಬಾಬೂಜಿ’ ಎಂದೇ ಪ್ರಸಿದ್ಧರಾದ ಅವರು ಭಾರತದ ಮೊದಲ ಸಂಪುಟದಲ್ಲಿ ಕಿರಿಯ ಸಚಿವರಾಗಿ ಸೇವೆ ಸಲ್ಲಿಸಿ, ನಂತರ ಕೃಷಿ, ರಕ್ಷಣಾ ಹಾಗೂ ಉಪಪ್ರಧಾನಿಯಾಗಿ ಸುಮಾರು ೩೪ ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ‘ಶ್ರೇಷ್ಠ ಸಂಸದೀಯ ಪಟು’ ಎಂಬ ಖ್ಯಾತಿ ಪಡೆದರು ಎಂದು ತಿಳಿಸಿದರು.
ಇಂತಹ ಇಬ್ಬರು ಮಹಾನ್ ಸ್ವಾತಂತ್ರ್ಯ ಸಂಗ್ರಾಮಿಗಳ ಜಯಂತಿಯನ್ನು ಮಹಾವಿದ್ಯಾಲಯದಲ್ಲಿ ಆಚರಿಸುವುದು ನಮ್ಮೆಲ್ಲರ ಸೌಭಾಗ್ಯವೆಂದು ಅಭಿಪ್ರಾಯಪಟ್ಟ ಅವರು, ವಿದ್ಯಾರ್ಥಿಗಳು ಇವರಂತೆಯೇ ದೇಶದ ಹೆಮ್ಮೆಯ ಸುಪುತ್ರರಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಎಂ.ಸಿ. ಹಿರೇಮಠ ಅವರ ನೇತೃತ್ವದಲ್ಲಿ ಭಾವಚಿತ್ರ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ನಿರ್ದೇಶಕರುಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ ಹಾಗೂ ಪ್ರೊ. ರಾಹುಲ್ ಒಡೆಯರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕಳೆಗಟ್ಟಿದರು.
ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
