ಲಕ್ಷ್ಮೇಶ್ವರ: ಹಳ್ಳದ ಪಕ್ಕದಲ್ಲಿ ಕೂಲಿ ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಡೆದಿದೆ.
ವರದಿ: ಮಹಲಿಂಗೇಶ ಹಿರೇಮಠ. ಗದಗ
ಶಿಗ್ಲಿ ಗ್ರಾಮದ ಶಿವಾನಂದ ರಮೇಶ್ ಕೋಪರ್ಡೇ (38) ಮೃತಪಟ್ಟವರು. ಈತನು ನೇಕಾರಿಕೆ ಕೈಮಗ್ಗದಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಶಿಗ್ಲಿ ಗ್ರಾಮದಿಂದ ಒಡೆಯರ ಮಲ್ಲಾಪುರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ಹಳ್ಳದ ಸಮೀಪ ಶಿವಾನಂದ ಅವರ ಮೃತದೇಹ ಪತ್ತೆಯಾಗಿದೆ.
ನಿನ್ನೆ ತಡರಾತ್ರಿ ವೇಳೆ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಮೃತದೇಹ ಹಳ್ಳದ ಪಕ್ಕದಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಿವಾನಂದ ಯಾವ ಕಾರಣಕ್ಕೆ ಆ ಸ್ಥಳಕ್ಕೆ ತೆರಳಿದ್ದನು ಹಾಗೂ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಮೃತದೇಹ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದು, ಶಿವಾನಂದ ಅವರ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆ ಕುರಿತು ಮಾಹಿತಿ ಪಡೆದ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಸಿಪಿಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸುವ ಕ್ರಮ ಕೈಗೊಳ್ಳಲಾಗಿದೆ.
ಶಿವಾನಂದನ ಸಾವಿಗೆ ಅಪಘಾತವೇ, ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದು, ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿನ ನಿಖರ ಕಾರಣ ತಿಳಿದುಬರಲಿದೆ.
ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆ ಮುಂದುವರಿದಿದೆ.
