ಗದಗ: ನಗರದಲ್ಲಿ ಮತ್ತೆ ಮುಸುಕುದಾರಿ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಗರದ ಕೇಶವ ಪಾರ್ಕ್ ಬಡಾವಣೆ ಹಾಗೂ ಪುಟ್ಟರಾಜ ನಗರ ಪ್ರದೇಶಗಳಲ್ಲಿ ಕಳ್ಳರ ತಂಡ ಸಂಚರಿಸಿದ್ದು, ಹಲವು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪುಟ್ಟರಾಜ ನಗರದಲ್ಲಿ ಗೋಕಾವಿ ಎಂಬುವರ ಮನೆಯನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದು, ಮನೆಯವರು ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಬೀಗ ಮುರಿದು ಒಳನುಗ್ಗಲು ಯತ್ನಿಸಿದ್ದಾರೆ. ಆದರೆ, ಕೆಲವು ಕಾರಣಗಳಿಂದ ಕಳ್ಳತನ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎನ್ನಲಾಗಿದೆ.

ಸ್ಥಳೀಯರ ಪ್ರಕಾರ, ಮುಖಕ್ಕೆ ಮುಸುಕು ಹಾಕಿಕೊಂಡು, ರಾಡ್ ಹಾಗೂ ಫಿಕಾಸಿ (ಕಟ್ಟಡ ಸಾಮಗ್ರಿ) ಹಿಡಿದು ಸುಮಾರು ಐದು ಜನರ ತಂಡ ರಾತ್ರಿ ವೇಳೆಯಲ್ಲಿ ಬಡಾವಣೆಗಳಲ್ಲಿ ಓಡಾಡುತ್ತಿದ್ದು, ಬೀಗ ಹಾಕಿದ ಮನೆಗಳನ್ನು ವಿಶೇಷವಾಗಿ ಟಾರ್ಗೆಟ್ ಮಾಡುತ್ತಿದೆ. ಹಲವಾರು ಮನೆಗಳ ಮುಂದೆ ಕಳ್ಳರ ಸಂಚಲನ ಕಂಡುಬಂದಿದ್ದು, ನಿವಾಸಿಗಳು ಭಯಭೀತರಾಗಿದ್ದಾರೆ.
ಮುಸುಕು ಗ್ಯಾಂಗ್ ನ ದೃಶ್ಯ ಮೇಲಿನ ಲಿಂಕ್ ನಲ್ಲಿ ಇದೆ. Subscribe ಮಾಡಿ….ಶೆರ್ ಮಾಡಿ
ಈ ಘಟನೆಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಕಳ್ಳರ ಚಲನವಲನ ಸ್ಪಷ್ಟವಾಗಿ ದಾಖಲಾಗಿದೆ. ವಿಡಿಯೋ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸ್ಥಳೀಯರು ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ರಾಜೀವಗಾಂಧಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ರಾತ್ರಿ ಪೆಟ್ರೋಲಿಂಗ್ ಹೆಚ್ಚಿಸಲಾಗಿದ್ದು, ಸಾರ್ವಜನಿಕರು ಸಹ ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಮನೆಗಳನ್ನು ಬೀಗ ಹಾಕಿ ಹೊರಡುವವರು ಹೆಚ್ಚಿನ ಜಾಗ್ರತೆ ವಹಿಸಬೇಕು. ನೆರೆಯವರಿಗೂ ಮಾಹಿತಿ ನೀಡುವುದು, ಸಿಸಿಟಿವಿ ವ್ಯವಸ್ಥೆ ಸ್ಥಾಪಿಸುವುದು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತಕ್ಷಣವೇ ಪೊಲೀಸರಿಗೆ ತಿಳಿಸುವುದು ಅವಶ್ಯಕವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
