Home » News » ಗ್ಯಾಸ್ ಸಿಲಿಂಡರ್ OTP ಯಿಂದ ಉಳಿದ ಜೀವ..! ಬಾವಿಯಲ್ಲಿ ಮೂರು ದಿನ ಸಿಲುಕಿದ್ದ ವೃದ್ಧ ರಕ್ಷಣೆಯೇ ರೋಚಕ..!

ಗ್ಯಾಸ್ ಸಿಲಿಂಡರ್ OTP ಯಿಂದ ಉಳಿದ ಜೀವ..! ಬಾವಿಯಲ್ಲಿ ಮೂರು ದಿನ ಸಿಲುಕಿದ್ದ ವೃದ್ಧ ರಕ್ಷಣೆಯೇ ರೋಚಕ..!

by CityXPress
0 comments

ಉಡುಪಿ:ಅಪರೂಪದ ಹಾಗೂ ಹೃದಯ ಕಲುಕುವ ಘಟನೆಯೊಂದು ಉಡುಪಿಯಲ್ಲಿ ಬೆಳಕಿಗೆ ಬಂದಿದ್ದು, ಗ್ಯಾಸ್ ಸಿಲಿಂಡರ್ OTP ಪ್ರಕ್ರಿಯೆಯೇ ವೃದ್ಧನೊಬ್ಬರ ಜೀವ ಉಳಿಸಿದ ಘಟನೆ ನಡೆದಿದೆ.

ಉಡುಪಿ ನಗರದ ಕೊಡವೂರು ವಾರ್ಡ್‌ನ ಕಂಬ್ಳಕಟ್ಟ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶ್ರೀನಿವಾಸ ಆಚಾರ್ಯ (62) ಎಂಬ ವೃದ್ಧ ಬಾವಿಗೆ ಬಿದ್ದು ಸುಮಾರು ಮೂರು ದಿನಗಳ ಕಾಲ ಅಲ್ಲಿ ಸಿಲುಕಿಕೊಂಡಿದ್ದರೂ, ಅದೃಷ್ಟವಶಾತ್ ಜೀವಂತವಾಗಿ ಪಾರಾಗಿದ್ದಾರೆ.

ಶ್ರೀನಿವಾಸ ಆಚಾರ್ಯರು ನಿರ್ಜನ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಗುಣಮುಖರಾಗಿದ್ದ ಅವರು, ಮನೆಯ ತೋಟಕ್ಕೆ ನೀರುಣಿಸಲು ತೆರಳಿದ ವೇಳೆ ಈ ಅವಘಡ ಸಂಭವಿಸಿದೆ.

ತೋಟದಲ್ಲಿದ್ದ ಬಾವಿಗೆ ಹಾಕಿದ್ದ ಪಂಪ್‌ನಲ್ಲಿ ಕಸ ತುಂಬಿಕೊಂಡಿದ್ದರಿಂದ, ಅದನ್ನು ಸ್ವಚ್ಛಗೊಳಿಸಲು ಬಾವಿಯ ಬಳಿಗೆ ತೆರಳಿದ್ದರು. ಈ ವೇಳೆ ಪೈಪ್ ಎಳೆಯಲು ಹೋಗುತ್ತಿದ್ದಾಗ ಹಗ್ಗ ತುಂಡಾಗಿ, ಆಯ ತಪ್ಪಿ ಬಾವಿಗೆ ಬಿದ್ದಿದ್ದಾರೆ. ಸುಮಾರು 15 ರಿಂದ 20 ಅಡಿ ಆಳದ ಬಾವಿಯಲ್ಲಿ ಬಿದ್ದ ವೃದ್ಧ, ಪೈಪ್ ಹಿಡಿದುಕೊಂಡೇ ಅಲ್ಲಿ ಕುಳಿತುಕೊಂಡಿದ್ದರು.

banner

ಒಂಟಿಯಾಗಿ ವಾಸವಾಗಿದ್ದ ಕಾರಣ, ಯಾರಿಗೂ ಈ ಘಟನೆ ತಿಳಿಯಲಿಲ್ಲ. ಬಾವಿಯೊಳಗಿಂದ ಎಷ್ಟೇ ಕೂಗಿದರೂ ಯಾರ ಗಮನಕ್ಕೂ ಬಂದಿರಲಿಲ್ಲ. ಸುಮಾರು ಎರಡು-ಮೂರು ದಿನಗಳ ಕಾಲ ಬಾವಿಯಲ್ಲೇ ಸಿಲುಕಿಕೊಂಡಿದ್ದೇನೆ ಎಂದು ವೃದ್ಧರು ನಂತರ ತಿಳಿಸಿದ್ದಾರೆ.

ಇದರ ಮಧ್ಯೆ, ಶ್ರೀನಿವಾಸ ಆಚಾರ್ಯರು ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ದು, ಹೊಸ ಸಿಲಿಂಡರ್ ಪಡೆಯಲು OTP ಅಗತ್ಯವಿತ್ತು. ಅವರು ಸಿಂಗಲ್ ಸಿಲಿಂಡರ್ ಹೊಂದಿದ್ದು, ಪರಿಚಿತ ಗಣೇಶ್ ಎಂಬವರಿಂದ ಖಾಲಿ ಸಿಲಿಂಡರ್ ಪಡೆದುಕೊಂಡಿದ್ದರು. ಹೊಸ ಸಿಲಿಂಡರ್ ನೀಡಲು ಗ್ಯಾಸ್ ಸರಬರಾಜುದಾರರು ಬಂದಾಗ, ಮನೆಗೆ ಶ್ರೀನಿವಾಸ ಆಚಾರ್ಯ ಕಾಣಿಸದಿದ್ದರಿಂದ ಅನುಮಾನ ವ್ಯಕ್ತವಾಯಿತು.

ಸ್ಥಳೀಯರು ಈ ವಿಷಯವನ್ನು ಗಣೇಶ್ ಅವರಿಗೆ ತಿಳಿಸಿದರು. ನಂತರ ಗಣೇಶ್ ತಮ್ಮ ಬಾಡಿಗೆ ಮನೆಯವರ ಸಹಾಯದಿಂದ ಹುಡುಕಾಟ ನಡೆಸಿದಾಗ, ಮನೆಯ ತೋಟದ ಬದಿಯಲ್ಲಿದ್ದ ಬಾವಿಯಲ್ಲಿ ಶ್ರೀನಿವಾಸ ಆಚಾರ್ಯ ಬಿದ್ದಿರುವುದು ಪತ್ತೆಯಾಯಿತು.

ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ವೃದ್ಧರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ.

ಆದರೆ ಮರೆವಿನ ಸಮಸ್ಯೆಯಿಂದಾಗಿ ಘಟನೆ ಕುರಿತು ಸ್ಪಷ್ಟವಾಗಿ ವಿವರಿಸಲು ವೃದ್ಧರಿಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.

ಒಟ್ಟಾರೆ, ಗ್ಯಾಸ್ ಸಿಲಿಂಡರ್ OTP ಪ್ರಕ್ರಿಯೆಯೇ ವೃದ್ಧನ ಜೀವ ಉಳಿಸಿದ ಅಪರೂಪದ ಘಟನೆಗೆ ಉಡುಪಿ ಸಾಕ್ಷಿಯಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb