ಲಕ್ಷೇಶ್ವರ : ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಕ್ಷಣ ಬಂದ್ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಹಶಿಲ್ದಾರಗೆ ಮನವಿ ಸಲ್ಲಿಸಿದರು.
ವರದಿ : ಪರಮೇಶ ಎಸ್ ಲಮಾಣಿ
ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಶರಣು ಗೊಡಿ ಮತ್ತು ತಾಲೂಕ ಅಧ್ಯಕ್ಷ ನಾಗೇಶ ಅಮರಾಪೂರ ಲಕ್ಷೇಶ್ವರ ತಾಲೂಕು ವ್ಯಾಪ್ತಿಯ ಅಕ್ಕಿಗುಂದ. ಬಟ್ಟೂರ, ಅಮರಾಪೂರ, ಹುಲ್ಲೂರು, ಹಿರೇಮಲ್ಲಾಪುರ, ನೇಲೋಗಲ್, ಆದರಹಳ್ಳಿ, ಬಡ್ಡಿ ಹಾಗೂ ಮಾಡಳ್ಳಿ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಕೆಲವು ಟಿಪ್ಪರ್ ಹಾಗೂ ಲಾರಿಗಳು ಬೇರೆ ತಾಲೂಕು ಮತ್ತು ದೂರದ ಊರುಗಳಿಗೆ ನೀಡಲಾಗಿರುವ ಪಾಸ್ಗಳನ್ನು ಪಡೆದು, ಅದೇ ಪಾಸ್ ಅನ್ನು ದುರುಪಯೋಗಪಡಿಸಿಕೊಂಡು ತಮಗೆ ಬೇಕಾದ ಸ್ಥಳಗಳಲ್ಲಿ ಮರಳು ತುಂಬಿಕೊಂಡು ಒಂದೇ ಪಾಸ್ನಲ್ಲಿ ನಾಲ್ಕೈದು ಟ್ರಿಪ್ಗಳಷ್ಟು ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ. ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಇದ್ದರೂ ಸಹ ಸಂಬಂಧಪಟ್ಟ ಇಲಾಖೆಯ ಕಣ್ಣುತಪ್ಪಿಸಿ ಜಿಪಿಎಸ್ನ್ನು ಬಂದ್ ಮಾಡಿ, ಮರಳು ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಕ್ರಮದ ಹೆಸರಿನಲ್ಲಿ ಅಕ್ರಮ ಮರಳು ಸಾಗಾಟ ನಡೆಸಿ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟುಮಾಡುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರಲ್ಲದೇ,
ಇದನ್ನು ತಡೆಯಬೇಕಾದ ತಾಲೂಕಿನ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಕೆಲ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳು ದಂಧೆಕೋರರಿಂದ ಪ್ರತಿ ತಿಂಗಳು “ಪ್ರಸಾದ” ಪಡೆದು ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಸಾರ್ವಜನಿಕರ ಗಂಭೀರ ಆರೋಪಗಳಿವೆ. ಇದರಿಂದ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ದಂಧೆ
ಇನ್ನಷ್ಟು ಹೆಚ್ಚಾಗುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಇದಲ್ಲದೆ ತಾಲೂಕಿನಾದ್ಯಂತ ಟ್ರ್ಯಾಕ್ಟರ್ಗಳ ಮೂಲಕವೂ ಅಕ್ರಮ ಮರಳು ಸಾಗಾಣಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಜಿಲ್ಲಾಧಿಕಾರಿಗಳು ತಾಲೂಕಿನಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ತಡೆಹಿಡಿದು, ಅಕ್ರಮ ಮರಳು ದಂಧೆಕೋರರು ಹಾಗೂ ಅವರಿಗೆ ಬೆಂಬಲ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಒಂದು ವಾರದೊಳಗಾಗಿ ಜರುಗಿಸಬೇಕು
ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂದರ್ಭದಲ್ಲಿ ಸುಲೇಮಾನ ಆಡೂರ, ಪ್ರವೀಣ ಆಚಾರ, ಜಾಫರ್ , ಬಸವರಾಜ ಮರಾಠಿ, ಬಸವರಾಜ ಅಮರಾಪುರ, ಮಲ್ಲಿಕ ಕಡಕೋಳ, ಅಶೋಕ ಕುರಿ, ಸುಲೇಮಾನ ಬಾರಿಗಿಡದ, ಖಾಧರಭಾಷಾ ಶಿರಹಟ್ಟಿ, ಹಾಲಪ್ಪ ಅಂಗಡಿ, ಗಿರೀಶ ಬಸಪ್ಪನವರ್, ತೌನೀಫ, ಜೀಲಾನಿ ಸಿದ್ದಿ, ಉಭೇದ, ಮಾಂತೇಶ ಯಳವತ್ತಿ, ಹನಂತ ಶರಸೂರಿ ಮತ್ತಿತರಿದ್ದರು.
