ಲಕ್ಷ್ಮೇಶ್ವರ : ನಗರ ಹಾಗೂ ತಾಲೂಕಿನಲ್ಲಿ ಬಡವರ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಹಾಗೂ ಸಾಗಾಟ ಮಾಡುತ್ತಿರುವ ಅಕ್ರಮ ಜಾಲದ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಜಯಕರ್ನಾಟಕ ಲಕ್ಷ್ಮೇಶ್ವರ ತಾಲೂಕ ಘಟಕದ ವತಿಯಿಂದ ತಹಶಿಲ್ದಾರಗೆ ಮನವಿ ಸಲ್ಲಿಸಿದರು.
ಉದ್ದೇಶಿಸಿ ಮಾತನಾಡಿದ ತಾಲೂಕ ಅಧ್ಯಕ್ಷ ಇಸ್ಮಾಯಿಲ್ ಆಡೂರ ಜಯ ಕರ್ನಾಟಕ ಲಕ್ಷ್ಮೇಶ್ವರ ನಗರ ಹಾಗೂ ತಾಲೂಕು ಘಟಕ ಗಂಭೀರ ಹಾಗೂ ಜನಹಿತದ ವಿಷಯವನ್ನು ಮನವರಿಕೆ ಮಾಡಿಕೊಡಲು ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ.
ಸರ್ಕಾರವು ಬಡಜನರ ಹಸಿವು ನೀಗಿಸಲು ಸಾರ್ವಜನಿಕ ವಿತರಣೆ ವ್ಯವಸ್ಥೆ ಮೂಲಕ ಉಚಿತವಾಗಿ ನೀಡುತ್ತಿರುವ ಪಡಿತರ ಅಕ್ಕಿಯನ್ನು ಕೆಲವು ಅಕ್ರಮ ದಂಧೆಕೋರರು ಲಕ್ಷ್ಮೇಶ್ವರ ನಗರ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಅತ್ಯಂತ ವಿಷಾದನೀಯ ಹಾಗೂ
ಆತಂಕಕಾರಿ ಸಂಗತಿಯಾಗಿದೆ.
ಅಕ್ರಮ ಅಕ್ಕಿ ದಂಧೆಕೋರರು ಗ್ರಾಮ ಗ್ರಾಮಗಳಿಗೆ ಹಾಗೂ ನಗರ ಪ್ರದೇಶಗಳ ಮನೆ ಮನೆಗಳಿಗೆ ತೆರಳಿ ಬಡ ಕುಟುಂಬಗಳಿಂದ ಪ್ರತಿ ಕೆ.ಜಿ. ಅಕ್ಕಿಯನ್ನು ₹12 ರಿಂದ ₹15 ರವರೆಗೆ ಖರೀದಿ ಮಾಡಿ, ನಂತರ ಅದನ್ನು ಹೆಚ್ಚಿನ ದರಕ್ಕೆ ದೊಡ್ಡ ಮಟ್ಟದ ಸಂಗ್ರಹಕಾರರಿಗೆ ಮಾರಾಟ ಮಾಡುತ್ತಿದ್ದಾರೆ. ಬಳಿಕ ಆ ಅಕ್ರಮ ಪಡಿತರ ಅಕ್ಕಿಯನ್ನು ಲಾರಿಗಳ ಮೂಲಕ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ ಎಂದು ಆರೋಪಿಸಿದರು.
ಈ ಅಕ್ರಮ ಜಾಲ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಡೆಗಟ್ಟಬೇಕಾದ ಆಹಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಅನುಮಾನಕ್ಕೆ ಕಾರಣವಾಗಿದೆ. ಕೆಲ ಅಧಿಕಾರಿಗಳು ಅಕ್ರಮ ದಂಧೆಕೋರರೊಂದಿಗೆ ಶಾಮೀಲಾಗಿದ್ದಾರೆ ಎಂಬ ಆರೋಪಗಳು ಸಹ ಕೇಳಿಬರುತ್ತಿವೆ.
ಬಡವರಿಗಾಗಿ ಸರ್ಕಾರ ನೀಡುವ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಕಳವು ಮಾಡಿ ಕಾಳಸಂತೆಗೆ ಹರಿಸುತ್ತಿರುವ ಈ ಅಕ್ರಮ ಜಾಲವು ಕೇವಲ ಕಾನೂನು ಉಲ್ಲಂಘನೆಯಲ್ಲ, ಅದು ಬಡವರ ಹಕ್ಕಿನ ಮೇಲೆ ನಡೆಯುತ್ತಿರುವ ದ್ರೋಹವಾಗಿದೆ. ಸರ್ಕಾರದ ಯೋಜನೆಗಳ ಉದ್ದೇಶವನ್ನೇ ಹಾಳು ಮಾಡುತ್ತಿರುವ ಇಂತಹ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಾವಶ್ಯಕವಾಗಿದೆ ಎಂದರಲ್ಲದೇ,
ಲಕ್ಷ್ಮೇಶ್ವರ ನಗರ ಹಾಗೂ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಮತ್ತು ಸಾಗಾಟದ ವಿರುದ್ಧ ವಿಶೇಷ ದಾಳಿ ನಡೆಸಬೇಕು.
ಅಕ್ರಮವಾಗಿ ಅಕ್ಕಿ ಖರೀದಿ, ಸಂಗ್ರಹ ಹಾಗೂ ಸಾಗಾಟ ಮಾಡುತ್ತಿರುವ ದಂಧೆಕೋರರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಪಾತ್ರದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು.
ಅಕ್ರಮ ಸಾಗಾಟ ತಡೆಯಲು ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಚೆಕ್ಪೋಸ್ಟ್ ಹಾಗೂ ವಿಶೇಷ ನಿಗಾ ವ್ಯವಸ್ಥೆ ಜಾರಿಗೊಳಿಸಬೇಕು.
ಬಡವರ ಪಾಲಿನ ಪಡಿತರ ಅಕ್ಕಿ ಕಾಳಸಂತೆಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಈ ಮನವಿಗೆ ತಕ್ಷಣ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಜಯ ಕರ್ನಾಟಕ ಸಂಘಟನೆ ವತಿಯಿಂದ ಲಕ್ಷ್ಮೇಶ್ವರ ನಗರ ಹಾಗೂ ತಾಲೂಕಿನಾದ್ಯಂತ ಉಗ್ರ ಹೋರಾಟ, ಪ್ರತಿಭಟನೆ ಹಾಗೂ ಸಾರ್ವಜನಿಕ ಜಾಗೃತಿ ಚಳವಳಿ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದರು.
ರಮೇಶ ಹಂಗನಕಟ್ಟಿ, ಇಸಾಕಭಾಷಾ ಹರಪ್ಪನಹಳ್ಳಿ, ಸದಾನಂದ ನಂದೇಣ್ಣವರ್, ಶರಣಪ್ಪ ಬಸಾಪೂರ, ಫೀರಸಾಭ ರೀತ್ತಿ, ನಜೀರ ಬಾಗಲಕೋಟ ಮತ್ತಿತರಿದ್ದರು.
