Home » News » “ಗಲ್ಫಿ ಚಹಾ ಅಂಗಡಿಯಿಂದ ಪ್ರೇಮದ ಜಾಲ..? | ಮುಂಡರಗಿಯಲ್ಲಿ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ..! ಒಬ್ಬ ಯುವಕ.. ಇಬ್ಬರು ಅಪ್ರಾಪ್ತ ಬಾಲಕಿಯರು..”!?

“ಗಲ್ಫಿ ಚಹಾ ಅಂಗಡಿಯಿಂದ ಪ್ರೇಮದ ಜಾಲ..? | ಮುಂಡರಗಿಯಲ್ಲಿ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ..! ಒಬ್ಬ ಯುವಕ.. ಇಬ್ಬರು ಅಪ್ರಾಪ್ತ ಬಾಲಕಿಯರು..”!?

by CityXPress
0 comments

ಗದಗ/ಮುಂಡರಗಿ ಜೂನ್ 9:

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಪ್ರೀತಿಯ ಮೋಸದ ಬಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ಬೆಳಕಿಗೆ ಬಂದಿದೆ. ನಿನ್ನೆ (8-6-2026) ಸೋಮವಾರ ಸಂಜೆ ಈ ಘಟನೆ ನಡೆದಿದ್ದು,ಇಂದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣದ ಕೇಂದ್ರಬಿಂದು ರಮೇಶ ಗಚ್ಚಿನಮನಿ ಆರೋಪಿ ಎನ್ನಲಾಗಿದ್ದು, ಯುವಕ ಹಾಗೂ ಅಪ್ರಾಪ್ತ ಬಾಲಕಿ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ.

ವರದಿ: ಮಹಲಿಂಗೇಶ ಹಿರೇಮಠ. ಗದಗ

ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಲಕಿಯ ಸಾವಿನ ಹಿಂದೆ ಪ್ರೇಮ ಸಂಬಂಧ, ಮಾನಸಿಕ ನೋವು ಹಾಗೂ ವಂಚನೆ ಆರೋಪಗಳಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ತನಿಖೆ ಮಹತ್ವ ಪಡೆದುಕೊಂಡಿದೆ. ಸದ್ಯ ಈ ಪ್ರಕರಣ ತಾಲೂಕಿನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪ್ರೇಮ ಸಂಬಂಧ, ವಂಚನೆ ಹಾಗೂ ಇತರೆ ಗಂಭೀರ ಆರೋಪಗಳ ಸುತ್ತ ತನಿಖೆ ನಡೆಯಬೇಕಾದ ಅಗತ್ಯ ಎದುರಾಗಿದೆ.

banner

ಮೃತ ಬಾಲಕಿ ಮತ್ತು ರಮೇಶ ಗಚ್ಚಿನಮನಿ ಇವರಿಬ್ಬರೂ ಕಳೆದ ಕೆಲವು ದಿನಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದೇ ಪ್ರೀತಿ ಇವರಿಬ್ಬರ ನಡುವೆ ಅತ್ಯಂತ ಆತ್ಮೀಯತೆಗೂ ಕಾರಣವಾಗಿತ್ತು. ಈ ನಡುವೆ, ಇದೇ ಯುವಕ ರಮೆಶ ಮತ್ತೊಬ್ಬ ಅಪ್ರಾಪ್ತ ಬಾಲಕಿಯೊಂದಿಗೂ ಆಪ್ತ ಸಂಪರ್ಕ ಹೊಂದಿದ್ದನು ಎಂಬ ಮಾಹಿತಿ ಹೊರಬಂದಿದ್ದು, ಇದೇ ವಿಚಾರ ಮುಂಡರಗಿ ಪಟ್ಟಣದಲ್ಲಿ ವಾಸವಿದ್ದ ಬಾಲಕಿಯ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿ, ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗಿದೆ.

ಮೂಲಗಳ ಪ್ರಕಾರ, ಮತ್ತೋರ್ವ ಬಾಲಕಿಯೊಂದಿಗೆ ಯುವಕನಿರುವ ಕೆಲವು ಆತ್ಮೀಯ ಛಾಯಾಚಿತ್ರಗಳು ಹಾಗೂ ವಿಡಿಯೋಗಳು ಮುಂಡರಗಿ ಮೂಲದ ಬಾಲಕಿಯ ಗಮನಕ್ಕೆ ಬಂದಿದ್ದವು. ಈ ವಿಚಾರದಿಂದಲೇ ಬಾಲಕಿ ತೀವ್ರವಾಗಿ ಮನನೊಂದಿದ್ದಳು ಎಂದು ಹೇಳಲಾಗುತ್ತಿದೆ.

ಘಟನೆಯ ದಿನವಾದ ಸೋಮವಾರ ಸಂಜೆ, ಬಾಲಕಿ ಯುವಕನಿಗೆ ವಿಡಿಯೋ ಕಾಲ್ ಮಾಡುವ ಮೂಲಕ, ರಮೇಶನೊಂದಿಗೆ ಜಗಳವಾಡುತ್ತಲೇ, ಅದೇ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ವಿಡಿಯೋ ಕಾಲ್ ವೇಳೆ ಪರಿಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿದ ಯುವಕ ತನ್ನ ಸ್ನೇಹಿತರಿಗೆ ಕರೆ ಮಾಡಿ ಬಾಲಕಿಯ ಮನೆಗೆ ತೆರಳುವಂತೆ ಸೂಚಿಸಿದ್ದಾನೆ. ಆದರೆ ರಮೇಶನ ಸ್ನೇಹಿತರು ಸ್ಥಳಕ್ಕೆ ತಲುಪುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.

ಬಳಿಕ ಆಕೆಯನ್ನು ತಕ್ಷಣ ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಪ್ರಕರಣದಲ್ಲಿ ಮತ್ತೊಂದು ಮಹತ್ವದ ಅಂಶವೆಂದರೆ, ಆತ್ಮಹತ್ಯೆಗೂ ಮುನ್ನ ಬಾಲಕಿ ಡೆತ್‌ನೋಟ್ ಬರೆದಿಟ್ಟಿದ್ದಾಳೆ ಎಂಬ ಮಾಹಿತಿ. ಡೆತ್‌ನೋಟ್‌ನಲ್ಲಿ ಕೆಲವರ ಹೆಸರನ್ನು ಉಲ್ಲೇಖಿಸಲಾಗಿದೆ ಎನ್ನಲಾಗುತ್ತಿದ್ದು, ಅದರಲ್ಲಿರುವ ಮಾಹಿತಿ ತನಿಖೆಗೆ ಪ್ರಮುಖ ಸುಳಿವಾಗುವ ಸಾಧ್ಯತೆ ಇದೆ.

ಮತ್ತೋರ್ವ ಬಾಲಕಿ..!? ದಾವಣಗೆರೆಗೂ ರಮೇಶನ ಜಾಲ..?

ಮುಂಡರಗಿ ಬಾಲಕಿಯ ಸಾವಿನ ಪ್ರಕರಣದಲ್ಲಿ ಇದೀಗ ದಾವಣಗೆರೆ ಜಿಲ್ಲೆಯ ಸಂಪರ್ಕವೂ ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಮೂಲಗಳ ಪ್ರಕಾರ, ಆರೋಪಿ  ರಮೇಶ ಗಚ್ಚಿನಮನಿ ತನ್ನ ಪ್ರೀತಿಯ ಬಲೆಯಲ್ಲಿ ಕೆಡವಿಕೊಂಡ ಆ ಮತ್ತೋರ್ವ ಬಾಲಕಿ ದಾವಣಗೆರೆ ಮೂಲದವಳು ಎನ್ನಲಾಗಿದೆ. ಅಲ್ಲಿಯೂ ಸಹ ಅಪ್ರಾಪ್ತ ಬಾಲಕಿಯೊಂದಿಗೆ ಈ ಅಸ್ಸಾಮಿ ಪ್ರೀತಿಯ ಜಾಲ ಹೆಣೆದಿದ್ದಾನೆ ಎನ್ನಲಾಗಿದೆ.

ಈಗಾಗಲೇ ಈ ಬಾಲಕಿಯನ್ನ ಗೋವಾ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ರಮೇಶ ಕರೆದುಕೊಂಡು ಹೋಗಿದ್ದನು ಎನ್ನಲಾಗಿದೆ.  ಹೀಗೆ ಇವರಿಬ್ಬರೂ ಇರುವ ಕೆಲವು ಆತ್ಮೀಯ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳ ಮೂಲಕ ಮುಂಡರಗಿ ಮೂಲದ ಬಾಲಕಿಯ ಗಮನಕ್ಕೆ ಬಂದಿದ್ದವು ಎನ್ನಲಾಗಿದೆ.

ಇದರ ನಂತರ ಬಾಲಕಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಎಲ್ಲ ಮಾಹಿತಿಗಳ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಬೇಕಿದೆ.

ಇನ್ನು ದಾವಣಗೆರೆ ಮೂಲದ ಬಾಲಕಿಯೂ ಸಹ ತಾನು ಪ್ರೀತಿಸಿದ ಯುವಕ ರಮೇಶನ ಜೊತೆ ಮದುವೆ ವಿಚಾರವಾಗಿ ಕೆಲ ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳಂತೆ. ಬಳಿಕ ರಮೇಶನೇ ಬಾಲಕಿಗೆ ಚಿಕಿತ್ಸೆ ಕೊಡಿಸಿ ಆಕೆಯನ್ನ ಬದುಕುಳಿಸಿದ್ದಾನೆ ಎನ್ನಲಾಗಿದೆ. ಈ ಘಟನೆ ಮತ್ತು ಮುಂಡರಗಿ ಬಾಲಕಿಯ ಸಾವಿನ ನಡುವೆ ಯಾವುದೇ ಸಂಬಂಧವಿದೆಯೇ ಎಂಬುದು ಕೂಡ ತನಿಖೆಯ ಭಾಗವಾಗುವ ಸಾಧ್ಯತೆ ಇದೆ.

ಚಹಾ ಅಂಗಡಿ ಕುರಿತು ಕೇಳಿ ಬಂದ ಆರೋಪಗಳೇನು..?

ಪ್ರಕರಣದಲ್ಲಿ ಹೆಸರು ಕೇಳಿಬರುತ್ತಿರುವ ರಮೇಶ ಗಚ್ಚಿನಮನಿ, ಮೂಲತಃ ಕೊರ್ಲಹಳ್ಳಿ ಗ್ರಾಮದವನು ಎನ್ನಲಾಗಿದೆ. ಮುಂಡರಗಿ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ “ಗಲ್ಫಿ” ಹೆಸರಿನ ಚಹಾ ಅಂಗಡಿ ನಡೆಸುತ್ತಿದ್ದಾನೆ. ಸದ್ಯ ಪ್ರಕರಣ ಬೆಳಕಿಗೆ ಬಂದ ನಂತರ ಸ್ಥಳೀಯರು ಆ ಅಂಗಡಿ ಕುರಿತು ಹಲವು ಆರೋಪಗಳನ್ನು ಮಾಡುತ್ತಿದ್ದಾರೆ.

ಅಂಗಡಿಯ ಹಿಂಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಚಹಾ ಕುಡಿಯಲು ಸೇರಿಕೊಳ್ಳುತ್ತಿದ್ದರು. ಅಲ್ಲಿ ಧೂಮಪಾನದ ಮೂಲಕ, (ಡ್ರಗ್ಸ್) ನಿಷೇಧಿತ ಮಾದಕ ವಸ್ತುಗಳನ್ನ ಸಿಗರೇಟ್ ಮೂಲಕ ರಮೇಶ ಪೂರೈಸುತ್ತಿದ್ದನು ಎಂಬ ಆರೋಪಗಳೂ ಸ್ಥಳೀಯ ವಲಯದಲ್ಲಿ ಕೇಳಿಬರುತ್ತಿವೆ.

ಇನ್ನಷ್ಟು ಪ್ರಕರಣಗಳು ಹೊರಬರಲಿವೆಯೇ..?

ಸ್ಥಳೀಯರ ಪ್ರಕಾರ, ಆರೋಪಿತ ಯುವಕ ಇನ್ನೂ ಕೆಲವು ಅಪ್ರಾಪ್ತ ಬಾಲಕಿಯರಿಗೆ ಇದೇ ರೀತಿ ಮೋಸ ಮಾಡಿದ್ದಾನೆ ಎನ್ನಲಾಗಿದ್ದು, ಈಗಲೂ ಅವರ ಜೊತೆಯಲ್ಲಿ ಸಂಪರ್ಕದಲ್ಲಿದ್ದಾನೆ ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈತನ ಕರೆ ವಿವರಗಳು (CDR), ಮೊಬೈಲ್ ಡೇಟಾ, ಸಾಮಾಜಿಕ ಜಾಲತಾಣಗಳ ಚಾಟ್‌ಗಳು ಹಾಗೂ ಇತರೆ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಿದರೆ ಇನ್ನಷ್ಟು ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ.

ಆರೋಪಿಗಾಗಿ ಪೊಲೀಸರ ಶೋಧ

ಸದ್ಯ, ಪ್ರಕರಣದಲ್ಲಿ ಹೆಸರು ಕೇಳಿಬರುತ್ತಿರುವ ರಮೇಶ ಗಚ್ಚಿನಮನಿಯನ್ನ ಈಗಾಗಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.  ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಅಪ್ರಾಪ್ತ ಬಾಲಕಿಯ ಸಾವಿನ ಹಿಂದಿನ ನಿಜವಾದ ಕಾರಣವೇನು? ಡೆತ್‌ನೋಟ್‌ನಲ್ಲಿ ಏನಿದೆ? ದಾವಣಗೆರೆ ಸಂಪರ್ಕದ ಸತ್ಯಾಂಶವೇನು? ಎಂಬ ಪ್ರಶ್ನೆಗಳಿಗೆ ತನಿಖೆಯ ನಂತರವೇ ಸ್ಪಷ್ಟ ಉತ್ತರ ದೊರೆಯಲಿದೆ.

ಪಟ್ಟಣದಲ್ಲಿ ವಿಶೇಷ ಕಾರ್ಯಾಚರಣೆಗೆ ಸಾರ್ವಜನಿಕರ ಆಗ್ರಹ

ಮುಂಡರಗಿ ಪಟ್ಟಣದಲ್ಲಿ ನಡೆದಿರುವ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಯುವಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಸೇರುವ ಚಹಾ ಅಂಗಡಿಗಳು, ಪಾನ್ ಶಾಪ್‌ಗಳು, ಹಾಗೂ ಇತರೆ ವಾಣಿಜ್ಯ ಮಳಿಗೆಗಳ ಮೇಲೆ ಪೊಲೀಸರು ವಿಶೇಷ ನಿಗಾ ವಹಿಸಬೇಕೆಂಬ ಆಗ್ರಹ ಕೇಳಿಬಂದಿದೆ.

ಅಲ್ಲದೆ, ಯುವಜನತೆಯನ್ನು ಹಾಗೂ ಅಪ್ರಾಪ್ತ ಬಾಲಕಿಯರನ್ನ ಗುರಿಯಾಗಿಸಿಕೊಂಡು ನಡೆಯುವ ಇಂತಹ ಚಟುವಟಿಕೆಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಪರಿಶೀಲನೆ ನಡೆಸಬೇಕು ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಒಟ್ಟಾರೆ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ಕೇವಲ ಆತ್ಮಹತ್ಯೆ ಪ್ರಕರಣದ ತನಿಖೆ ಮಾತ್ರವಲ್ಲದೆ, ಇದರ ಸುತ್ತಲಿನ ಎಲ್ಲ ಆಯಾಮಗಳ ಕುರಿತು ಪೊಲೀಸರು ವಿಶೇಷ ತನಿಖಾ ಕಾರ್ಯಾಚರಣೆ ಕೈಗೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb