ಗದಗ: ಅವಳಿ ನಗರದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸ್ಪಾ ಕಮ್ ಸಲೂನ್ಗಳಲ್ಲಿ ಇಂದು ಏಕಾಏಕಿ ಪೊಲೀಸ್ ಅಧಿಕಾರಿಗಳು ಧೀಡಿರ್ ಕಾರ್ಯಾಚರಣೆ ನಡೆಸಿದ್ದು, ಪರಿಶೀಲನೆ ನಡೆಸುವ ಮೂಲಕ, ಹಲವು ಸ್ಪಾ ಸೆಂಟರ್ ಗಳಲ್ಲಿ ಅಗತ್ಯ ದಾಖಲೆಗಳು ಹಾಗೂ ಕಾನೂನುಬದ್ಧ ಪರವಾನಗಿಗಳ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಅವುಗಳಿಗೆ ನೋಟಿಸ್ ನೀಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ನಗರದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಗಟ್ಟುವ ಉದ್ದೇಶದಿಂದ ಈ ಪರಿಶೀಲನಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಪರಿಶೀಲನೆಯ ವೇಳೆ ಕೆಲವು ಸಂಸ್ಥೆಗಳು ಕಡ್ಡಾಯವಾಗಿ ಹೊಂದಿರಬೇಕಾದ ದಾಖಲಾತಿಗಳು, ನೋಂದಣಿಗಳು ಹಾಗೂ ಅನುಮತಿಗಳನ್ನು ಹೊಂದದೇ ಇರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಸಂಸ್ಥೆಗಳ ಮಾಲೀಕರು ಹಾಗೂ ನಿರ್ವಾಹಕರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು, ಶಾಸನಬದ್ಧ ಹಾಗೂ ಕಾನೂನು ನಿಯಮಗಳ ಪ್ರಕಾರ ಅಗತ್ಯವಿರುವ ಎಲ್ಲ ಪರವಾನಗಿಗಳು ಮತ್ತು ಅನುಮತಿಗಳನ್ನು ಪಡೆಯುವವರೆಗೆ ಸಂಸ್ಥೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಇದರ ಜೊತೆಗೆ, ಸಂಬಂಧಿಸಿದ ಸಂಸ್ಥೆಗಳ ಕಾನೂನುಬದ್ಧತೆ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸುವಂತೆ ನಗರಸಭೆ, ಹೆಸ್ಕಾಂ, ಅಗ್ನಿಶಾಮಕ ದಳ ಹಾಗೂ ಆರೋಗ್ಯ ಇಲಾಖೆಗೆ ಪತ್ರ ಬರೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವ ನಿರೀಕ್ಷೆಯಿದೆ.
ಅಧಿಕಾರಿಗಳ ಪ್ರಕಾರ, ಸ್ಪಾ ಮತ್ತು ವೆಲ್ನೆಸ್ ಕೇಂದ್ರಗಳ ನಿರ್ವಹಣೆ, ನಿಯಂತ್ರಣ ಹಾಗೂ ಪರವಾನಗಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (KPME) ಅನ್ವಯ ಕೆಲವು ನಿಯಮಗಳು ಅನ್ವಯವಾಗುವ ಸಾಧ್ಯತೆ ಇದ್ದು, ಈ ಕುರಿತು ಸಹ ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ. ಸಂಬಂಧಿತ ಸಂಸ್ಥೆಗಳು ಕೆಪಿಎಂಇ ಕಾಯ್ದೆಯಡಿ ಅಗತ್ಯ ನೋಂದಣಿ ಹಾಗೂ ಅನುಮತಿ ಪಡೆದಿವೆಯೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ.
ಅಕ್ರಮ ಚಟುವಟಿಕೆಗಳ ಆರೋಪ?
ಇದರ ನಡುವೆ, ನಗರದ ಕೆಲ ಅನಧಿಕೃತ ಸ್ಪಾಗಳಲ್ಲಿ ಕಾನೂನುಬಾಹಿರ ಹಾಗೂ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ಆರೋಪಗಳು ಕೇಳಿಬಂದಿವೆ. ಕೆಲವು ಸಂಸ್ಥೆಗಳು ಸ್ಪಾ ಹಾಗೂ ವೆಲ್ನೆಸ್ ಕೇಂದ್ರಗಳ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಅವುಗಳ ನೈಜ ಚಟುವಟಿಕೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೈಗೊಂಡಿರುವ ಪರಿಶೀಲನಾ ಕಾರ್ಯಾಚರಣೆ ಸಾರ್ವಜನಿಕರಲ್ಲಿ ಆಶಾಭಾವನೆ ಮೂಡಿಸಿದೆ.
ನಗರದಲ್ಲಿ ದೀರ್ಘಕಾಲದಿಂದ ಇಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಕೇಳಿಬರುತ್ತಿದ್ದು, ಇದೀಗ ಪೊಲೀಸ್ ಇಲಾಖೆ ಮುಂದಾಗಿ ಪರಿಶೀಲನೆ ನಡೆಸಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಪೊಲೀಸ್ ಇಲಾಖೆ ಮಾತ್ರವಲ್ಲದೆ, ನಗರಸಭೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಕಾರ್ಮಿಕ ಇಲಾಖೆ, ಹೆಸ್ಕಾಂ ಹಾಗೂ ಕೆಪಿಎಂಇ ಪ್ರಾಧಿಕಾರ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಇಂತಹ ಸಂಸ್ಥೆಗಳ ಮೇಲೆ ನಿರಂತರ ನಿಗಾ ವಹಿಸಬೇಕೆಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಹೋಟೆಲ್ ಮಾಲೀಕರ ಜವಾಬ್ದಾರಿಯೂ ಮಹತ್ವದ್ದು!
ನಗರದ ಹಲವು ಪ್ರತಿಷ್ಠಿತ ಹೋಟೆಲ್ಗಳಲ್ಲಿ ಸ್ಪಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಹೋಟೆಲ್ ಮಾಲೀಕರ ಜವಾಬ್ದಾರಿಯೂ ಅಷ್ಟೇ ಮಹತ್ವದ್ದಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಅಥವಾ ಹೆಚ್ಚುವರಿ ಆದಾಯದ ನಿರೀಕ್ಷೆಯಲ್ಲಿ ಸ್ಪಾ ಕೇಂದ್ರಗಳಿಗೆ ಸ್ಥಳಾವಕಾಶ ಕಲ್ಪಿಸುವ ಮೊದಲು, ಸಂಬಂಧಿತ ಸಂಸ್ಥೆಗಳು ಕಾನೂನುಬದ್ಧವಾಗಿ ನೋಂದಣಿಯಾಗಿವೆಯೇ, ಅಗತ್ಯ ಪರವಾನಗಿಗಳು ಹಾಗೂ ಸರ್ಕಾರಿ ಅನುಮತಿಗಳನ್ನು ಪಡೆದಿವೆಯೇ ಎಂಬುದನ್ನು ಹೋಟೆಲ್ ಆಡಳಿತ ಮಂಡಳಿಗಳು ಸಮಗ್ರವಾಗಿ ಪರಿಶೀಲಿಸಬೇಕಿದೆ.
ಕೇವಲ ಬಾಡಿಗೆ ಒಪ್ಪಂದ ಮಾಡಿಕೊಂಡು ಅಥವಾ ವಾಣಿಜ್ಯ ಒಪ್ಪಂದದ ಆಧಾರದ ಮೇಲೆ ಜಾಗ ಒದಗಿಸುವುದಷ್ಟೇ ಸಾಕಾಗುವುದಿಲ್ಲ. ಸ್ಪಾ ನಿರ್ವಹಿಸುವ ಸಂಸ್ಥೆಯ ಹಿನ್ನೆಲೆ, ಮಾಲೀಕತ್ವ, ಸಿಬ್ಬಂದಿಯ ವಿವರಗಳು, ಪೊಲೀಸ್ ಪರಿಶೀಲನೆ, ಅಗತ್ಯ ಇಲಾಖೆಗಳ ಅನುಮತಿ ಪತ್ರಗಳು ಹಾಗೂ ಕಾನೂನುಬದ್ಧ ದಾಖಲೆಗಳ ಬಗ್ಗೆ ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಹೋಟೆಲ್ ಆಡಳಿತದ ಮೇಲೂ ಇದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಒಂದು ವೇಳೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಅಥವಾ ಅಗತ್ಯ ಪರವಾನಗಿಗಳಿಲ್ಲದ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿದರೆ, ಅಂತಹ ಚಟುವಟಿಕೆಗಳಿಂದ ಹೋಟೆಲ್ಗಳ ಪ್ರತಿಷ್ಠೆಗೂ ಧಕ್ಕೆಯಾಗುವ ಸಾಧ್ಯತೆ ಇದೆ. ಜೊತೆಗೆ ಕಾನೂನು ಜಾರಿಗೊಳಿಸುವ ಸಂಸ್ಥೆಗಳ ತನಿಖೆ ಹಾಗೂ ಕ್ರಮಗಳ ವ್ಯಾಪ್ತಿಗೂ ಒಳಪಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿ, ಹೋಟೆಲ್ ಮಾಲೀಕರು ಕೇವಲ ವ್ಯವಹಾರಿಕ ದೃಷ್ಟಿಕೋನದಿಂದ ನೋಡದೆ, ತಮ್ಮ ಆವರಣದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಸಂಪೂರ್ಣವಾಗಿ ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಇದರಿಂದ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಬೀಳುವುದರ ಜೊತೆಗೆ, ಗ್ರಾಹಕರ ವಿಶ್ವಾಸವನ್ನೂ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಕಟ್ಟುನಿಟ್ಟಿನ ಮೇಲ್ವಿಚಾರಣೆಗೆ ಸಾರ್ವಜನಿಕರ ಆಗ್ರಹ
ಅಲ್ಲದೇ, ಸ್ಪಾ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಅಗತ್ಯ ಪರವಾನಗಿಗಳು, ನೋಂದಣಿಗಳು ಹಾಗೂ ಕಾನೂನುಬದ್ಧ ದಾಖಲೆಗಳನ್ನು ಹೊಂದಿವೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸಬೇಕಿದೆ. ನಿಯಮ ಉಲ್ಲಂಘನೆ, ಪರವಾನಗಿ ಷರತ್ತುಗಳ ಉಲ್ಲಂಘನೆ ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೊಲೀಸ್ ಇಲಾಖೆಯ ಕಾರ್ಯಾಚರಣೆ ಆರಂಭಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಇತರೆ ಸಂಬಂಧಿತ ಇಲಾಖೆಗಳು ಸಹ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಿ ನಗರದಲ್ಲಿನ ಇಂತಹ ಸಂಸ್ಥೆಗಳ ಕಾರ್ಯಾಚರಣೆಗಳನ್ನು ಪರಿಶೀಲಿಸುತ್ತವೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪೊಲೀಸ್ ಇಲಾಖೆಯ ಈ ಕ್ರಮವು ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದ್ದು, ಉಳಿದ ಇಲಾಖೆಗಳ ಮುಂದಿನ ನಡೆ ಏನಿರಲಿದೆ? ಎಂಬುದನ್ನು ಕಾದು ನೋಡಬೇಕಾಗಿದೆ.
ಈ ನಡುವೆ, ಪೊಲೀಸ್ ಇಲಾಖೆಯ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ನಗರದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಸ್ಪಾ ಹಾಗೂ ವೆಲ್ನೆಸ್ ಕೇಂದ್ರಗಳ ಮೇಲೂ ಸಮಗ್ರ ಪರಿಶೀಲನೆ ನಡೆಸುವಂತೆ ಆಗ್ರಹಗಳು ಕೇಳಿಬಂದಿವೆ. ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲದಂತೆ ಎಲ್ಲಾ ಸಂಬಂಧಿತ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಮಾತ್ರ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮುರ್ತುಜಾ ಖಾದ್ರಿ ಸೇರಿದಂತೆ, ಆಯಾ ವ್ಯಾಪ್ತಿಯ ಠಾಣೆಗಳ ಸರ್ಕಲ್ ಇನ್ಸಪೆಕ್ಟರ್ ಗಳು ಭಾಗವಹಿಸಿದ್ದರು. ಸದ್ಯ ಪೊಲೀಸ್ ಇಲಾಖೆಯ ಕಾರ್ಯಾಚರಣೆ ನಗರದಲ್ಲಿ ಅಕ್ರಮ ಚಟುವಟಿಕೆಗಳ ತಾಣಗಳಿಗೆ ಎಚ್ಚರಿಕೆ ಗಂಟೆಯಾಗಿದ್ದು,ಇನ್ನುಳಿದ ಇಲಾಖೆಗಳೂ ಸಹ ಎಚ್ಚೆತ್ತುಕೊಂಡು ಇಂತಹ ಸಂಸ್ಥೆಗಳ ಮೇಲೆ ನಿರಂತರ ನಿಗಾ ವಹಿಸುತ್ತವೆಯೇ,? ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತವೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ.
