Home » News » ಗದಗ ಪೊಲೀಸರ ಬಂಗಾರದ ಬೇಟೆ..! ಒಂದಲ್ಲ, ಎರಡಲ್ಲ… 1.73 ಕೆಜಿ ಚಿನ್ನ ವಶ..!

ಗದಗ ಪೊಲೀಸರ ಬಂಗಾರದ ಬೇಟೆ..! ಒಂದಲ್ಲ, ಎರಡಲ್ಲ… 1.73 ಕೆಜಿ ಚಿನ್ನ ವಶ..!

by CityXPress
0 comments

3.68 ಕೋಟಿ ರೂ. ಮೌಲ್ಯದ ಬಂಗಾರ, ಬೆಳ್ಳಿ, ವಾಹನ, ನಗದು, ಮೊಬೈಲ್ ಪತ್ತೆ | 1,066 ಪ್ರಕರಣಗಳು ಭೇದನೆ

ಗದಗ: ಕಳ್ಳರ ಬೆನ್ನುಬಿದ್ದ ಗದಗ ಜಿಲ್ಲಾ ಪೊಲೀಸರ ಕಾರ್ಯಾಚರಣೆ ಇದೀಗ ಭರ್ಜರಿ ಫಲ ನೀಡಿದೆ. ಕಳೆದೊಂದು ವರ್ಷದಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ, ಮೋಸ ಮತ್ತು ವಂಚನೆ ಪ್ರಕರಣಗಳನ್ನು ಬೆನ್ನತ್ತಿದ ಪೊಲೀಸರು, ಬರೋಬ್ಬರಿ 3.68 ಕೋಟಿ ರೂ. ಮೌಲ್ಯದ ಬಂಗಾರ, ಬೆಳ್ಳಿ, ವಾಹನ, ನಗದು, ಮೊಬೈಲ್ ಸೇರಿದಂತೆ ವಿವಿಧ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವರದಿ: ಮಹಲಿಂಗೇಶ್ ಹಿರೇಮಠ. ಗದಗ

ಒಟ್ಟು 1,576 ಪ್ರಕರಣಗಳ ಪೈಕಿ 1,066 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, 146 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಬಂಗಾರದ ಆಭರಣ ಕಳ್ಳತನ ಪ್ರಕರಣಗಳೇ ಕುತೂಹಲ ಮೂಡಿಸಿದ್ದು, ಕಳ್ಳತನವಾಗಿದ್ದ 2.30 ಕೋಟಿ ರೂ. ಮೌಲ್ಯದ 2.786 ಕೆಜಿ ಬಂಗಾರದ ಆಭರಣಗಳಲ್ಲಿ 1.65 ಕೋಟಿ ರೂ. ಮೌಲ್ಯದ 1.736 ಕೆಜಿ ಬಂಗಾರವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

banner

68 ಪ್ರಕರಣಗಳಲ್ಲಿ 51 ಭೇದನೆ

ಜಿಲ್ಲೆಯಲ್ಲಿ ದಾಖಲಾಗಿದ್ದ 68 ಬಂಗಾರದ ಆಭರಣ ಕಳ್ಳತನ ಪ್ರಕರಣಗಳ ಪೈಕಿ 51 ಪ್ರಕರಣಗಳನ್ನು ಭೇದಿಸಲಾಗಿದ್ದು, 95 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಳ್ಳತನವಾಗಿದ್ದ ಚಿನ್ನದ ಬಹುಪಾಲನ್ನು ಪತ್ತೆಹಚ್ಚಿರುವುದು ಪೊಲೀಸರ ಕಾರ್ಯಾಚರಣೆಯ ಮಹತ್ವವನ್ನು ತೋರಿಸುತ್ತದೆ.

ಬೆಳ್ಳಿಯಲ್ಲೂ ಭರ್ಜರಿ ಬೇಟೆ

ಬಂಗಾರದ ಜೊತೆಗೆ ಬೆಳ್ಳಿ ಆಭರಣಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದು, ಕಳ್ಳತನವಾಗಿದ್ದ 83.61 ಲಕ್ಷ ರೂ. ಮೌಲ್ಯದ 55.850 ಕೆಜಿ ಬೆಳ್ಳಿಯ ಪೈಕಿ 60.52 ಲಕ್ಷ ರೂ. ಮೌಲ್ಯದ 37.191 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಕಳ್ಳತನವಾಗಿದ್ದ 27.31 ಲಕ್ಷ ರೂ. ನಗದಿನಲ್ಲಿ 7.98 ಲಕ್ಷ ರೂ. ಪೊಲೀಸರ ಕೈ ಸೇರಿದೆ.

ಕಳ್ಳತನದ ವಾಹನಗಳಿಗೂ ಬ್ರೇಕ್

ವಾಹನ ಕಳ್ಳತನ ಪ್ರಕರಣಗಳಲ್ಲಿಯೂ ಪೊಲೀಸರು ಮಹತ್ವದ ಸಾಧನೆ ಮಾಡಿದ್ದಾರೆ. ಗದಗ ಜಿಲ್ಲೆ ಮಾತ್ರವಲ್ಲದೆ ಪಕ್ಕದ ಜಿಲ್ಲೆಗಳಲ್ಲೂ ಕಾರ್ಯಾಚರಣೆ ನಡೆಸಿ, 17.13 ಲಕ್ಷ ರೂ. ಮೌಲ್ಯದ 40 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ವಂಚಕರಿಗೂ ಬಿತ್ತು ಬಲೆ

ಮೋಸ ಮತ್ತು ವಂಚನೆ ಪ್ರಕರಣಗಳಲ್ಲೂ ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ದಾಖಲಾಗಿದ್ದ 32 ಪ್ರಕರಣಗಳ ಪೈಕಿ 27 ಪ್ರಕರಣಗಳನ್ನು ಭೇದಿಸಿ 35 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 1.22 ಕೋಟಿ ರೂ. ವಂಚನೆ ಪ್ರಕರಣದಲ್ಲಿ 37.13 ಲಕ್ಷ ರೂ. ಮೌಲ್ಯದ ಹಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳ್ಳತನವಾಗಿದ್ದ 965 ಮೊಬೈಲ್‌ಗಳ ಪತ್ತೆ

ಮೊಬೈಲ್ ಕಳ್ಳತನ ಪ್ರಕರಣಗಳಲ್ಲೂ ಪೊಲೀಸರು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಳ್ಳತನವಾಗಿದ್ದ 1,440 ಮೊಬೈಲ್‌ಗಳ ಪೈಕಿ 97.19 ಲಕ್ಷ ರೂ. ಮೌಲ್ಯದ 965 ಮೊಬೈಲ್‌ಗಳನ್ನು ಪತ್ತೆಹಚ್ಚಿ, ಮೂಲ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.

ಈ ಮೂಲಕ ಬಂಗಾರದಿಂದ ಹಿಡಿದು ಬೆಳ್ಳಿ, ನಗದು, ವಾಹನ ಮತ್ತು ಮೊಬೈಲ್‌ವರೆಗೆ ಕಳ್ಳತನವಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ಮರಳಿ ವಾರಸುದಾರರ ಕೈಗೆ ತಲುಪಿಸಿದ್ದಾರೆ.

ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಅವರು ವಂಚನೆಗೊಳಗಾದ ಪಿರ್ಯಾದಿದಾರರಿಗೆ ಪತ್ತೆಯಾದ ವಸ್ತುಗಳನ್ನು ಹಸ್ತಾಂತರಿಸಿದರು. ಕೋಟ್ಯಂತರ ಮೌಲ್ಯದ ವಸ್ತುಗಳನ್ನು ಪತ್ತೆಹಚ್ಚುವ ಮೂಲಕ ಗದಗ ಜಿಲ್ಲಾ ಪೊಲೀಸರು ಕಳ್ಳತನ ಮತ್ತು ವಂಚನೆ ಪ್ರಕರಣಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb