Home » News » ದ್ರಾಕ್ಷಿ ತೋಟದಿಂದ ಪರೀಕ್ಷಾ ಕೇಂದ್ರಕ್ಕೆ..: ಕೂಲಿಗೆ ತೆರಳಿದ್ದ ವಿದ್ಯಾರ್ಥಿನಿಯಿಂದ ಎಸ್‌ಎಸ್‌ಎಲ್‌ಸಿ ಸಾಧನೆ – ಬಿಇಓ ಕ್ರಮಕ್ಕೆ ರಾಜ್ಯಮಟ್ಟದ ಮೆಚ್ಚುಗೆ..

ದ್ರಾಕ್ಷಿ ತೋಟದಿಂದ ಪರೀಕ್ಷಾ ಕೇಂದ್ರಕ್ಕೆ..: ಕೂಲಿಗೆ ತೆರಳಿದ್ದ ವಿದ್ಯಾರ್ಥಿನಿಯಿಂದ ಎಸ್‌ಎಸ್‌ಎಲ್‌ಸಿ ಸಾಧನೆ – ಬಿಇಓ ಕ್ರಮಕ್ಕೆ ರಾಜ್ಯಮಟ್ಟದ ಮೆಚ್ಚುಗೆ..

by CityXPress
0 comments

ಗದಗ: ಪರೀಕ್ಷೆ ತ್ಯಜಿಸಿ ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯೊಬ್ಬಳು ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಗಮನಾರ್ಹ ಫಲಿತಾಂಶ ಸಾಧಿಸಿರುವ ಘಟನೆ ಗದಗ ಜಿಲ್ಲೆಯಲ್ಲಿ ಪ್ರೇರಣೆಯ ಕಥೆಯಾಗಿ ಹೊರಹೊಮ್ಮಿದೆ.

ವರದಿ: ಮಹಲಿಂಗೇಶ್ ಹಿರೇಮಠ, ಗದಗ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಪಲ್ಲವಿ ಹಳ್ಳಿಕೇರಿ, ಬರದೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ. ಮನೆಯಲ್ಲಿನ ಬಡತನದ ಹಿನ್ನೆಲೆ, ಪರೀಕ್ಷೆಯ ದಿನವೇ ತನ್ನ ತಾಯಿಯೊಂದಿಗೆ ದ್ರಾಕ್ಷಿ ತೋಟಕ್ಕೆ ಕೂಲಿಗೆ ತೆರಳಿದ್ದಳು. ಇದರ ಪರಿಣಾಮವಾಗಿ ಆಕೆ ಪರೀಕ್ಷೆಗೆ ಹಾಜರಾಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಸಂಗತಿ ತಿಳಿದ ಕೂಡಲೇ ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಗಂಗಾಧರ ಅಣ್ಣಿಗೇರಿ ಅವರು ತಕ್ಷಣ ಕ್ರಮ ಕೈಗೊಂಡು, ಶಿಕ್ಷಕರೊಂದಿಗೆ ದ್ರಾಕ್ಷಿ ತೋಟಕ್ಕೆ ತೆರಳಿ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿಯನ್ನು ಮನವೊಲಿಸಿದರು. ಶಿಕ್ಷಣದ ಮಹತ್ವವನ್ನು ವಿವರಿಸಿ, ಪಲ್ಲವಿಯನ್ನು ಮರಳಿ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬರೆಯುವಂತೆ ಮಾಡಿದರು. ಬಿಇಓ ಅವರ ಈ ಮಾನವೀಯತೆ ಹಾಗೂ ಕರ್ತವ್ಯನಿಷ್ಠೆಗೆ ರಾಜ್ಯದೆಲ್ಲೆಡೆ ಪ್ರಶಂಸೆ ವ್ಯಕ್ತವಾಯಿತು.

banner

ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಹಾಗೂ ಮಾಜಿ ಶಿಕ್ಷಣ ಸಚಿವ ಎಸ್. ಸುರೆಶಕುಮಾರ ಅವರು ತಮ್ಮ ಟ್ವೀಟರ್ ಖಾತೆಗಳ ಮೂಲಕ ಈ ಕಾರ್ಯವನ್ನು ಶ್ಲಾಘಿಸಿ, ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಹಸ್ತಕ್ಷೇಪಗಳು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದರು.

ಪರೀಕ್ಷೆ ಬರೆದ ಪಲ್ಲವಿ ಹಳ್ಳಿಕೇರಿ ಇದೀಗ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 458 ಅಂಕಗಳನ್ನು ಪಡೆದು ಶೇ.73 ರಷ್ಟು ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಸಂಕಷ್ಟಗಳ ನಡುವೆ ಸಾಧನೆ ಮಾಡಿದ ಆಕೆಯ ಪ್ರಯತ್ನ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.

ಈ ಸಾಧನೆಯನ್ನು ಗುರುತಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪಲ್ಲವಿ ಹಳ್ಳಿಕೇರಿಯನ್ನು ಗೌರವಿಸಿ ಸನ್ಮಾನಿಸಲಾಗಿದೆ. ಶಿಕ್ಷಣದ ಮಹತ್ವ, ಶಿಕ್ಷಕರ ಬದ್ಧತೆ ಹಾಗೂ ಮಾನವೀಯತೆಯ ಮೌಲ್ಯವನ್ನು ಒತ್ತಿ ಹೇಳುವ ಈ ಘಟನೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb