ಹುಬ್ಬಳ್ಳಿ ;- ಹುಬ್ಬಳ್ಳಿ ನಗರದ ಗೋಕುಲ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣದ ದಬ್ಬಾಳಿಕೆ, ಹಲ್ಲೆ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಾಗಿದ್ದು, ಇಬ್ಬರ ವಿರುದ್ಧ FIR ದಾಖಲಿಸಲಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ, ಸಂತೋಷ ಇಂಚಲ್ (49), ಉದ್ಯಮಿ, ಅವರ ದೂರಿನ ಮೇರೆಗೆ ಕ್ರೈಂ ನಂ. 0067/2026 ಅಡಿಯಲ್ಲಿ ಭಾರತ್ಯ ನ್ಯಾಯ ಸಂಹಿತೆ (BNS) 2023ರ ವಿವಿಧ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿತರಾಗಿ ಅರುಣಾ ಸುರೇಶ್ (A1) ಮತ್ತು ರೋಹಿತ್ ಸುರೇಶ್ (A2) ಹೆಸರುಗಳು ದಾಖಲಾಗಿವೆ. ದೂರುದಾರರ ಹೇಳಿಕೆಯಂತೆ, ಸುಮಾರು 14 ವರ್ಷಗಳ ಹಿಂದೆ ಪರಿಚಯವಾದ ಮಹಿಳೆ ನಂತರ ಹುಬ್ಬಳ್ಳಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈ ಅವಧಿಯಲ್ಲಿ ದೂರುದಾರ ಅಂದ್ರೆ ಭದ್ರತಾ ಎಜನ್ಸಿ ಸಿಇಓ ಸಂತೋಷ ಮನೆ ಖರ್ಚಿಗೆ ಹಣ ಸಹಾಯ ಮಾಡುತ್ತಿದ್ದರು. ನಂತರ ಅವರ ನಡುವೆ ಸಂಪರ್ಕ ಕಡಿತವಾದ ಬಳಿಕ, ಆರೋಪಿತಳು “ಮಾನ ಮರ್ಯಾದೆ ಹರಾಜು ಹಾಕುತ್ತೇನೆ” ಎಂದು ಬೆದರಿಸಿ ಹಂತ ಹಂತವಾಗಿ ₹50 ಲಕ್ಷ ಹಣ ಪಡೆದುಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಏಪ್ರಿಲ್ 16 ರಂದು ಮಧ್ಯಾಹ್ನ 12:30ರ ಸುಮಾರಿಗೆ ಗೋಕುಲ ರೋಡ್ನ ಅರ್ಜುನ ವಿಹಾರ ಕ್ರಾಸ್ ಹತ್ತಿರ ಇರುವ ದೂರುದಾರರ ಕಚೇರಿಗೆ ಇಬ್ಬರು ಆರೋಪಿತರು ನುಗ್ಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣಕ್ಕಾಗಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಆರೋಪಿ ನಂ.2 ದೂರುದಾರರನ್ನು ಅಡ್ಡಗಟ್ಟಿ ಹಿಡಿದಿದ್ದರೆ, ಆರೋಪಿ ನಂ.1 ಶರ್ಟ್ ಹಿಡಿದು ಮುಖ ಹಾಗೂ ದೇಹಕ್ಕೆ ಹಲ್ಲೆ ನಡೆಸಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿ ದೂರುದಾರರನ್ನು ಬಿಡಿಸಿಕೊಂಡ ನಂತರವೂ, “ಹಣ ಕೊಡದಿದ್ದರೆ ಜೀವಂತ ಬಿಡುವುದಿಲ್ಲ” ಎಂದು ಆರೋಪಿತರು ಬೆದರಿಕೆ ಹಾಕಿದರೆಂದು ತಿಳಿದುಬಂದಿದೆ.ಘಟನೆಯ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಬಳಿಕ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಗೋಕುಲ ರೋಡ್ ಪೊಲೀಸರು ಮುಂದುವರಿಸಿದ್ದಾರೆ.
ಉತ್ತರ ಸಿಗದ ಪ್ರಶ್ನೆಗಳು
ಮಹಿಳೆ ಮನೆಗೆ ಉದ್ಯಮಿ ಸಂತೋಷ ಆಗಾಗ ಏತಕ್ಕೆ ಹೋಗಿಬರುತ್ತಿದ್ದರು? ಅವಳು ಕೇಳಿದಾಗಲೆಲ್ಲ ಯಾಕೆ ಹಣ ಕೊಡುತ್ತಿದ್ದರು? ಆ ಮಹಿಳೆಗೂ ಸಂತೋಷಗೂ ಏನು ಸಂಬಂಧ ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ…
