ಗದಗ: ನಗರದ ವಿನಯ್ ಚಿಕ್ಕಟ್ಟಿ ಐಸಿಎಸ್‌ಇ ಶಾಲೆಗಳ ವತಿಯಿಂದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ವಿತರಣಾ ಸಮಾರಂಭವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಂದಾಯ ಇಲಾಖೆಯ ನಿವೃತ್ತ ಆಪ್ತ ಸಹಾಯಕರು ಶ್ರೀ ಸುಧೀರ ಎಸ್. ಮಾಡಲಗಿ ಮಾತನಾಡಿ, ಗೆಲುವು ಬಂದಾಗ ಅಹಂಕಾರ ಪಡಬಾರದು ಮತ್ತು ಸೋಲು ಬಂದಾಗ ನಿರಾಶರಾಗಬಾರದು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಜೀವನದಲ್ಲಿ ಯಶಸ್ಸು ಸಾಧಿಸಲು ನಿಯಮಿತ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವ ಅತ್ಯಂತ ಅಗತ್ಯ ಎಂದು ತಿಳಿಸಿದರು. ಸೋಲು ನಮಗೆ ಪಾಠ ಕಲಿಸುತ್ತದೆ, ಗೆಲುವು ಗೌರವ ತರುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಪೋಷಕರ ತ್ಯಾಗ ಹಾಗೂ ಶಿಕ್ಷಕರ ಮಾರ್ಗದರ್ಶನ ಪ್ರಮುಖ ಕಾರಣವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ವಾಯ್. ಚಿಕ್ಕಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ, ಪರಿಶ್ರಮ ಮತ್ತು ಶಿಸ್ತನ್ನು ಗೌರವಿಸುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಹೇಳಿದರು. ಪ್ರತಿಯೊಂದು ಮಗುವಿನಲ್ಲೂ ಅಪಾರ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಬೆಳೆಸುವುದು ಶಿಕ್ಷಕರ ಹಾಗೂ ಪೋಷಕರ ಜವಾಬ್ದಾರಿಯಾಗಿದೆ. ಇಂದು ಪ್ರಶಸ್ತಿ ಪಡೆದ ವಿದ್ಯಾರ್ಥಿಗಳ ಸಾಧನೆ ಇತರರಿಗೆ ಪ್ರೇರಣೆಯಾಗಲಿ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಸುಧೀರ ಎಸ್. ಮಾಡಲಗಿ ಅವರನ್ನು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಸುಮಾರು ಎರಡುವರೆ ಗಂಟೆಗಳ ಕಾಲ ನಿರಂತರವಾಗಿ 553 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳೊಂದಿಗೆ ಪದಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ, ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಎಸ್. ಸ್ಥಾವರಮಠ, ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಉಪಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ರಿಯಾನಾ ಮುಲ್ಲಾ, ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ರೇಖಾ ಬಾಳೆಹಳ್ಳಿಮಠ ಪ್ರಾರ್ಥನಾ ಗೀತೆಯನ್ನು ಪ್ರಸ್ತುತಪಡಿಸಿದರು. ಶಿಕ್ಷಕಿ ರೆಜಿನಾ ನೂತಕ್ಕಿ ಸ್ವಾಗತಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು 9ನೇ ತರಗತಿಯ ವಿದ್ಯಾರ್ಥಿನಿಯರಾದ ಅದಿಬಾ ಕೊತವಾಲ ಹಾಗೂ ಸುಜನಾ ಪ್ರಸಾರ ನೀಡಿದರು. ಕನ್ನಡ ಉಪನ್ಯಾಸಕರಾದ ಶ್ರೀಶೈಲ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಪ್ರಶಸ್ತಿ ಪತ್ರ ವಿತರಣೆ ಪಟ್ಟಿಯನ್ನು ಶಿಕ್ಷಕಿಯರಾದ ಹರ್ಷಾ ದೇವಮಾನೆ, ಅಮೃತಾ ಮಾಲತಿ, ನಾಝ್ ಹೆಸರೂರು ಹಾಗೂ ಶಿಕ್ಷಕರಾದ ಸಚಿನ್ ಯಂಕಂಚಿ ವಾಚಿಸಿದರು. ಶಿಕ್ಷಕರಾದ ಶಂಕ್ರಪ್ಪ ಕೊಪ್ಪಳ ವಂದನಾರ್ಪಣೆ ಸಲ್ಲಿಸಿದರು.
