ಗದಗ, ಮಾ.24: ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ಹೆಮ್ಮೆಯ ಜನನಾಯಕ ದಿ. ಮನೋಹರ ಅ. ಇನಾಮತಿ ಅವರ ಪುಣ್ಯಸ್ಮರಣೆಯ ಅಂಗವಾಗಿ ಈ ವರ್ಷವೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬಡಜನರ ಸೇವೆಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಅರ್ಪಿಸಿದ ಇನಾಮತಿ ಅವರು ನಿಧನರಾಗಿ ಇಂದಿಗೆ 17 ವರ್ಷಗಳಾದರೂ, ಅವರ ಆದರ್ಶಗಳು ಮತ್ತು ಸೇವಾ ಚಿಂತನೆಗಳು ಇಂದಿಗೂ ಜನಮನಗಳಲ್ಲಿ ಅಚ್ಚಳಿಯದಂತೆ ಉಳಿದಿದ್ದು, ಅವರ ಸ್ಮರಣಾರ್ಥವಾಗಿ, ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ಯುವ ಮುಖಂಡ ಭಕ್ಷಿ ತಹಶೀಲ್ದಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನಿಡಿರುವ ಅವರು, ದಿ. ಮನೋಹರ ಇನಾಮತಿ ಅವರು ತಮ್ಮ ಜೀವನಕಾಲದಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿ, ಬಡಜನರ ಸಂಕಷ್ಟ ನಿವಾರಣೆ ಮತ್ತು ಸಮಾಜದಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ಅನೇಕ ಜನೋಪಯೋಗಿ ಕಾರ್ಯಗಳನ್ನು ಕೈಗೊಂಡಿದ್ದರು. ಅವರ ಸರಳತೆ, ದಾನಶೀಲತೆ ಹಾಗೂ ಜನಪರ ಮನೋಭಾವದಿಂದ ಅವರು ಜನರ ಹೃದಯಗಳಲ್ಲಿ ಸದಾ ನೆಲೆಸಿದ್ದಾರೆ.
ಅವರ ಸಹೋದರರಾದ ಶ್ರೀ ಅಪ್ಪಣ್ಣ ಇನಾಮತಿ ಸಾಹುಕಾರರು ಸಹ ತಮ್ಮ ಅಣ್ಣನವರ ಆದರ್ಶಗಳನ್ನು ಮುಂದುವರಿಸಿಕೊಂಡು, ಗ್ರಾಮೀಣ ಪ್ರದೇಶದ ಬಡಜನರ ಕಲ್ಯಾಣ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರು ತಮ್ಮ ಜನಪರ ಚಟುವಟಿಕೆಗಳು, ಸೃಜನಶೀಲ ಯೋಜನೆಗಳು ಮತ್ತು ಸಾಮಾಜಿಕ ಬದ್ಧತೆಯಿಂದ ಭಾಗದ ಜನರ ವಿಶ್ವಾಸ ಗಳಿಸಿ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದಾರೆ.
ದಿ. ಮನೋಹರ ಇನಾಮತಿ ಅವರ ಸ್ಮರಣಾರ್ಥವಾಗಿ 2011ರ ಮಾರ್ಚ್ 25ರಿಂದ ಪ್ರಾರಂಭವಾದ ಉಚಿತ ರಕ್ತದಾನ ಶಿಬಿರವು ಪ್ರತಿವರ್ಷವೂ ಯಶಸ್ವಿಯಾಗಿ ನಡೆಯುತ್ತಿದ್ದು, ಈ ಬಾರಿ 16ನೇ ವರ್ಷದ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಈ ಶಿಬಿರದಲ್ಲಿ ನೂರಾರು ಯುವಕರು ಮತ್ತು ಸಾರ್ವಜನಿಕರು ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಲಿದ್ದಾರೆ.

ಜೊತೆಗೆ, ಗದಗದ ಕೆ.ಎಚ್. ಪಾಟೀಲ ಜಿಲ್ಲಾ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿರ್ಮಾಣಗೊಂಡಿರುವ ‘ಬುತ್ತಿ’ (ಹಸಿದವರಿಗೆ ಮುಕ್ತಿ) ಯೋಜನೆಯಡಿ ಬಡಜನರಿಗೆ ಅತಿ ಕಡಿಮೆ ದರದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಯೋಜನೆಯನ್ನು ರಾಜ್ಯದ ಜನಪ್ರಿಯ ಸಚಿವರಾದ ಶ್ರೀ ಎಚ್.ಕೆ. ಪಾಟೀಲರು ಉದ್ಘಾಟಿಸಿದ್ದಾರೆ.
ಈ ಹಿನ್ನಲೆಯಲ್ಲಿ, ದಿ. ಮನೋಹರ ಇನಾಮತಿ ಅವರ ಪುಣ್ಯಸ್ಮರಣೆಯಾದ ಮಾರ್ಚ್ 25ರಂದು ಪ್ರತಿವರ್ಷವೂ ಬಡಜನರಿಗೆ ಒಂದು ದಿನದ ಉಚಿತ ಅನ್ನದಾಸೋಹವನ್ನು ತಮ್ಮ ಸ್ವಂತ ಖರ್ಚಿನಲ್ಲಿ ವ್ಯವಸ್ಥೆ ಮಾಡುವುದಾಗಿ ಶ್ರೀ ಅಪ್ಪಣ್ಣ ಇನಾಮತಿ ಸಾಹುಕಾರರು ಘೋಷಿಸಿದ್ದಾರೆ. ಈ ಕಾರ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳು ಹಾಗೂ ಅವರ ಬಂಧುಗಳಿಗೆ ಬಹಳ ಸಹಾಯವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಸಮಾಜಮುಖಿ ಕಾರ್ಯಗಳು ಇನ್ನಷ್ಟು ವಿಸ್ತರಿಸಿ, ಇನ್ನೂ ಹೆಚ್ಚಿನ ಜನರಿಗೆ ನೆರವಾಗಲೆಂದು ಸಾರ್ವಜನಿಕರು ಹಾರೈಸಿದ್ದಾರೆ. ಈ ಕುರಿತು ತಹಶೀಲ್ದಾರರಾದ ಶ್ರೀ ಬಕ್ಷಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
