ಗದಗ, ಏ.06:
ನಗರದ ಪ್ರತಿಷ್ಠಿತ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಬೇಸಿಗೆ ಶಿಬಿರವನ್ನು ವಿಜ್ಞಾನ ಶಿಕ್ಷಕರು ಹಾಗೂ ಡಿಡಿಪಿಐ ಕಚೇರಿಯ ತಾಂತ್ರಿಕ ಸಹಾಯಕರಾದ ಎಂ.ಎಚ್. ಸವದತ್ತಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣಬೇಕು. ಆದರೆ ಆ ಕನಸುಗಳನ್ನು ನಿಜಗೊಳಿಸಲು ಅದಕ್ಕಿಂತಲೂ ದೊಡ್ಡ ಮಟ್ಟದ ಶ್ರಮ ಮತ್ತು ನಿಷ್ಠೆ ಅಗತ್ಯ” ಎಂದು ಹೇಳಿದರು. ಶಿಬಿರವು ಕೇವಲ ವಿಶ್ರಾಂತಿಯ ವೇದಿಕೆ ಅಲ್ಲ, ಬದಲಾಗಿ ವಿದ್ಯಾರ್ಥಿಗಳ ಒಳಗಿನ ಸಾಮರ್ಥ್ಯವನ್ನು ಅರಿತು ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅವಕಾಶ ಎಂದು ತಿಳಿಸಿದರು.
ವಿದ್ಯಾರ್ಥಿಗಳು ವಿಫಲತೆಯನ್ನು ಭಯಪಡುವ ಬದಲು ಅದರಿಂದ ಪಾಠಗಳನ್ನು ಕಲಿಯಬೇಕು. ಆತ್ಮವಿಶ್ವಾಸದಿಂದ ಮುಂದೆ ಸಾಗಿದರೆ ಮಾತ್ರ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದು ಅವರು ಪ್ರೇರಣಾದಾಯಕ ಸಂದೇಶ ನೀಡಿದರು. ಶಿಬಿರದ ಪ್ರತಿಯೊಂದು ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಇಲಾಖೆ ನಿಗದಿಪಡಿಸಿದ ಮಾದರಿ ಪ್ರಶ್ನೆಪತ್ರಿಕೆಗಳು, ಎಲ್‌ಬಿಎ, ಪ್ರಯೋಗಾಧಾರಿತ ಬೋಧನೆ ಹಾಗೂ ಅನ್ವಯಿಕ ಪ್ರಶ್ನೆಗಳ ಮಹತ್ವವನ್ನು ವಿವರಿಸಿದ ಅವರು, ಪಠ್ಯಪುಸ್ತಕಗಳನ್ನು ಆಳವಾಗಿ ಓದಿ, ಕ್ಲಿಷ್ಟಕರ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ಸಂದೇಹಗಳನ್ನು ನಿವಾರಿಸಿಕೊಳ್ಳಬೇಕು ಎಂದರು. ಇಂತಹ ಶಿಬಿರಗಳನ್ನು ಆಯೋಜಿಸಿರುವ ಪ್ರೊ. ಎಸ್.ವೈ. ಚಿಕ್ಕಟ್ಟಿಯವರನ್ನು ಅಭಿನಂದಿಸಿದರು.
ಧಾರವಾಡದಿಂದ ಆಗಮಿಸಿದ್ದ ಗಣಿತ ಸಂಪನ್ಮೂಲ ವ್ಯಕ್ತಿ ಎಂ.ಆರ್. ಅಂಗಡಿ ಮಾತನಾಡಿ, ಓದು, ಬರಹ ಮತ್ತು ಲೆಕ್ಕ ಎಂಬ ಮೂರು ಮೂಲಭೂತ ಕೌಶಲ್ಯಗಳು ವಿದ್ಯಾರ್ಥಿಗಳ ಯಶಸ್ಸಿನ ಬಲವಾದ ಅಡಿಗಲ್ಲುಗಳಾಗಿವೆ ಎಂದು ಹೇಳಿದರು. ಈ ಮೂರು ಕೌಶಲ್ಯಗಳನ್ನು ಪ್ರತಿದಿನ ಅಭ್ಯಾಸ ಮಾಡಿದರೆ ಯಾವುದೇ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಹಾಗೂ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಆಂಗ್ಲ ಭಾಷಾ ಸಂಪನ್ಮೂಲ ವ್ಯಕ್ತಿ ಎಸ್.ಆರ್. ಹುಯಿಲಗೋಳ ಮಾತನಾಡಿ, ವರ್ಷಪೂರ್ತಿ ಮಾಡಿದ ಪರಿಶ್ರಮವೇ ಉತ್ತಮ ಫಲಿತಾಂಶ ತರುತ್ತದೆ. ಉಳಿದಿರುವ ದಿನಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಫಲಿತಾಂಶವನ್ನು ಇನ್ನಷ್ಟು ಸುಧಾರಿಸಬಹುದು ಎಂದು ಹೇಳಿದರು. ಮುಖ್ಯವಾಗಿ ಮರುಅಭ್ಯಾಸ, ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ ಹಾಗೂ ಸಮಯದ ಸಮರ್ಪಕ ಯೋಜನೆ ಅಗತ್ಯ ಎಂದು ಸಲಹೆ ನೀಡಿದರು. “ಕೊನೆಯ ಕ್ಷಣದ ಶ್ರಮವೂ ಫಲ ನೀಡುತ್ತದೆ, ಆದರೆ ಅದು ನಿರಂತರ ಪರಿಶ್ರಮಕ್ಕೆ ಪರ್ಯಾಯವಲ್ಲ” ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್.ವೈ. ಚಿಕ್ಕಟ್ಟಿ ಮಾತನಾಡಿ, ಮಂಗಳೂರು ಮತ್ತು ಬೆಂಗಳೂರು ಮುಂತಾದ ನಗರಗಳಲ್ಲಿ ಲಭ್ಯವಾಗುವ ಗುಣಮಟ್ಟದ ತರಬೇತಿ ಈಗ ಸ್ಥಳೀಯ ಮಟ್ಟದಲ್ಲೇ ದೊರೆಯುತ್ತಿರುವುದು ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ ಎಂದು ಹೇಳಿದರು. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ನಿಯಮಿತವಾಗಿ ತರಗತಿಗಳಿಗೆ ಹಾಜರಾಗಬೇಕು, ಸಂಶಯಗಳನ್ನು ಕೇಳಬೇಕು ಮತ್ತು ಕಲಿತ ವಿಷಯವನ್ನು ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
“ಅವಕಾಶ ಸಿಕ್ಕಾಗ ಅದನ್ನು ಸದ್ಬಳಕೆ ಮಾಡಿಕೊಂಡವರೇ ಯಶಸ್ವಿಯಾಗುತ್ತಾರೆ” ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಮತ್ತು ರೋಜಾ ಹತ್ತಿಕಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ಶಿಕ್ಷಕಿ ರೆಹನಾ ಸ್ವಾಗತಿಸಿ ವಂದಿಸಿದರು.
