Home » News » ಮೊಬೈಲ್ ಖರೀದಿ ಸಂಭ್ರಮದಲ್ಲಿ ಪಟಾಕಿ ಸಿಡಿಸಿದ ಯುವಕರು..! ಮುಂದೆ ಆಗಿದ್ದೇನು..?! ವಿಡಿಯೋ ಇದೆ..!

ಮೊಬೈಲ್ ಖರೀದಿ ಸಂಭ್ರಮದಲ್ಲಿ ಪಟಾಕಿ ಸಿಡಿಸಿದ ಯುವಕರು..! ಮುಂದೆ ಆಗಿದ್ದೇನು..?! ವಿಡಿಯೋ ಇದೆ..!

by CityXPress
0 comments

ಗದಗ, ಜು. 3: ಮೊಬೈಲ್ ಖರೀದಿಸಿದ ಸಂಭ್ರಮದಲ್ಲಿ ಯುವಕರು ಸಿಡಿಸಿದ ಪಟಾಕಿ ಶಾಟ್ಸ್‌ನ ಕಿಡಿ ತಾಗಿ ಟಿವಿಎಸ್ ಎಕ್ಸೆಲ್ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಮಹೇಂದ್ರಕರ ವೃತ್ತದ ಸಮೀಪ ಶುಕ್ರವಾರ ತಡರಾತ್ರಿ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆ ಮತ್ತು ತ್ವರಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.

ಮಾಹಿತಿಯ ಪ್ರಕಾರ, ಮಹೇಂದ್ರಕರ ವೃತ್ತದ ಬಳಿಯ ಖಾಸಗಿ ಮೊಬೈಲ್ ಅಂಗಡಿಯೊಂದರಲ್ಲಿ ಮೊಬೈಲ್ ಖರೀದಿಸಿದ ಸಂತಸದಲ್ಲಿ ಕೆಲ ಯುವಕರು ಆಕಾಶದೆತ್ತರಕ್ಕೆ ಹಾರುವ ಪಟಾಕಿ ಶಾಟ್ಸ್‌ಗೆ ಬೆಂಕಿ ಹಚ್ಚಿದ್ದಾರೆ. ಆದರೆ ತಾಂತ್ರಿಕ ದೋಷ ಅಥವಾ ಬೇರೆ ಕಾರಣದಿಂದ ಪಟಾಕಿ ಆಕಾಶಕ್ಕೆ ಹಾರುವ ಬದಲು ರಸ್ತೆಯಲ್ಲೇ ಅಡ್ಡವಾಗಿ ಚಿಮ್ಮಿದೆ. ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟಿವಿಎಸ್ ಎಕ್ಸೆಲ್ ವಾಹನಕ್ಕೆ ಪಟಾಕಿಯ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಹಾಗೂ ಅಂಗಡಿಕಾರರು ವಾಹನದಲ್ಲಿದ್ದ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ಆದರೆ ಪಟಾಕಿಯ ಕಿಡಿ ವಾಹನದ ಪೆಟ್ರೋಲ್ ಪೈಪ್‌ಗೆ ತಾಗಿದ್ದರಿಂದ ಪೆಟ್ರೋಲ್ ಸೋರಿಕೆಯಾಗಿದ್ದು, ಆರಂಭದಲ್ಲಿ ಬೆಂಕಿಯನ್ನು ನಿಯಂತ್ರಿಸುವುದು ಕಷ್ಟಕರವಾಯಿತು. ಬಳಿಕ ಸ್ಥಳದಲ್ಲಿದ್ದವರು ಸಾಕಷ್ಟು ಪ್ರಮಾಣದಲ್ಲಿ ನೀರು ಸುರಿದು, ಪೆಟ್ರೋಲ್ ಪೈಪ್‌ನ ಕಾಕ್ ಅನ್ನು ಬಂದ್ ಮಾಡಿದ ಪರಿಣಾಮ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಸಾಧ್ಯವಾಯಿತು.

ಘಟನೆ ನಡೆದ ಸ್ಥಳದಲ್ಲೇ ತಂಪು ಪಾನೀಯ ಮಾರಾಟದ ಅಂಗಡಿ ಇದ್ದ ಕಾರಣ ಸಾಕಷ್ಟು ಪ್ರಮಾಣದಲ್ಲಿ ನೀರು ತಕ್ಷಣ ಲಭ್ಯವಾಗಿದ್ದು, ಅದರಿಂದ ಬೆಂಕಿ ಶೀಘ್ರ ನಿಯಂತ್ರಣಕ್ಕೆ ಬಂದಿತು. ಇಲ್ಲವಾದರೆ ಟಿವಿಎಸ್ ಎಕ್ಸೆಲ್ ಸಂಪೂರ್ಣ ಬೆಂಕಿಗಾಹುತಿಯಾಗುವ ಜೊತೆಗೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಇತರೆ ಬೈಕ್ ಗಳಿಗೂ ಬೆಂಕಿ ವ್ಯಾಪಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

banner

ವಾಹನಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸುತ್ತಮುತ್ತಲಿನ ವ್ಯಾಪಾರಿಗಳು ಆತಂಕಗೊಂಡು ತಮ್ಮ ಅಂಗಡಿಗಳ ಬಾಗಿಲು ಮುಚ್ಚಲು ಮುಂದಾದರು. ಕೆಲಕಾಲ ಮಹೇಂದ್ರಕರ ವೃತ್ತದ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ನಂತರ ಬೆಂಕಿ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ನಿಟ್ಟುಸಿರು ಬಿಟ್ಟರು.

ಒಟ್ಟಾರೆ, ಸಂಭ್ರಮಕ್ಕಾಗಿ ಸಿಡಿಸಲಾದ ಪಟಾಕಿ ಶಾಟ್ಸ್ ನಿರೀಕ್ಷಿತ ರೀತಿಯಲ್ಲಿ ಆಕಾಶಕ್ಕೆ ಹಾರದೇ ರಸ್ತೆಯಲ್ಲೇ ಅಡ್ಡವಾಗಿ ಚಿಮ್ಮಿದ ಪರಿಣಾಮ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಎಷ್ಟು ಮುಖ್ಯ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb