ಗದಗ, ಆ. 6: ಗ್ರಾಮೀಣ ಹಿನ್ನೆಲೆಯಿಂದ ಬಂದು ಗದಗ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಹಿರಿಯ ಶಿಕ್ಷಣತಜ್ಞ ಪ್ರೊ. ಎಸ್.ವಾಯ್. ಚಿಕ್ಕಟ್ಟಿ ಅವರ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ಸಾಧನೆಯನ್ನು ದಾಖಲಿಸುವ “ಶಿವರಾಯ” ಅಭಿನಂದನಾ ಗ್ರಂಥದ ಬಿಡುಗಡೆ ಸಮಾರಂಭವು ಆಗಸ್ಟ್ 9ರಂದು (ಭಾನುವಾರ) ಮುಂಡರಗಿ ರಸ್ತೆಯಲ್ಲಿರುವ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ನಡೆಯಲಿದೆ ಎಂದು ಹಿರಿಯ ಸಾಹಿತಿ ಐ.ಕೆ. ಕಮ್ಮಾರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ ವಹಿಸಲಿದ್ದು, ಶಾಸಕ ಡಾ. ಎಚ್.ಕೆ. ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪರಮಪೂಜ್ಯ ಸಿದ್ಧೇಶ್ವರ ಶ್ರೀಗಳ ಸಹೋದರರಾದ ಬಿಜ್ಜರಗಿಯ ಸೋಮಲಿಂಗ ಪಾಟೀಲ ಅವರು “ಶಿವರಾಯ” ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಝೀ ಕನ್ನಡ ನ್ಯೂಸ್ ಬೆಂಗಳೂರು ಮುಖ್ಯ ಸಂಪಾದಕ ರವಿ ಎಸ್., ಸಂತಸಾಯಿ ಶಿಕ್ಷಣ ಸಂಸ್ಥೆ (ಪುಣೆ) ಸಂಸ್ಥಾಪಕ ಎಸ್.ಎನ್. ಢವಳೇಶ್ವರ, ವಿದ್ಯಾದಾನ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಹುಯಿಲಗೋಳ, ವಿಶ್ರಾಂತ ಪ್ರಾಚಾರ್ಯ ಕೆ.ಎಚ್. ಬೇಲೂರು, ಅಡಹಳಟ್ಟಿಯ ಪಿಕೆಪಿಎಸ್ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಘಟಿವಾಳಪ್ಪ ಗುಡ್ಡಾಪುರ, ಅಥಣಿಯ ಬಸವರಾಜ ಉಮ್ರಾಣಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರೊ. ಎಸ್.ವಾಯ್. ಚಿಕ್ಕಟ್ಟಿ ಅವರು ತಮ್ಮ ಪರಿಶ್ರಮ, ಬದ್ಧತೆ ಹಾಗೂ ದೂರದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬೆಳೆಸಿ ಈ ಭಾಗದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಶಿಕ್ಷಣದ ಜೊತೆಗೆ ಸಮಾಜಮುಖಿ ಚಿಂತನೆ, ಮಾನವೀಯ ಮೌಲ್ಯಗಳು ಹಾಗೂ ಶೈಕ್ಷಣಿಕ ಸೇವೆಯ ಮೂಲಕ ಅವರು ಗಳಿಸಿರುವ ಗೌರವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಅವರ ಶಿಷ್ಯರು ಹಾಗೂ ಅಭಿಮಾನಿಗಳು ಅಭಿನಂದನಾ ಗ್ರಂಥವನ್ನು ಸಿದ್ಧಪಡಿಸಿದ್ದಾರೆ ಎಂದು ಐ.ಕೆ. ಕಮ್ಮಾರ ಹೇಳಿದರು.
“ಶಿವರಾಯ” ಗ್ರಂಥದಲ್ಲಿ ಪ್ರೊ. ಚಿಕ್ಕಟ್ಟಿ ಅವರ ಜೀವನ ಪಯಣ, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಸಾಮಾಜಿಕ ಸೇವೆ, ವಿವಿಧ ಗಣ್ಯರ ಲೇಖನಗಳು, ಶಿಷ್ಯರ ನೆನಪುಗಳು ಹಾಗೂ ಅವರ ವ್ಯಕ್ತಿತ್ವದ ಹಲವು ಆಯಾಮಗಳನ್ನು ದಾಖಲಿಸಲಾಗಿದೆ. ಈ ಗ್ರಂಥವು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ದಾಖಲೆಯಾಗಿ ಉಳಿಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದ ಗಣ್ಯರು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ಹಳೆಯ ವಿದ್ಯಾರ್ಥಿಗಳು, ಶಿಷ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರೊ. ಶ್ರೀಶೈಲ ಶಿ. ಬಡಿಗೇರ, ವಿಶ್ರಾಂತ ಪ್ರಾಚಾರ್ಯ ಕೆ.ಎಚ್. ಬೇಲೂರು, ಎಸ್.ಎಲ್. ಹುಯಿಲಗೋಳ, ವಿ.ಎಂ. ಮುಂದಿನಮನಿ, ಶೋಭಾ ಭಟ್, ಶೋಭಾ ಸ್ಥಾವರಮಠ, ರಿಯಾನಾ ಮುಲ್ಲಾ ಹಾಗೂ ಪುಷ್ಪಲತಾ ಬೆಲೇರಿ ಉಪಸ್ಥಿತರಿದ್ದರು.
