ಗದಗ: ಮಾದಕ ವ್ಯಸನವು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ. ಅದು ಕುಟುಂಬ, ಸಮಾಜ ಹಾಗೂ ದೇಶದ ಭವಿಷ್ಯವನ್ನೇ ದುರ್ಬಲಗೊಳಿಸುವ ಸಾಮಾಜಿಕ ಪಿಡುಗಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮಾದಕ ವ್ಯಸನದಿಂದ ದೂರವಿದ್ದು, ಆರೋಗ್ಯಕರ ಹಾಗೂ ಜಾಗೃತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ವಿ.ಜಿ. ಪವಾರ್ ಕರೆ ನೀಡಿದರು.
ಗದಗದ ಭಾರತೀಯ ಶಿಕ್ಷಣ ಸಂಸ್ಥೆಯ ವಿನಯ್ ಚಿಕ್ಕಟ್ಟಿ ಐಸಿಎಸ್ಇ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.11ರಿಂದ ಆ.14ರವರೆಗೆ ಆಯೋಜಿಸಿರುವ ‘ಕ್ರಾಂತಿ ದಿನಗಳು’ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುತೂಹಲ, ಸ್ನೇಹಿತರ ಒತ್ತಡ, ಮಾನಸಿಕ ಒತ್ತಡ ಅಥವಾ ತಪ್ಪು ಅಭ್ಯಾಸಗಳಿಂದ ಆರಂಭವಾಗುವ ಮಾದಕ ವ್ಯಸನವು ಮುಂದೆ ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ, ಸಂಬಂಧಗಳು ಹಾಗೂ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ಯಾವುದೇ ರೀತಿಯ ವ್ಯಸನಕ್ಕೆ ಅವಕಾಶ ನೀಡಬಾರದು. ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ಕ್ರೀಡೆ, ಯೋಗ, ಧ್ಯಾನ, ಸಾಹಿತ್ಯ, ಸಂಗೀತ ಸೇರಿದಂತೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಜೀವನದ ಗುರಿಯನ್ನು ಸ್ಪಷ್ಟವಾಗಿ ಇಟ್ಟುಕೊಂಡು ‘ನನ್ನ ಆರೋಗ್ಯ—ನನ್ನ ಹೊಣೆ, ನನ್ನ ಭವಿಷ್ಯ—ನನ್ನ ಹೊಣೆ’ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾದಕ ವಸ್ತುಗಳಿಲ್ಲದ ಮನೆಗಳು, ವ್ಯಸನಮುಕ್ತ ಯುವಜನತೆ, ಆರೋಗ್ಯಕರ ಕುಟುಂಬಗಳು ಹಾಗೂ ಜಾಗೃತ ಸಮಾಜವೇ ನಾಳಿನ ಭಾರತದ ಶಕ್ತಿ. ‘ವ್ಯಸನಕ್ಕೆ ವಿದಾಯ ಹೇಳೋಣ, ವಿವೇಕಕ್ಕೆ ಸ್ವಾಗತ ಕೋರೋಣ; ಮಾದಕಮುಕ್ತ ಸಮಾಜ ಕಟ್ಟೋಣ, ಆರೋಗ್ಯಕರ ಭಾರತ ನಿರ್ಮಿಸೋಣ’ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪವಾರ್ ಹೇಳಿದರು.
ಸೋಮಾರಿತನಕ್ಕೆ ವಿದಾಯ ಹೇಳಿ: ಬೆನಕೊಪ್ಪ
ಕಾರ್ಯಕ್ರಮದ ಅತಿಥಿ, ಗದಗ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಅವರು ‘ಸೋಮಾರಿತನದ ವಿರುದ್ಧ ಕ್ರಾಂತಿ’ ವಿಷಯ ಕುರಿತು ಮಾತನಾಡಿ, ವಿದ್ಯಾರ್ಥಿಗಳು ಚುರುಕಿನ ಹಾಗೂ ಯಶಸ್ವಿ ವ್ಯಕ್ತಿಗಳಾಗಬೇಕಾದರೆ ಮೊದಲು ತಮ್ಮಲ್ಲಿರುವ ಸೋಮಾರಿತನವನ್ನು ತೊರೆದು ಮುಂದೆ ಸಾಗಬೇಕು ಎಂದು ಹೇಳಿದರು.
ನಿತ್ಯ ಜೀವನದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಹಾಗೂ ಉತ್ತಮ ಸ್ವಭಾವಗಳನ್ನು ರೂಢಿಸಿಕೊಳ್ಳುವುದು ಜೀವನದಲ್ಲಿ ಮಹತ್ತರ ಬದಲಾವಣೆ ತರಬಲ್ಲದು. ಪ್ರತಿಯೊಬ್ಬರೂ ತಮ್ಮ ಕೆಲಸದ ಮೇಲೆ ಗಮನ ಹರಿಸಿ, ಸಾಧನೆಯತ್ತ ಮುನ್ನಡೆಯಬೇಕು. ಪ್ರಗತಿಯತ್ತ ಸದಾ ಕಣ್ಣಿಟ್ಟು, ನಿಗದಿಪಡಿಸಿಕೊಂಡ ಗುರಿ ಸಾಧಿಸುವವರೆಗೆ ನಿರಂತರ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ವಹಿಸಿಕೊಂಡು ಕಾರ್ಯನಿರ್ವಹಿಸಿದಾಗ ಸೋಮಾರಿತನಕ್ಕೆ ಅವಕಾಶವೇ ಇರುವುದಿಲ್ಲ. ಆದ್ದರಿಂದ ಯಾವುದೇ ಜವಾಬ್ದಾರಿಯನ್ನು ವಹಿಸಿಕೊಂಡರೂ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸೋಮಾರಿತನದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಿದರು.
ತ್ಯಾಜ್ಯದ ವಿರುದ್ಧವೂ ವಿದ್ಯಾರ್ಥಿಗಳಿಂದ ಜಾಗೃತಿ
‘ಕ್ರಾಂತಿ ದಿನಗಳು’ ಕಾರ್ಯಕ್ರಮದ ಎರಡನೇ ದಿನವಾದ ಆ.12ರಂದು ‘ತ್ಯಾಜ್ಯದ ವಿರುದ್ಧ ಕ್ರಾಂತಿ’ ಎಂಬ ಕಿರು ನಾಟಕವನ್ನು 6ನೇ ತರಗತಿಯ ವಿದ್ಯಾರ್ಥಿನಿಯರಾದ ಚಿನ್ಮಯಿ ಎ.ಎಸ್., ಖುಷಿ ಪಾಟೀಲ, ಆಫ್ರಾ ಜುಳಕಟ್ಟಿ, ಮರಿಯಮ್ ಗುಲ್ರ್ಗಾ, ಆಧ್ಯಾ ಪವನ ಹಾಗೂ ರ್ಷಿತಾ ಇ.ಎಸ್. ಅವರು ಶಿಕ್ಷಕಿ ಅಕ್ಷಯಾ ವಿ.ಸಿ. ಅವರ ಮಾರ್ಗದರ್ಶನದಲ್ಲಿ ಪ್ರದರ್ಶಿಸಿ ಜಾಗೃತಿ ಮೂಡಿಸಿದರು.
ತ್ಯಾಜ್ಯವು ಕೇವಲ ಪರಿಸರದ ಸಮಸ್ಯೆಯಲ್ಲ. ಅದು ಮಾನವನ ಆರೋಗ್ಯ, ಜೀವನಶೈಲಿ ಹಾಗೂ ಭವಿಷ್ಯದ ಪೀಳಿಗೆಯ ಮೇಲೂ ಪರಿಣಾಮ ಬೀರುವ ಗಂಭೀರ ಸವಾಲಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣ, ಪ್ಲಾಸ್ಟಿಕ್ ಬಳಕೆ ಹಾಗೂ ಅಸಮರ್ಪಕ ತ್ಯಾಜ್ಯ ನಿರ್ವಹಣೆಯಿಂದ ಪರಿಸರ ಕಲುಷಿತವಾಗುತ್ತಿದೆ. ಹೀಗಾಗಿ ತ್ಯಾಜ್ಯದ ವಿರುದ್ಧದ ಹೋರಾಟ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಬೇಕು ಎಂಬ ಸಂದೇಶವನ್ನು ವಿದ್ಯಾರ್ಥಿಗಳು ನಾಟಕದ ಮೂಲಕ ಸಾರಿದರು.
‘ತ್ಯಾಜ್ಯ ಕಡಿಮೆ ಮಾಡೋಣ—ಪರಿಸರ ಉಳಿಸೋಣ; ಸ್ವಚ್ಛತೆಯ ಕ್ರಾಂತಿ ಮಾಡೋಣ—ಭವಿಷ್ಯ ನಿರ್ಮಿಸೋಣ’ ಎಂಬ ಘೋಷಣೆಯೊಂದಿಗೆ ತ್ಯಾಜ್ಯವನ್ನು ಕಡಿಮೆ ಮಾಡುವುದು, ಹಸಿ-ಒಣ ತ್ಯಾಜ್ಯವನ್ನು ವಿಂಗಡಿಸುವುದು ಹಾಗೂ ಮರುಬಳಕೆಗೆ ಆದ್ಯತೆ ನೀಡುವಂತೆ ವಿದ್ಯಾರ್ಥಿಗಳು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಂತೇಶ್ ದೇವಗಿರಿ, ಇಎಸ್ಐ, ಗದಗ ಗ್ರಾಮೀಣ ವಲಯ, ಖಾಜಾಮುಲ್ಲಾ, ಪೊಲೀಸ್ ಸಿಬ್ಬಂದಿ, ಸಂಸ್ಥಾಪಕ ಅಧ್ಯಕ್ಷ ಪ್ರೊ. ಎಸ್.ವೈ. ಚಿಕ್ಕಟ್ಟಿ, ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ ಹಾಗೂ ಶ್ರೀಮತಿ ರಿಯಾನಾ ಮುಲ್ಲಾ, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಶಿಕ್ಷಕ ರಾಹುಲ್ ಮಾಡಳ್ಳಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತ ಹಾಗೂ ವಂದನಾರ್ಪಣೆ ನೆರವೇರಿಸಿದರು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ, ಶಿಸ್ತು, ಆರೋಗ್ಯಕರ ಜೀವನಶೈಲಿ ಹಾಗೂ ಪರಿಸರ ಪ್ರಜ್ಞೆ ಬೆಳೆಸುವ ಉದ್ದೇಶದಿಂದ ನಡೆಯುತ್ತಿರುವ ‘ಕ್ರಾಂತಿ ದಿನಗಳು’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
