Home » News » ಗದುಗಿನ ಪಂಡಿತ. ಎಂ. ಕಲ್ಲಿನಾಥಶಾಸ್ತ್ರಿಗಳಿಗೆ “ಶ್ರೀ ಕುಮಾರವ್ಯಾಸ ಪ್ರಶಸ್ತಿ” ಗೌರವ

ಗದುಗಿನ ಪಂಡಿತ. ಎಂ. ಕಲ್ಲಿನಾಥಶಾಸ್ತ್ರಿಗಳಿಗೆ “ಶ್ರೀ ಕುಮಾರವ್ಯಾಸ ಪ್ರಶಸ್ತಿ” ಗೌರವ

by CityXPress
0 comments

ಗದುಗ: ಗದುಗಿನ ಪ್ರಸಿದ್ಧ ಪುರಾಣಿಕ, ಪ್ರವಚನಕಾರ ಮತ್ತು ಕಲಾವಿದರಾದ ಶ್ರೀ ಪಂ. ಎಂ. ಕಲ್ಲಿನಾಥಶಾಸ್ತ್ರಿ ಅವರಿಗೆ 2025-26ನೇ ಸಾಲಿನ ಪ್ರತಿಷ್ಠಿತ “ಶ್ರೀ ಕುಮಾರವ್ಯಾಸ ಪ್ರಶಸ್ತಿ” ಲಭಿಸಿರುವುದು ಜಿಲ್ಲೆಯಷ್ಟೇ ಅಲ್ಲದೆ ಸಮಗ್ರ ಕನ್ನಡ ಸಾಹಿತ್ಯ-ಸಾಂಸ್ಕೃತಿಕ ವಲಯಕ್ಕೆ ಹೆಮ್ಮೆಯ ವಿಷಯವಾಗಿದೆ.

ಗದುಗಿನ ಆರಾಧ್ಯ ದೈವವಾಗಿರುವ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ ಗರಡಿಯಲ್ಲಿ ಸುಮಾರು 12 ವರ್ಷಗಳ ಕಾಲ ಕಲ್ಲಿನಾಥಶಾಸ್ತ್ರಿಗಳು ಪುರಾಣ, ಪ್ರವಚನ, ಕಥಾ ಕೀರ್ತನ, ಸಂಗೀತ ಸಾಹಿತ್ಯ ಹಾಗೂ ನಾಟ್ಯಕಲೆಗಳನ್ನ ಸಮಗ್ರವಾಗಿ ಅಭ್ಯಾಸ ಮಾಡಿದ್ದು, ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಕಲೆಯ ವಿವಿಧ ಆಯಾಮಗಳನ್ನು ಆಳವಾಗಿ ಅರ್ಥೈಸಿಕೊಂಡಿದ್ದಾರೆ. ಈ ದೃಢವಾದ ಪಾಠಶಾಲೆಯೇ ಅವರ ಮುಂದಿನ ಕಲಾ ಜೀವನಕ್ಕೆ ಭದ್ರ ಅಡಿಪಾಯವಾಯಿತು.

ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಅವರು ಕನ್ನಡ ನಾಡು-ನುಡಿ, ಭಾಷೆ ಮತ್ತು ಸಂಸ್ಕೃತಿಯನ್ನು ಜನಮನಗಳಲ್ಲಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಶರಣರು, ಸಂತರು ಮತ್ತು ಮಹನೀಯರ ಕಾವ್ಯಗಳನ್ನು ಭಾವಪೂರ್ಣವಾಗಿ, ಮನಮುಟ್ಟುವ ರೀತಿಯಲ್ಲಿ ಪ್ರಸ್ತುತಪಡಿಸುವ ಮೂಲಕ ಸಾವಿರಾರು ಶ್ರೋತೃಗಳ ಹೃದಯಗಳನ್ನು ಗೆದ್ದಿದ್ದಾರೆ. ಸುಮಾರು 52 ವರ್ಷಗಳ ಕಾಲ ನಿರಂತರವಾಗಿ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ತಮ್ಮ ಜೀವನವನ್ನೇ ಈ ಕ್ಷೇತ್ರಕ್ಕೆ ಅರ್ಪಿಸಿರುವುದು ಗಮನಾರ್ಹವಾಗಿದೆ.

ಸಂತ ಶರೀಫ್, ಸಿದ್ಧಾರೂಡ ಮಹಾತ್ಮೆ, ರುಂಡ ಮಾಲಾಧರ, ಗುಡ್ಡಾಪುರದ ದಾನಮ್ಮದೇವಿ, ಸಂತ ತುಕಾರಾಮ್, ಗೊಡಚಿ ಶ್ರೀ ವೀರಭದ್ರೇಶ್ವರ ಸೇರಿದಂತೆ ಅನೇಕ ಮಹನೀಯರ ಕುರಿತು 100ಕ್ಕೂ ಅಧಿಕ ಧ್ವನಿ ಸುರುಳಿಗಳನ್ನು ನಿರ್ಮಿಸಿ, ಆಧ್ಯಾತ್ಮಿಕ ಸಾಹಿತ್ಯವನ್ನು ಜನಸಾಮಾನ್ಯರ ಮನೆಮಾತಾಗಿಸುವಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.

banner

ಇದಲ್ಲದೆ, ಗುಲಬರ್ಗಾ, ಧಾರವಾಡ ಹಾಗೂ ಬೆಂಗಳೂರಿನ ಆಕಾಶವಾಣಿ ಕೇಂದ್ರಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ತಮ್ಮ ಕಲೆಗಾದ ವಿಶಾಲ ವೇದಿಕೆಯನ್ನು ನಿರ್ಮಿಸಿಕೊಂಡಿದ್ದಾರೆ. ಅವರ ಈ ದೀರ್ಘಕಾಲದ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಹಾಗೂ ವಿವಿಧ ಪ್ರತಿಷ್ಠಿತ ಸಂಸ್ಥೆಗಳು ಅವರಿಗೆ “ಕರ್ನಾಟಕ ಕಲಾಶ್ರೀ”, “ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ 2014”, “ದ.ರಾ. ಬೇಂದ್ರೆ ಪ್ರಶಸ್ತಿ”, “ಶಿವಲಿಂಗಶ್ರೀ”, “ವಾಗ್ವಿಭೂಷಣ”, “ಬಸವತತ್ವ ರತ್ನಾಕರ”, “ಪ್ರವಚನ ಸಾಹಿತ್ಯ ರತ್ನ”, “ಕುಮಾರ ಶ್ರೀ” ಸೇರಿದಂತೆ ಅನೇಕ ಗೌರವಗಳು ಮತ್ತು ಬಿರುದುಗಳನ್ನು ನೀಡಿ ಸನ್ಮಾನಿಸಿವೆ.

ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಜ್ಯ ಸರ್ಕಾರದಿಂದ 2025-26ನೇ ಸಾಲಿನ “ಶ್ರೀ ಕುಮಾರವ್ಯಾಸ ಪ್ರಶಸ್ತಿ” ನೀಡಿ ಅವರನ್ನು ಗೌರವಿಸಿರುವುದು ಅವರ ಕಲಾ ಜೀವನದ ಮತ್ತೊಂದು ಮೈಲುಗಲ್ಲಾಗಿದೆ. ಈ ಪ್ರಶಸ್ತಿ ಅವರ ದೀರ್ಘಕಾಲದ ಸೇವೆ, ಸಾಧನೆ ಮತ್ತು ಕಲೆಯ ಮೇಲಿನ ಅಪಾರ ನಿಷ್ಠೆಗೆ ದೊರೆತ ಮಾನ್ಯತೆ ಎನ್ನಬಹುದು.

ಶ್ರೀ ಕಲ್ಲಿನಾಥಶಾಸ್ತ್ರಿಗಳ ಈ ಸಾಧನೆಗೆ ಅವರ ಶಿಷ್ಯರು, ಅಭಿಮಾನಿಗಳು, ಹಿತೈಷಿಗಳು ಹಾಗೂ ಬಂಧುಬಾಂಧವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಸೇವೆ ಇದೇ ರೀತಿಯಾಗಿ ಮುಂದುವರಿಯಲಿ ಹಾಗೂ ಗುರುಗಳಾದ ಶ್ರೀ ಪಂ. ಪಂಚಾಕ್ಷರಿ ಗವಾಯಿಗಳು ಮತ್ತು ಡಾ. ಪಂ. ಪುಟ್ಟರಾಜ ಗವಾಯಿಗಳ ಆಶೀರ್ವಾದದಿಂದ ಅವರಿಗೆ ಇನ್ನಷ್ಟು ಆರೋಗ್ಯ, ಆಯುಷ್ಯ ಮತ್ತು ಕಲಾ ಸಂಪತ್ತು ಲಭಿಸಲಿ ಎಂದು ಎಲ್ಲರೂ ಹಾರೈಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb