ಮುಂಡರಗಿ:
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಜಾಗೃತ ಸರ್ಕಲ್ ಸಮೀಪದ ಜನನಿಬೀಡ ಪ್ರದೇಶದಲ್ಲಿ ಅಳವಡಿಕೆ ಮಾಡಲಾಗಿದ್ದ ಮೊಬೈಲ್ ಟವರ್ ಕುಸಿದು ಬಿದ್ದ ಪರಿಣಾಮ ದೊಡ್ಡ ಅನಾಹುತ ತಪ್ಪಿದ ಘಟನೆ ನಡೆದಿದೆ.
ಇಂದು ಸಂಜೆ ವೇಳೆಯಲ್ಲಿ ಬಿಸಿದ ಭಾರಿ ಗಾಳಿಯ ಪರಿಣಾಮವಾಗಿ ಮನೆ ಮೇಲ್ಚಾವಣೆಯಲ್ಲಿ ಸ್ಥಾಪಿಸಲಾಗಿದ್ದ ಟವರ್ ಆಕಸ್ಮಿಕವಾಗಿ ಧರೆಗೆ ಉರುಳಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

ಟವರ್ ಪತನಗೊಂಡ ವೇಳೆ ಮನೆ ಮುಂದೆ ನಿಲ್ಲಿಸಲಾಗಿದ್ದ ಹಲವು ಬೈಕ್‌ಗಳು ಜಖಂ ಆಗಿದ್ದು, ಆರ್ಥಿಕ ನಷ್ಟ ಸಂಭವಿಸಿದೆ.
ಘಟನೆ ನಡೆದ ಕ್ಷಣದಲ್ಲಿ ಜನಸಂದಣಿ ಕಡಿಮೆ ಇರುವುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸ್ಥಳೀಯರ ನಿಟ್ಟುಸಿರಿಗೆ ಕಾರಣವಾಗಿದೆ.
ಆದರೆ ಈ ಘಟನೆಯಿಂದಾಗಿ ಕೆಲಕಾಲ ಭಾರೀ ಟ್ರಾಫಿಕ್ ಜಾಮ್ ಉಂಟುಮಾಡಿದ್ದು, ವಾಹನ ಸವಾರರು ಪರದಾಡುವಂತಾಯಿತು.
ಈ ಘಟನೆಗೆ ಸಂಬಂಧಿಸಿದಂತೆ ಮುಂಡರಗಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನನಿಬೀಡ ಪ್ರದೇಶದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ, ನಿಯಮ ಬಾಹೀರವಾಗಿ ಖಾಸಗಿ ಕಂಪನಿಗೆ ಮೊಬೈಲ್ ಟವರ್ ಅಳವಡಿಸಲು ಅವಕಾಶ ನೀಡಿರುವುದೇ ಈ ಅವಾಂತರಕ್ಕೆ ಕಾರಣವೆಂದು ಆರೋಪಿಸಲಾಗಿದೆ.
“ಇಂತಹ ಟವರ್‌ಗಳನ್ನು ಜನಸಂದಣಿ ಇರುವ ಪ್ರದೇಶಗಳಲ್ಲಿ ಅಳವಡಿಸಲು ಅನುಮತಿ ನೀಡಬಾರದಿತ್ತು. ಸುರಕ್ಷತೆ ಕುರಿತು ಯಾವುದೇ ಪರಿಶೀಲನೆ ನಡೆಸದೇ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ,” ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಇದೇ ವೇಳೆ, ಮುಂದಾಲೋಚನೆಯ ಕೊರತೆ ಮತ್ತು ನಿಯಮಗಳ ಉಲ್ಲಂಘನೆಯಿಂದಾಗಿ ಭಾರೀ ಅಪಾಯ ಎದುರಾಗಬಹುದಾಗಿತ್ತು ಎಂಬ ಆತಂಕವೂ ವ್ಯಕ್ತವಾಗಿದೆ.
ಸದ್ಯ ಘಟನೆಯ ನಂತರ ಸ್ಥಳೀಯರು ಪುರಸಭೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.
ಒಟ್ಟಾರೆ, ಈ ಘಟನೆ ಪುರಸಭೆಗಳ ನಿರ್ಲಕ್ಷ್ಯ ಮತ್ತು ನಗರ ಯೋಜನೆಗಳ ಲೋಪದರ್ಶನಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದು, ಸಾರ್ವಜನಿಕ ಸುರಕ್ಷತೆ ಕುರಿತು ತಕ್ಷಣದ ಗಮನ ಅಗತ್ಯವಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
