ಗದಗ:
ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಜಾತಿ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಾಲ್ಮೀಕಿ ಸಮಾಜದವರು ಜಿಲ್ಲಾ ಪೊಲೀಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಗದಗ ಜಿಲ್ಲಾ ಶ್ರೀ ವಾಲ್ಮೀಕಿ ಮತ್ತು ನಾಯಕ ಸೇವಾ ಸಂಘ (ರಿ.) ನೇತೃತ್ವದಲ್ಲಿ ಅಧ್ಯಕ್ಷರಾದ ಬಸವರಾಜ ಮೈಲಾರಪ್ಪ ಬೆಳಧಡಿ ಹಾಗೂ ಪದಾಧಿಕಾರಿಗಳು ಮನವಿ ಸಲ್ಲಿಸಿ, ಗ್ರಾಮದಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ಖಂಡಿಸಿದ್ದಾರೆ. ಮನವಿಯಲ್ಲಿ, ವಾಲ್ಮೀಕಿ ಸಮಾಜ ಮತ್ತು ಪರಿಶಿಷ್ಟ ಜಾತಿಯ ಸಮುದಾಯದವರು ಈವರೆಗೂ ಯಾವುದೇ ತಂಟೆ-ತಕರಾರುಗಳಿಲ್ಲದೆ ಸೌಹಾರ್ದದಿಂದ ಜೀವನ ಸಾಗಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಆದರೆ, ಕ್ಷುಲ್ಲಕ ಕಾರಣಕ್ಕೆ ಬಹುಸಂಖ್ಯಾತ ಪರಿಶಿಷ್ಟ ಜಾತಿಯ ಕೆಲವರು ನೂರಾರು ಸಂಖ್ಯೆಯಲ್ಲಿ ವಾಲ್ಮೀಕಿ ಸಮಾಜದ ಕಾಲೋನಿಗೆ ನುಗ್ಗಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ ಸಮಾಜದ ಹಿರಿಯರು, ಮಹಿಳೆಯರು ಹಾಗೂ ಯುವಕರು ಹಲ್ಲೆಗೆ ಒಳಗಾಗಿದ್ದು, ಭೀತಿ ವಾತಾವರಣ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ, ಕೆಲ ಕಿಡಿಗೇಡಿಗಳು ವೈಯಕ್ತಿಕ ವೈಷಮ್ಯದಿಂದ ಈ ಘಟನೆಯಲ್ಲಿ ಸಂಬಂಧಿಸದವರ ಹೆಸರನ್ನೂ ಪ್ರಕರಣದಲ್ಲಿ ಸೇರಿಸಿರುವುದಾಗಿ ಆರೋಪಿಸಲಾಗಿದೆ. ನಿರಪರಾಧಿಗಳನ್ನು ಪ್ರಕರಣದಿಂದ ಕೈಬಿಟ್ಟು, ನಿಜವಾದ ಆರೋಪಿಗಳನ್ನು ಮಾತ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಾಲ್ಮೀಕಿ ಸಮಾಜ ಒತ್ತಾಯಿಸಿದೆ.

ಘಟನೆಯ ಹಿನ್ನೆಲೆ ಪರಿಶೀಲಿಸಿ ನ್ಯಾಯ ಒದಗಿಸುವಂತೆ ಹಾಗೂ ಗ್ರಾಮದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಮುಂದಿನ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

