ಗದಗ: ಒಬ್ಬ ವ್ಯಕ್ತಿ ಕಾಲೇಜಿನ ಪ್ರಾಚಾರ್ಯರಾಗಿ ಹೇಗೆ ಆದರ್ಶ ಆಡಳಿತವನ್ನು ನಡೆಸಬೇಕು ಎಂಬುದಕ್ಕೆ ಪ್ರೊ. ಪ್ರೇಮಾನಂದ ರೋಣದ ಅವರು ಸಾಕ್ಷಿಭೂತರಾಗಿದ್ದಾರೆ ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸೊಸೈಟಿಯ ಚೇರ್‌ಮನ್ ಪ್ರೊ. ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟರು.
ನಗರದ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ೨೦೨೩ರ ಶೈಕ್ಷಣಿಕ ವರ್ಷದಿಂದ ಅಧಿಕಾರ ವಹಿಸಿಕೊಂಡು, ೨೦೨೬ರ ಶೈಕ್ಷಣಿಕ ವರ್ಷದವರೆಗೆ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಪ್ರೊ. ಪ್ರೇಮಾನಂದ ರೋಣದ ಅವರು ನಿಸ್ಪೃಹ ಮತ್ತು ನಿಷ್ಠಾವಂತ ಪ್ರಾಚಾರ್ಯರಾಗಿ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ಪ್ರೀತಿ ಪಾತ್ರರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ದಕ್ಷತೆ ಮತ್ತು ಸೇವಾತತ್ಪರತೆ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಪಾತ್ರವಹಿಸಿದೆ ಎಂದು ಅವರು ಹೇಳಿದರು.

ಪ್ರೊ. ಪ್ರೇಮಾನಂದ ರೋಣದ ಅವರಿಗೆ ನೀಡಲಾದ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಪ್ರೊ. ರಾಜೇಶ ಕುಲಕರ್ಣಿ, ಅವರ ಆಡಳಿತ ಶೈಲಿ ಮತ್ತು ನೈತಿಕ ಮೌಲ್ಯಗಳನ್ನು ಶ್ಲಾಘಿಸಿ, ಸಂಸ್ಥೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಪ್ರೊ. ಪ್ರೇಮಾನಂದ ರೋಣದ ಅವರು, ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯಿಂದ ತಮಗೆ ದೊರೆತ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿ ಧನ್ಯವಾದಗಳನ್ನು ಅರ್ಪಿಸಿದರು.

ಈ ಭಾವಪೂರ್ಣ ಸನ್ಮಾನ ಸಮಾರಂಭದಲ್ಲಿ ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ಪ್ರಾಚಾರ್ಯ ಪ್ರೊ. ಪುನೀತ್ ದೇಶಪಾಂಡೆ, ಆಡಳಿತಾಧಿಕಾರಿ ಶ್ರೀ ಎಂ.ಸಿ. ಹಿರೇಮಠ, ನಿರ್ದೇಶಕರುಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ ಮತೀನ್ ಮುಲ್ಲಾ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
