Home » News » ಕೆಲಸದಾಕೆಯನ್ನು ನಂಬಿ ಮನೆಯ ಬೀಗದ ಕೀಲಿ ಕೊಟ್ಟಿದ್ದೇ ತಪ್ಪಾಯಿತಾ? ಮಾಲೀಕನ ಮನೆಯನ್ನೇ ದೋಚಿದ ಮನೆಗೆಲಸದಾಕೆ..!ಮಾಲೀಕರ ಜೊತೆಗೇ ಠಾಣೆಗೆ ಬಂದು ದೂರು ನೀಡಿದ ‘ಮಳ್ಳಿ’..! 21 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಮುಂಡರಗಿ ಪೊಲೀಸರು..!

ಕೆಲಸದಾಕೆಯನ್ನು ನಂಬಿ ಮನೆಯ ಬೀಗದ ಕೀಲಿ ಕೊಟ್ಟಿದ್ದೇ ತಪ್ಪಾಯಿತಾ? ಮಾಲೀಕನ ಮನೆಯನ್ನೇ ದೋಚಿದ ಮನೆಗೆಲಸದಾಕೆ..!ಮಾಲೀಕರ ಜೊತೆಗೇ ಠಾಣೆಗೆ ಬಂದು ದೂರು ನೀಡಿದ ‘ಮಳ್ಳಿ’..! 21 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಮುಂಡರಗಿ ಪೊಲೀಸರು..!

by CityXPress
0 comments

ಗದಗ/ಮುಂಡರಗಿ: 12 ವರ್ಷಗಳ ಕಾಲ ಮನೆ ಕೆಲಸ ಮಾಡಿಕೊಂಡಿದ್ದಾಕೆಯನ್ನು ನಂಬಿ ಮನೆಯ ಬೀಗದ ಕೀಲಿ ನೀಡಿದ್ದೇ ಮನೆಯ ಮಾಲೀಕರಿಗೆ ಮುಳುವಾಯಿತಾ? ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಕಳ್ಳತನಕ್ಕೆ ಸಂಚು ರೂಪಿಸಿದ್ದಾಳೆ ಎನ್ನಲಾದ ಮನೆಗೆಲಸದಾಕೆ, ಕಳ್ಳತನದ ಬಳಿಕವೂ ಯಾರಿಗೂ ಅನುಮಾನ ಬಾರದಂತೆ ಮನೆಯವರ ಜೊತೆಯಲ್ಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವ ನಾಟಕವಾಡಿದ್ದಾಳೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವರದಿ: ಮಹಲಿಂಗೇಶ ಹಿರೇಮಠ. ಗದಗ

ಹೌದು, ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಎ.ಡಿ. ನಗರದ ಭೂಮರೆಡ್ಡಿ ಶಾಲೆ ಸಮೀಪ ಶಿಕ್ಷಣ ಇಲಾಖೆಯ ಎಫ್‌ಡಿಎ ಆಗಿರುವ ವಸಂತ ಮೊರಬ ಅವರ ಮನೆಯಲ್ಲಿ ಆ.25ರಂದು ಹಗಲು ಹೊತ್ತಿನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಮುಂಡರಗಿ ಪೊಲೀಸರು ತ್ವರಿತವಾಗಿ ಬೇಧಿಸಿದ್ದಾರೆ.

ಮನೆಯ ಮಾಲೀಕ ದಂಪತಿಗಳಿಬ್ಬರೂ ಮನೆಯಲ್ಲಿ ಇಲ್ಲದ ಸಮಯವನ್ನು ಬಳಸಿಕೊಂಡ ಕಳ್ಳರು, ಮನೆಯ ಮುಂಬಾಗಿಲು ಅಥವಾ ಹಿಂಬಾಗಿಲಿನ ಚಿಲಕ ಮುರಿಯದೇ, ಮುಂಬಾಗಿಲಿನ ಇಂಟರ್‌ಲಾಕ್‌ ಅನ್ನು ತೆರೆದು ಮನೆಯೊಳಗೆ ಪ್ರವೇಶಿಸಿದ್ದರು. ಬಳಿಕ ಸುಮಾರು ₹14.80 ಲಕ್ಷ ಮೌಲ್ಯದ 185 ಗ್ರಾಂ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

banner

ಆದರೆ, ಮನೆಯ ಬಾಗಿಲು ಒಡೆದ ಯಾವುದೇ ಗುರುತು ಇಲ್ಲದಿರುವುದು ಹಾಗೂ ಮನೆಯ ಬೀಗದ ಕೀಲಿ ಮಾಲೀಕರು ಮತ್ತು ಮನೆಗೆಲಸದಾಕೆಯ ಬಳಿ ಮಾತ್ರ ಇತ್ತು ಎನ್ನುವ ಮಾಹಿತಿ ಪೊಲೀಸರ ತನಿಖೆಗೆ ಪ್ರಮುಖ ಸುಳಿವಾಗಿತ್ತು.

ಮಾಲೀಕರಿಲ್ಲದ  ಸಮಯ ಗಮನಿಸಿ ಕಳ್ಳತನದ ಸಂಚು?

ಸುಮಾರು 12 ವರ್ಷಗಳಿಂದ ಅದೇ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಲಲಿತಾ ಈರಪ್ಪ ಗೊಂಡಬಾಳ (47), ಮನೆಯ ಮಾಲೀಕ ದಂಪತಿಗಳಿಬ್ಬರೂ ಹೊರಗಡೆ ತೆರಳಿರುವುದನ್ನು ಗಮನಿಸಿ ಕಳ್ಳತನಕ್ಕೆ ಸಂಚು ರೂಪಿಸಿದ್ದಾಳೆ ಎನ್ನಲಾಗಿದೆ.

ಕಳ್ಳತನ ನಡೆದ ದಿನ ತಾನು ಮನೆ ಕೆಲಸಕ್ಕೆ ಬಂದೇ ಇಲ್ಲ ಎಂದು ಲಲಿತಾ ಮನೆಯವರು ಹಾಗೂ ಪೊಲೀಸರ ಬಳಿ ಹೇಳಿದ್ದಾಳೆ ಎನ್ನಲಾಗಿದೆ.

ಆದರೆ, ಮನೆಯ ಬೀಗದ ಕೀಲಿ, ಮನೆಯ ಒಳಗಿನ ವ್ಯವಸ್ಥೆ ಹಾಗೂ ಬಂಗಾರದ ಆಭರಣಗಳ ಬಗ್ಗೆ ಆಕೆಗೆ ಇದ್ದ ಮಾಹಿತಿ ಪೊಲೀಸರ ಅನುಮಾನವನ್ನು ಮತ್ತಷ್ಟು ಗಾಢಗೊಳಿಸಿತ್ತು.

ಕಳ್ಳತನದ ಬಳಿಕವೂ ಮಾಲೀಕರ ಜೊತೆಯಲ್ಲೇ ಠಾಣೆಗೆ!

ಕಳ್ಳತನದ ವಿಷಯ ತಿಳಿದ ಬಳಿಕ ಮನೆಯ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ, ಲಲಿತಾ ಕೂಡ ಅವರ ಜೊತೆಗೇ ಪೊಲೀಸ್ ಠಾಣೆಗೆ ತೆರಳಿದ್ದಾಳೆ ಎನ್ನಲಾಗಿದೆ.

ಯಾವುದೇ ಅನುಮಾನ ಮೂಡದಂತೆ ಮನೆಯವರೊಂದಿಗೆ ನಿಂತು, ಕಳ್ಳತನದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ದೂರು ನೀಡುವ ಪ್ರಕ್ರಿಯೆಯಲ್ಲೂ ಸಹಕರಿಸಿದ್ದಾಳೆ ಎನ್ನಲಾಗಿದೆ.

ಅಂದರೆ, ಕೃತ್ಯ ಎಸಗಿದವಳೇ ಕಳ್ಳತನದ ತನಿಖೆಗೆ ಸಹಕರಿಸುವ ವ್ಯಕ್ತಿಯಂತೆ ವರ್ತಿಸಿದ್ದಾಳೆ ಎನ್ನುವುದು ಪ್ರಕರಣದ ಕುತೂಹಲಕಾರಿ ತಿರುವಾಗಿದೆ.

ಆಭರಣಗಳ ಲೆಕ್ಕವೂ ಕೆಲಸದಾಕೆಗೆ ಗೊತ್ತಿತ್ತಂತೆ!

ಮನೆಯವರು ಲಲಿತಾಳನ್ನು ಕೇವಲ ಕೆಲಸದಾಕೆಯಾಗಿ ನೋಡದೆ, ಕುಟುಂಬದ ಸದಸ್ಯೆಯಂತೆ ನಂಬಿಕೆಯಿಂದ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ವರ್ಷಗಳ ಕಾಲ ಮನೆಯೊಳಗೆ ಓಡಾಡುತ್ತಿದ್ದ ಕಾರಣ, ಮನೆಯಲ್ಲಿದ್ದ ಬಂಗಾರದ ಆಭರಣಗಳ ಬಗ್ಗೆ ಆಕೆಗೆ ಸಾಕಷ್ಟು ಮಾಹಿತಿ ಇತ್ತು ಎನ್ನಲಾಗಿದೆ.

ಯಾವ ಆಭರಣ ಎಲ್ಲಿದೆ, ಅದರ ಹೆಸರು ಏನು, ಎಷ್ಟು ಆಭರಣಗಳಿವೆ ಎಂಬುದರ ಬಗ್ಗೆಯೂ ಲಲಿತಾಳಿಗೆ ಮಾಹಿತಿ ಇತ್ತು ಎನ್ನಲಾಗಿದೆ.

ಇನ್ನೂ ಗಮನಾರ್ಹ ಸಂಗತಿಯೆಂದರೆ, ಕಳ್ಳತನದ ನಂತರ ಪೊಲೀಸರು ಆಭರಣಗಳ ವಿವರ ಕೇಳಿದಾಗ ಮನೆಯವರಿಗಿಂತಲೂ ಆಭರಣಗಳ ಹೆಸರು ಮತ್ತು ವಿವರಗಳನ್ನು ಲಲಿತಾಳೇ ಹೆಚ್ಚಿನ ಮಟ್ಟಿಗೆ ತಿಳಿಸಿದ್ದಾಳೆ ಎನ್ನಲಾಗಿದೆ.ಇದೇ ಅಂಶವೂ ಪೊಲೀಸರ ತನಿಖೆಯಲ್ಲಿ ಅನುಮಾನಕ್ಕೆ ಕಾರಣವಾಗಿತ್ತು.

ಮಳ್ಳಿಯಂತೆ ನಾಟಕ… ಕೊನೆಗೆ ಪೊಲೀಸರ ಅನುಮಾನ!

ಕಳ್ಳತನ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮನೆಯವರ ಫಿಂಗರ್‌ಪ್ರಿಂಟ್ಸ್ ಸೇರಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಮುಂದಾದರು.

ಈ ವೇಳೆ ತನಿಖಾಧಿಕಾರಿಗಳಿಗೆ ಲಲಿತಾಳ ನಡೆ-ನುಡಿಗಳಲ್ಲಿ ಕೆಲವು ಅನುಮಾನಾಸ್ಪದ ಅಂಶಗಳು ಕಂಡುಬಂದಿದ್ದವು ಎನ್ನಲಾಗಿದೆ. ವಿಶೇಷವಾಗಿ ಮನೆಯೊಳಗಿನ ಫಿಂಗರ್‌ಪ್ರಿಂಟ್ಸ್ ಹಾಗೂ ಇತರ ಸಾಕ್ಷ್ಯಾಧಾರಗಳ ಸಂಗ್ರಹಕ್ಕೆ ಲಲಿತಾ ನಿರೀಕ್ಷಿತ ರೀತಿಯಲ್ಲಿ ಸಹಕರಿಸಿಲ್ಲ ಎನ್ನಲಾಗಿದೆ. ಈ ನಡೆ ಪೊಲೀಸರ ಅನುಮಾನವನ್ನು ಮತ್ತಷ್ಟು ಬಲಪಡಿಸಿತು.

ಬಳಿಕ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಲಲಿತಾಳ ಚಲನವಲನ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದಾಗ ಕಳ್ಳತನದ ಹಿಂದಿನ ಸಂಚು ಬಯಲಿಗೆ ಬಂದಿದೆ ಎನ್ನಲಾಗಿದೆ.

8 ಗಂಟೆಯಲ್ಲಿ ಆರೋಪಿತೆ ಪತ್ತೆ; 21 ಗಂಟೆಯಲ್ಲಿ ಚಿನ್ನ ವಶ!

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರು ಆರೋಪಿತರ ಪತ್ತೆ ಹಾಗೂ ಕಳುವಾದ ಮಾಲು ವಶಪಡಿಸಿಕೊಳ್ಳಲು ವಿಶೇಷ ತಂಡ ರಚಿಸಿದ್ದರು.

ನರಗುಂದ ಉಪವಿಭಾಗದ ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಯ್ಯನಗೌಡ ಪಾಟೀಲ, ಪಿಎಸ್‌ಐ ಬಿ.ಎನ್. ಯಳವತ್ತಿ ಹಾಗೂ ಅಪರಾಧ ದಳದ ಸಿಬ್ಬಂದಿ ತನಿಖೆ ಕೈಗೊಂಡರು.

ಪ್ರಕರಣ ದಾಖಲಾಗಿದ ಕೇವಲ 8 ಗಂಟೆಗಳಲ್ಲಿ ಆರೋಪಿತೆ ಲಲಿತಾಳನ್ನು ಪತ್ತೆಹಚ್ಚಿದ ಪೊಲೀಸರು, ಪ್ರಕರಣ ದಾಖಲಾದ 21 ಗಂಟೆಗಳಲ್ಲೇ ಕಳುವಾಗಿದ್ದ 185 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಒಟ್ಟು ₹14.80 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ನಂಬಿಕೆ ಇಡಬಾರದೇ? ಎಚ್ಚರಿಕೆ ವಹಿಸಬೇಕೇ?

ಮನೆಯ ಕೆಲಸದವರನ್ನು ನಂಬಿ ಮನೆಯ ಬೀಗದ ಕೀಲಿ ನೀಡಿದ್ದೇ ತಪ್ಪಾಯಿತಾ?

ವರ್ಷಗಳ ಕಾಲ ಮನೆ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕುಟುಂಬದ ಸದಸ್ಯರಂತೆ ನಂಬುವುದು ತಪ್ಪಲ್ಲ. ಆದರೆ, ಮನೆಯ ಕೀಲಿ, ಬಂಗಾರ ಹಾಗೂ ಬೆಲೆಬಾಳುವ ವಸ್ತುಗಳ ಸಂಪೂರ್ಣ ಮಾಹಿತಿ ಒಬ್ಬರ ಬಳಿ ಇರುವಂತೆ ಮಾಡುವುದು ಭದ್ರತೆಯ ದೃಷ್ಟಿಯಿಂದ ಅಪಾಯಕ್ಕೆ ಕಾರಣವಾಗಬಹುದು.

ಹೀಗಾಗಿ, ಮನೆಗೆ ಕೆಲಸಕ್ಕೆ ಬರುವವರ ವಿವರಗಳನ್ನು ದಾಖಲಿಸಿಕೊಳ್ಳುವುದು, ಹೆಚ್ಚುವರಿ ಕೀಲಿಗಳನ್ನು ಸುರಕ್ಷಿತವಾಗಿ ಇಡುವುದು, ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳ ಬಗ್ಗೆ ಅನಗತ್ಯ ಮಾಹಿತಿ ಹಂಚಿಕೊಳ್ಳದಿರುವುದು ಹಾಗೂ ಸಾಧ್ಯವಾದಲ್ಲಿ ಸಿಸಿಟಿವಿ ಸೇರಿದಂತೆ ಭದ್ರತಾ ವ್ಯವಸ್ಥೆ ಅಳವಡಿಸಿಕೊಳ್ಳುವುದು ಒಳಿತು.

ಆದರೆ ಎಲ್ಲ ಮನೆಗೆಲಸದವರನ್ನೂ ಅನುಮಾನಿಸಬೇಡಿ

ಈ ಘಟನೆಯ ಆಧಾರದಲ್ಲಿ ಎಲ್ಲ ಮನೆಗೆಲಸದವರನ್ನೂ ಅನುಮಾನಿಸುವುದು ಅಥವಾ ಇಡೀ ವರ್ಗಕ್ಕೆ ಕೆಟ್ಟ ಹೆಸರು ತರುವುದು ಸರಿಯಲ್ಲ.

ಒಬ್ಬರ ಕೃತ್ಯದಿಂದ ಪ್ರಾಮಾಣಿಕವಾಗಿ ದುಡಿಯುತ್ತಿರುವ ಸಾವಿರಾರು ಮನೆಗೆಲಸದವರ ಮೇಲೆ ಅನುಮಾನದ ನೆರಳು ಬೀಳಬಾರದು. ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ವರ್ಗವನ್ನು ಹೊಣೆ ಮಾಡುವುದು ನ್ಯಾಯಸಮ್ಮತವಲ್ಲ.

ಹೀಗಾಗಿ ನಂಬಿಕೆ ಇರಲಿ… ಆದರೆ ಭದ್ರತೆಯಲ್ಲಿ ಎಚ್ಚರ ಇರಲಿ.

ಪೊಲೀಸ್ ತಂಡಕ್ಕೆ ಎಸ್ಪಿ ರೋಹನ್ ಜಗದೀಶ್ ಮೆಚ್ಚುಗೆ

ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿತಳನ್ನು ಪತ್ತೆಹಚ್ಚಿ, ಕೇವಲ 21 ಗಂಟೆಗಳಲ್ಲಿ ₹14.80 ಲಕ್ಷ ಮೌಲ್ಯದ 185 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡ ಮುಂಡರಗಿ ಪೊಲೀಸರ ಕಾರ್ಯಾಚರಣೆಗೆ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿ, ತನಿಖಾ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ, ಇನ್ಸ್‌ಪೆಕ್ಟರ್ ಅಯ್ಯನಗೌಡ ವಿ. ಪಾಟೀಲ, ಪಿಎಸ್‌ಐ ಬಿ.ಎನ್. ಯಳವತ್ತಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜೆ.ಐ. ಬಚ್ಚೇರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ಗಂಗಾಧರ ಮಜ್ಜಗಿ, ಹೆಚ್.ಕೆ. ನದಾಫ್, ಶರಣಪ್ಪ ಓಜನಹಳ್ಳಿ, ಭಾಗ್ಯ ಪತ್ತಾರ, ಎಂ.ಎ. ಕೋಟಗಿ ಹಾಗೂ ಜಿ.ಎಫ್. ಉಪ್ಪಾರ ಅವರು ಕಾರ್ಯನಿರ್ವಹಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb